ಕಿರುತೆರೆ ವೀಕ್ಷಕರಿಗೆ ಗುಡ್ ನ್ಯೂಸ್! 2 ಹೊಸ ಸೀರಿಯಲ್ ಘೋಷಿಸಿದ ಟಿ. ಎನ್. ಸೀತಾರಾಮ್; ಈ ಸೀರಿಯಲ್‌ಗಳು ಪ್ರಸಾರವಾಗುವುದು ಎಲ್ಲಿ?
ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಎರಡು ಹೊಸ ಧಾರಾವಾಹಿಗಳನ್ನು ಘೋಷಿಸಿದ್ದು, ಅವುಗಳಲ್ಲಿ ಒಂದಕ್ಕೆ ‘ಮುಂದಿನ ಅಧ್ಯಾಯ’ ಎಂದು ಹೆಸರಿಡಲಾಗಿದೆ. ಮೂರು ದಶಕಗಳ ತಮ್ಮ ಹಿಂದಿನ ಯಶಸ್ವಿ ಧಾರಾವಾಹಿಗಳ ಪಾತ್ರಗಳನ್ನು ಒಗ್ಗೂಡಿಸಿ ಈ ಕಥೆ ಹೆಣೆಯಲಾಗಿದೆ.
-
ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಅವರು, ಕೆಲ ಸಮಯದಿಂದ ನಿರ್ದೇಶನದಿಂದ ದೂರವಿದ್ದರು. ಇದೀಗ ಅವರು ಸದ್ದಿಲ್ಲದೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಹೊಸದಾಗಿ ಎರಡು ಧಾರಾವಾಹಿಗಳನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಅವುಗಳಲ್ಲಿ ಒಂದಕ್ಕೆ 'ಮುಂದಿನ ಅಧ್ಯಾಯ' ಎಂದು ಹೆಸರಿಡಲಾಗಿದೆ.
ಸೀತಾರಾಮ್ ಅವರ ಬಹುತೇಕ ಧಾರಾವಾಹಿಗಳ ಶೀರ್ಷಿಕೆಗಳು 'ಮ' ಅಕ್ಷರದಿಂದಲೇ ಆರಂಭವಾಗುತ್ತವೆ. ‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ’, ‘ಮಳೆಬಿಲ್ಲು’, ‘ಮುಖಾಮುಖಿ’, ‘ಮುಕ್ತ ಮುಕ್ತ’, ‘ಮಹಾಪರ್ವ’, ‘ಮಗಳು ಜಾನಕಿ’ ಹೀಗೆ ಅವರ ಹಿಂದಿನ ಸೀರಿಯಲ್‌ಗಳ ಸಾಲಿಗೆ ಇದೀಗ ‘ಮುಂದಿನ ಅಧ್ಯಾಯ’ ಕೂಡ ಸೇರ್ಪಡೆಯಾಗಿದೆ.
‘ಮಾಯಾಮೃಗ’ ಧಾರಾವಾಹಿಗೆ 29 ವರ್ಷ
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ತಮ್ಮ ಹಿಂದಿನ ಎಲ್ಲಾ ಧಾರಾವಾಹಿಗಳ ಪ್ರಮುಖ ಪಾತ್ರಗಳನ್ನೊಳಗೊಂಡ ಕಥಾಹಂದರವನ್ನು ‘ಮುಂದಿನ ಅಧ್ಯಾಯ’ ಹೊಂದಿರಲಿದೆ ಎಂಬ ಸುಳಿವು ನೀಡಿದ್ದಾರೆ. "ನಮ್ಮ ಭೂಮಿಕಾ ಟಾಕೀಸ್ ತಂಡದಿಂದ ‘ಮಾಯಾಮೃಗ’ ಧಾರಾವಾಹಿ ಮೂಡಿಬಂದು ಈಗಾಗಲೇ 29 ವರ್ಷಗಳಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ 30 ವರ್ಷ ಪೂರೈಸಲಿದೆ" ಎಂದು ಹೇಳಿದ್ದಾರೆ.
TN Seetharam: ಹೊಸ ಅಧ್ಯಾಯ ಶುರು ಮಾಡಿದ ಟಿ.ಎನ್. ಸೀತಾರಾಮ್! ಏನಿದು ವಿಶೇಷ?
ಹಳೆ ಪಾತ್ರಗಳ ಹೊಸ ಧಾರಾವಾಹಿ
"ನಾವು ತಯಾರಿಸಿದ ʻಮಾಯಾಮೃಗ’, ‘ಮಳೆಬಿಲ್ಲು’, ‘ಮನ್ವಂತರ’, ‘ಮುಕ್ತ’, ‘ಮುಕ್ತ ಮುಕ್ತ’, ‘ಮಗಳು ಜಾನಕಿ’ ಸೇರಿದಂತೆ ಈ 30 ವರ್ಷಗಳಲ್ಲಿ ಬಂದ ಎಲ್ಲಾ ಧಾರಾವಾಹಿಗಳ ಪಾತ್ರಗಳನ್ನು ಆಧರಿಸಿ ‘ಮುಂದಿನ ಅಧ್ಯಾಯ’ ಎಂಬ ಹೊಸ ಧಾರಾವಾಹಿಯನ್ನು ತರುತ್ತಿದ್ದೇವೆ. ಕಳೆದ ಮೂರು ದಶಕಗಳಿಂದ ಲಕ್ಷಾಂತರ ಪ್ರೇಕ್ಷಕರು ನಮ್ಮನ್ನು ಬೆಂಬಲಿಸಿದ್ದೀರಿ. ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಟಿ. ಎನ್. ಸೀತಾರಾಮ್ ಹೇಳಿದ್ದಾರೆ.
ಈ ಧಾರಾವಾಹಿ ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ?
ಹಿಂದೆ ಟಿ. ಎನ್. ಸೀತಾರಾಮ್ ಅವರ ಧಾರಾವಾಹಿಗಳು ಕನ್ನಡದ ಜನಪ್ರಿಯ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದವು. ಅವರ ಕೊನೆಯ ಧಾರಾವಾಹಿ ‘ಮಗಳು ಜಾನಕಿ’ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆದರೆ ಈ ಬಾರಿ ಅವರು ಡಿಜಿಟಲ್ ಮಾಧ್ಯಮದತ್ತ ಮುಖ ಮಾಡಿದ್ದಾರೆ.
ಟಿ. ಎನ್. ಸೀತಾರಾಮ್ ಅವರ ಪೋಸ್ಟ್ ಇಲ್ಲಿದೆ
ಈ ಹೊಸ ಧಾರಾವಾಹಿಯು ಸಂಪೂರ್ಣವಾಗಿ ಯೂಟ್ಯೂಬ್‌ನಲ್ಲೇ ವೀಕ್ಷಣೆಗೆ ಲಭ್ಯವಾಗಲಿದೆ. ‘ಭೂಮಿಕಾ ಟಾಕೀಸ್’ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮುಂದಿನ ಅಧ್ಯಾಯ’ ಧಾರಾವಾಹಿ ಸರಣಿ ಪ್ರಸಾರವಾಗಲಿದ್ದು, ಅವರು ಘೋಷಿಸಿರುವ ಮತ್ತೊಂದು ಧಾರಾವಾಹಿಯ ವಿವರ ಇನ್ನಷ್ಟೇ ಹೊರಬರಬೇಕಿದೆ.