Shubha Poonja: ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾಗೆ ಮಾತೃ ವಿಯೋಗ; ಅನಾರೋಗ್ಯದಿಂದ ನಿಧನ
ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಅವರ ತಾಯಿ ಸುಲೋಚನಾ ಪೂಂಜಾ (70) ಮಾ. 6ರಂದು ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.

ತಾಯಿಯೊಂದಿಗೆ ನಟಿ ಶುಭಾ ಪೂಂಜಾ.

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ (Shubha Poonja) ಅವರ ತಾಯಿ ಸುಲೋಚನಾ ಪೂಂಜಾ (70) ಮಾ. 6ರಂದು ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾ ಪೂಂಜಾ ನೋವು ತೋಡಿಕೊಂಡಿದ್ದಾರೆ. ʼʼಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ? ನೀನು ಇಲ್ಲದೆ ನನಗೆ ಜೀವನವಿಲ್ಲʼʼ ಎಂದು ಅವರು ಬರೆದುಕೊಂಡಿದ್ದಾರೆ. ಸುಲೋಚನಾ ಪೂಂಜಾ ಅವರ ಅಂತ್ಯಕ್ರಿಯೆ ಮಂಗಳೂರಿನಲ್ಲಿ ನೆರವೇರಿಸಲಾಗಿದೆ.
ಶುಭಾ ಪೂಂಜಾ ಹೇಳಿದ್ದೇನು?
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಯಿ ಜತೆಗಿನ ಫೋಟೊ ಹಂಚಿಕೊಂಡು ಶುಭಾ ಪೂಂಜಾ ದುಃಖ ತೋಡಿಕೊಂಡಿದ್ದಾರೆ. ʼʼಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ? ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ. 24 ಗಂಟೆ ನಿನ್ನ ಜತೇನೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ? ಎಲ್ಲಿ ಹೋಗಲಿ? ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ? ನೀನು ನನ್ನ ಯಾಕೆ ಬಿಟ್ಟು ಹೋದೆ? ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ?ʼʼ ಎಂದು ಬರೆದುಕೊಂಡಿದ್ದಾರೆ. ಶುಭಾ ಪೂಂಜಾ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ತಾಯಿಯೇ ಬೆನ್ನೆಲುಬು
ಮಂಗಳೂರು ಮೂಲದ ಶುಭಾ ಪೂಂಜಾ ಹುಟ್ಟಿದ್ದು, ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಮಾಡೆಲಿಂಗ್ ಮಾಡುತ್ತಿದ್ದ ಅವರು 2006ರಲ್ಲಿ ತೆರೆಕಂಡ ʼಜಾಕ್‌ಪಾಟ್ʼ ಕನ್ನಡ ಚಿತ್ರದ ಮೂಲಕ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಆಗಿನಿಂದಲೂ ತಾಯಿ ಸುಲೋಚನಾ ಬೆನ್ನುಲುಬಾಗಿ ನಿಂತಿದ್ದರು.
ಅದಾದ ಬಳಿಕ ಶುಭಾ ದುನಿಯಾ ವಿಜಯ್ ಜತೆ ತೆರೆಕಂಚಿಕೊಂಡಿದ್ದ ʼಚಂಡʼ ಚಿತ್ರ 2007ರಲ್ಲಿ ರಿಲೀಸ್ ಆಗಿ ಗಮನ ಸೆಳೆಯಿತು. ಮರುವರ್ಷ ರಿಲೀಸ್ ಆದ ʼಮೊಗ್ಗಿನ ಮನಸ್ಸುʼ ಸಿನಿಮಾ ಶುಭಾ ಪೂಂಜಾ ವೃತ್ತಿ ಜೀವನಕ್ಕೆ ಬಹುಮುಖ್ಯ ತಿರುವು ನೀಡಿತು. ರಾಧಿಕಾ ಪಂಡಿತ್, ಯಶ್ ಮತ್ತಿತರರು ನಟಿಸಿದ್ದ ಈ ಚಿತ್ರದಲ್ಲಿ ಶುಭಾ ರೇಣುಕಾ ಎನ್ನುವ ಹಳ್ಳಿಯ ಮುಗ್ಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಶುಭಾ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿತು. ಅದಾದ ಬಳಿಕ ಸ್ಯಾಂಡಲ್‌ವುಡ್‌ನ ಹಲವು ಚಿತ್ರಗಳ ಅವಕಾಶ ಗಿಟ್ಟಿಸಿಕೊಂಡರು.
ಸ್ಯಾಂಡಲ್‌ವುಡ್‌ಗಿಂತ ಮೊದಲು ತಮಿಳು ಚಿತ್ರಗಳಲ್ಲಿ ನಟಿಸಿದ್ದ ಶುಭಾ
ವಿಶೇಷ ಎಂದರೆ ಶುಭಾ ಕನ್ನಡ ಚಿತ್ರದ ಮೊದಲು ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. 2004ರಲ್ಲಿ ತೆರೆಕಂಡ ʼಮಚ್ಚಿʼ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಒಟ್ಟು 4 ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದ ಅವರು ಸದ್ಯ ಬಾಯ್ಸ್ vs ಗರ್ಲ್ಸ್ ಶೋದಲ್ಲಿ ಭಾಗವಹಿಸುತ್ತಿದ್ದಾರೆ.