ʻನಾನೆಂದಿಗೂ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲʼ ಎಂದಿದ್ದ ನಟ ಸನ್ನಿ ಡಿಯೋಲ್‌ಗೆ ಮುಜುಗರ; ಹಳೆಯ ವಿಡಿಯೋ ವೈರಲ್ ಮಾಡಿ ನೆಟ್ಟಿಗರ ಟ್ರೋಲ್
ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿಲ್ಲ ಮತ್ತು ಮುಂದೆಯೂ ನಟಿಸುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಅವರಿಗೆ ಈಗ ಮುಜುಗರ ಎದುರಾಗಿದೆ. ಅವರು ಈ ಹಿಂದೆ ರವಿ ಕಿಶನ್ ಜೊತೆ ನಟಿಸಿದ್ದ ಹಳೆಯ ಪಾನ್ ಮಸಾಲಾ ಜಾಹೀರಾತನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
-
"ನಾನು ಎಂದಿಗೂ ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿಲ್ಲ, ಮುಂದೆಯೂ ನಟಿಸುವುದಿಲ್ಲ" ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಅವರಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮುಜುಗರ ಎದುರಾಗಿದೆ. ಅವರು ಈ ಹಿಂದೆ ನಟಿಸಿದ್ದ ಪಾನ್ ಮಸಾಲಾ ಜಾಹೀರಾತಿನ ಹಳೆಯ ವಿಡಿಯೋವನ್ನು ನೆಟ್ಟಿಗರು ಹೆಕ್ಕಿ ತೆಗೆದು ವೈರಲ್ ಮಾಡಿದ್ದಾರೆ.
ಸಂದರ್ಶನದಲ್ಲಿ ಸನ್ನಿ ಡಿಯೋಲ್ ಹೇಳಿದ್ದೇನು?
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸನ್ನಿ ಡಿಯೋಲ್, "ನನಗೆ ಪಾನ್ ಮಸಾಲಾ ಸೇರಿದಂತೆ ನಾನು ನಂಬದ ಹಲವು ಉತ್ಪನ್ನಗಳ ಪ್ರಚಾರಕ್ಕೆ ಆಫರ್‌ಗಳು ಬಂದಿದ್ದವು. ಆದರೆ ನಾನು ಅವುಗಳನ್ನು ನೇರವಾಗಿ ರಿಜೆಕ್ಟ್ ಮಾಡಿದ್ದೇನೆ. ನಾನು ಇಂತಹ ಜಾಹೀರಾತುಗಳನ್ನು ಎಂದಿಗೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಇಂತಹ ಹಾನಿಕಾರಕ ಉತ್ಪನ್ನಗಳನ್ನು ಪ್ರಚಾರ ಮಾಡುವುದು ತಪ್ಪು ಎಂಬ ಬಲವಾದ ಭಾವನೆ ನನಗಿದೆ" ಎಂದು ಹೇಳಿದ್ದರು.
ಹಳೆಯ ವಿಡಿಯೋದಲ್ಲಿ ಏನಿದೆ?
ಸನ್ನಿ ಡಿಯೋಲ್ ಅವರ ಈ ಹೇಳಿಕೆ ಬೆನ್ನಲ್ಲೇ ನೆಟ್ಟಿಗರು, ನಟ ರವಿ ಕಿಶನ್ ಮತ್ತು ವಿಜಯ್ ರಾಜ್ ಜೊತೆ ಸನ್ನಿ ಕಾಣಿಸಿಕೊಂಡಿದ್ದ ಹಳೆಯ ಜಾಹೀರಾತಿನ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸನ್ನಿ ಡಿಯೋಲ್ ಮಹಿಳೆಯರೊಂದಿಗೆ ಪಾನ್ ಅಂಗಡಿಗೆ ತೆರಳಿ ಆ ಉತ್ಪನ್ನವನ್ನು ಸೇವಿಸುವುದು ಹಾಗೂ ಆ ಪಾನ್ ಮಸಾಲಾ ಪ್ಯಾಕೆಟ್ ಮೇಲೆ ಅವರದ್ದೇ ಫೋಟೋ ಮುದ್ರಿತವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಪ್ಯಾಕೆಟ್ ಮೇಲೆ 'ತಂಬಾಕು ರಹಿತ (No Tobacco)' ಮತ್ತು 'ನಿಕೋಟಿನ್ ರಹಿತ (No Nicotine)' ಎಂದು ನಮೂದಿಸಲಾಗಿದ್ದರೂ, ಪಾನ್ ಮಸಾಲಾ ಬ್ರ್ಯಾಂಡ್‌ಗೆ ಅವರು ಪ್ರಚಾರ ನೀಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿದೆ ನೋಡಿ ಹಳೆ ವಿಡಿಯೋ
Wahh re bhadwo @shubhankrmishra @iamsunnydeol https://t.co/LwnVrABBBC pic.twitter.com/hXTExlPQeD
— 𝙇 𝙊 𝙂 𝘼 𝙉 (@SRks_Shubhh1) August 16, 2026
ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ
"ದುಡ್ಡು ಎಲ್ಲವನ್ನೂ ಮಾಡಿಸುತ್ತದೆ", "ಹೇಳುವುದು ಒಂದು, ಮಾಡುವುದು ಮತ್ತೊಂದು" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಸನ್ನಿ ಅವರ ಹಳೆಯ ಮದ್ಯದ ಜಾಹೀರಾತಿನ ಫೋಟೋಗಳನ್ನು ಹಂಚಿಕೊಂಡು ಟೀಕಿಸಿದ್ದಾರೆ. ಇನ್ನು ಕೆಲವರು ನಟನ ಪರವಾಗಿ ನಿಂತಿದ್ದು, "ಅವರು ಇತ್ತೀಚಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಅವರು ಅಂತಹ ಯಾವುದೇ ಜಾಹೀರಾತುಗಳಲ್ಲಿ ನಟಿಸುತ್ತಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.
ನಟರಿಗೆ ನೀಡಿದ್ದ ಎಫ್‌ಡಿಎ
ಈಚೆಗೆ ಮಹಾರಾಷ್ಟ್ರದಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನವನ್ನು 'ವಿಮಲ್ ಎಲೈಚಿ' ಹೆಸರಿನಲ್ಲಿ ಪರೋಕ್ಷವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಇತ್ತೀಚೆಗೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆಯ ನಂತರ ಸನ್ನಿ ಡಿಯೋಲ್ ನೀಡಿದ್ದ ಹೇಳಿಕೆ ಇದೀಗ ಅವರಿಗೇ ತಿರುಗುಬಾಣವಾಗಿದೆ.