ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತುಳುನಾಡಿನ ʻವೀರ ಕಂಬಳʼ ಸಿನಿಮಾದ ಟ್ರೇಲರ್‌ ರಿಲೀಸ್ ಮಾಡಿದ ಹಂಸಲೇಖ;‌ ಪಾತ್ರದ ಗುಟ್ಟನ್ನು ರಿವೀಲ್‌ ಮಾಡಲಿಲ್ಲ ನಟ ಆದಿತ್ಯ

Veera Kambala Movie: ಹಂಸಲೇಖ ಅವರು ವೀರ ಕಂಬಳ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ 50 ವರ್ಷಗಳ ಸಿನಿಮಾ ಪಯಣದ ಸ್ಮರಣೀಯ ಚಿತ್ರವಿದು. ತುಳುನಾಡಿನ ಸಾಂಪ್ರದಾಯಿಕ ಕಂಬಳ ಮತ್ತು ಮುಂಬೈ ಅಂಡರ್‌ವರ್ಲ್ಡ್ ನಡುವಿನ ರೋಚಕ ಕಥೆ ಹೊಂದಿರುವ ಈ ಚಿತ್ರ ಫೆಬ್ರವರಿ 27 ರಂದು ತೆರೆಕಾಣಲಿದೆ.

ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಅವರು ಚಿತ್ರರಂಗದಲ್ಲಿ ನಿರ್ದೇಶಕರಾಗಿ 50 ವರ್ಷ ಪೂರೈಸಿದ್ದಾರೆ. ಈ ಸುಸಂದರ್ಭದಲ್ಲಿ ಅವರ ನಿರ್ದೇಶನದ ಹೊಸ ಸಿನಿಮಾ ʻವೀರ ಕಂಬಳʼ ತೆರೆಗೆ ಸಜ್ಜಾಗಿದೆ. ತುಳುನಾಡಿನ ಜನಜೀವನದೊಂದಿಗೆ ಬೆಸೆದುಕೊಂಡಿರುವ ಕಂಬಳ, ಬಹುಹಿಂದಿನಿಂದಲೂ ಚಿತ್ರರಂಗದವರನ್ನೂ ಸೆಳೆಯುತ್ತಾ ಬಂದಿದೆ. ಆದರೆ, ಅದನ್ನು ಇಡಿಯಾಗಿ ದೃಶ್ಯಗಳಲ್ಲಿ ಹಿಡಿದಿಡುವಂತಹ ಪ್ರಯತ್ನಗಳು ನಡೆದಿಲ್ಲ.

ಟ್ರೇಲರ್‌ ರಿಲೀಸ್‌ ಮಾಡಿದ ಹಂಸಲೇಖ

ಮೂಲತಃ ದಕ್ಷಿಣ ಕನ್ನಡ ಭಾಗದೊಂದಿಗೆ ಕರುಳುಬಳ್ಳಿಯ ಬಂಧ ಹೊಂದಿರುವ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಅವರು ದಶಕಗಟ್ಟಲೇ ಶ್ರಮವಹಿಸಿ ಅಂಥದ್ದೊಂದು ಪ್ರಯತ್ನವನ್ನು ಮಾಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಸುತ್ತ ಘಟಿಸುವ ರೋಚಕ ಕಥನವಿರುವ ವೀರ ಕಂಬಳ ಸಿನಿಮಾವನ್ನು ಮಾಡಿದ್ದಾರೆ. ಈಚೆಗೆ ಈ ಚಿತ್ರದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಅವರು ಬಿಡುಗಡೆಗೊಳಿಸಿದ್ದಾರೆ. ತುಳು ಆವೃತ್ತಿಯ ʻಬಿರ್ದ್‌ದ ಕಂಬುಳʼ ಟ್ರೈಲರ್ ಕೂಡ ರಿಲೀಸ್‌ ಆಗಿದೆ. ಈ ಚಿತ್ರವು ಫೆಬ್ರವರಿ 27ರಂದು ತೆರೆಗೆ ಬರಲಿದೆ.

'ವೀರ ಕಂಬಳ' ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಟನೆ: ಈ ಸಿನಿಮಾ ಯಾವಾಗ ಬಿಡುಗಡೆ?

ಏನಂದ್ರು ಹಂಸಲೇಖ?

"ಕಲೆ ಎಂಬುದು ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆಯಿದ್ದಂತೆ. ಅದು ಮನುಷ್ಯನನ್ನು ಸದಾ ಜೀವಂತಿಕೆಯಿಂದ ಉಳಿಸುತ್ತದೆ. ವೀರತ್ವದ ಸಂಕೇತದಂತಿರುವ ಕಂಬಳಕ್ಕೆ ಕಲೆಯೆಂಬ ಕನ್ಯೆ ಕೊಟ್ಟ ತಾಂಬೂಲವೇ `ವೀರ ಕಂಬಳ'. ತುಳುನಾಡಿನ ನೆಲದ ಘಮಲು ಹೊಂದಿರೋ ಕಂಬಳವನ್ನು ದೃಶ್ಯಕ್ಕೆ ಒಗ್ಗಿಸುವ ಸಾಹಸ ಮಾಡಿರುವ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಇಡೀ ತಂಡಕ್ಕೆ ಶುಭ ಕೋರುತ್ತೇನೆ. ವೀರ ಕಂಬಳ ಭರ್ಜರಿ ಗೆಲುವು ಕಾಣಲಿ" ಎಂದು ಹಾರೈಸಿದರು ಹಂಸಲೇಖ.

Mahakumbh 2025: ಮಹಾಕುಂಭಮೇಳದಲ್ಲಿ ‘ವೀರ ಕಂಬಳ’ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹಾಗೂ ನಿರ್ಮಾಪಕ ಅರುಣ್ ರೈ ತೊಡರ್ ಪುಣ್ಯಸ್ನಾನ

ಈ ಸಿನಿಮಾ ಮಾಡುವುದಕ್ಕೆ ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸಾಥ್‌ ನೀಡಿದವರು ವಿಜಯ್ ಕುಮಾರ್ ಕೊಡಿಯಾಲ್‌ಬೈಲ್. ವೀರ ಕಂಬಳಕ್ಕೆ ಬೇಕಾದ ನಿಖರ ಮಾಹಿತಿಗಳನ್ನು ಒದಗಿಸಿಕೊಟ್ಟವರು ಇವರೇ. ಮೂಲತಃ ಕಲಾವಿದರಾದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರು ತುಳು ರಂಗಭೂಮಿಯ ಹೆಸರಾಂತ ನಿರ್ದೇಶಕ ಕೂಡ ಹೌದು. ಗುಣಪಾಲ್ ಕಡಂಬ ಅವರು ಕೂಡ ರಾಜೇಂದ್ರ ಸಿಂಗ್‌ ಬಾಬುಗೆ ನೆರವಾಗಿದ್ದಾರೆ.

ಈ ವೀರ ಕಂಬಳದ ಸುತ್ತವೇ ಮುಂಬೈ ಭೂಗತ ಜಗತ್ತಿನ ನಂಟಿನ ಕಥೆಯು ಈ ಸಿನಿಮಾದಲ್ಲಿದೆಯಂತೆ. ಅದು ಹೇಗೆ ಯಾವ ರೀತಿ ಎಂಬುದನ್ನು ಸಿನಿಮಾದಲ್ಲೇ ನೋಡಬೇಕಂತೆ. ನಟ ಆದಿತ್ಯ ಅವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅವರಿಲ್ಲಿ ನಿಭಾಯಿಸಿರುವ ಪಾತ್ರ ಯಾವುದು ಎಂದು ಮಾತ್ರ ಬಹಿರಂಗ ಪಡಿಸಲಿಲ್ಲ. ಆ ಬಗ್ಗೆ ಕುತೂಹಲವಿರಲಿ ಎಂದು ರಹಸ್ಯ ಕಾಯ್ದುಕೊಳ್ಳುತ್ತಾರೆ ಅವರು.

ವೀರ ಕಂಬಳ ಚಿತ್ರವನ್ನು ಬಾಬಾ'ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಆದಿತ್ಯ ಜೊತೆಗೆ ಪ್ರಕಾಶ್ ರೈ, ರವಿಶಂಕರ್, ರಾಧಿಕಾ ನಾರಾಯಣ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ಕಲಾವಿದರು ಕೂಡ ಇಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಜೊತೆಗೆ ಈ ಸಿನಿಮಾವು ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿದೆ. ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್.ಗಿರಿ ಛಾಯಾಗ್ರಹಣವಿರುವ ಈ ಸಿನಿಮಾದ ಸಂಕಲವನ್ನು ಶ್ರೀನಿವಾಸ್ ಎಸ್ ಬಾಬು ಮಾಡಿದ್ದಾರೆ.