ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜಕೀಯಕ್ಕೆ ಬರುವ ಸುಳಿವು ಕೊಟ್ರಾ ಯಶ್‌? ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?

Actor Yash: ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಯಶ್‌ ರಾಜಕೀಯಕ್ಕೆ ಬರುತ್ತಾರ? ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಸ್ವತಃ ಯಶ್‌ ಉತ್ತರ ನೀಡಿದ್ದಾರೆ. ಸದ್ಯಕ್ಕಂತೂ ರಾಜಕೀಯ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನಪ್ರಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯಕ್ಕೆ ಬರುವ ಸುಳಿವು ಕೊಟ್ರಾ ಯಶ್‌?

ಯಶ್‌ -

Ramesh Ballamoole
Ramesh Ballamoole Aug 16, 2026 12:07 AM

ಬೆಂಗಳೂರು, ಆ. 15: ತಮಿಳು ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ತಮ್ಮದೇ ಟಿವಿಕೆ ಪಕ್ಷ ಸ್ಥಾಪಿಸಿ ಮೊದಲ ಚುನಾವಣೆಯಲ್ಲೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರಷ್ಟೇ ಅಭಿಮಾನಿಗಳನ್ನು ಹೊಂದಿರುವ ಯಶ್‌ (Yash) ಕೂಡ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಕುತೂಹಲ ಇದೀಗ ಮನೆ ಮಾಡಿದೆ. ಇದಕ್ಕೆ ಸ್ವತಃ ಯಶ್‌ ಉತ್ತರಿಸಿದ್ದಾರೆ. ಸದ್ಯಕ್ಕಂತೂ ರಾಜಕೀಯ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಭವಿಷ್ಯದಲ್ಲಿ ಇಂತಹ ಸಾಧ್ಯತೆಯನ್ನು ತಳ್ಳಿ ಹಾಕಿವಂತಿಲ್ಲ ಎನ್ನುವ ಸೂಚನೆಯನ್ನೂ ನೀಡಿದ್ದಾರೆ.

ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ʼಟಾಕ್ಸಿಕ್‌ʼ ಚಿತ್ರದ ಪ್ರಚಾರದ ಭಾಗವಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ವೇಳೆ ಪ್ರೇಕ್ಷಕರೊಬ್ಬರು, ʼʼತಮಿಳುನಾಡಿನಲ್ಲಿ ದಳಪತಿ ವಿಜಯ್‌ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಅವರಷ್ಟೇ ಮಾಸ್‌ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿರುವ ನೀವು ರಾಜಕೀಯಕ್ಕೆ ಬರುವ ಆಲೋಚನೆ ಇದ್ಯಾ?ʼʼ ಎಂದು ಪ್ರಶ್ನಿಸಿದರು. ಇದಕ್ಕೆ ಯಶ್‌ ನಗುತ್ತಾ, ʼʼಸದ್ಯಕ್ಕಂತೂ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ಈಗ ಕೈತುಂಬ ಸಿನಿಮಾಗಳಿವೆ. ಅದರಲ್ಲೇ ಬ್ಯುಸಿ ಇದ್ದೇನೆ. ಭವಿಷ್ಯದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲʼʼ ಎಂದು ತಿಳಿಸಿದ್ದಾರೆ. ಈ ಮಾತಿನಿಂದ ಅನೇಕರು ಕೆಲವು ವರ್ಷಗಳ ಬಳಿಕ ಯಶ್‌ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

2022ರಲ್ಲಿ ʼಕೆಜಿಎಫ್‌ 2' ರಿಲೀಸ್‌ ಆಗುವ ವೇಳೆಯೂ ಯಶ್‌ಗೆ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗಲೂ ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು. ತಮಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದರು.

ರಾಜಕೀಯ ಪ್ರಚಾರದಲ್ಲಿ ಭಾಗಿಯಾಗಿದ್ದ ಯಶ್‌

ಹಾಗೆ ನೋಡಿದರೆ ಯಶ್‌ಗೂ ರಾಜಕೀಯಕ್ಕೂ ಬಹಳ ಅಂತರವೇನೂ ಇಲ್ಲ. ಹಿರಿಯ ನಟ, ಕಾಂಗ್ರೆಸ್‌ ನಾಯಕ ಅಂಬರೀಷ್‌ ಜತೆ ಯಶ್‌ ಸ್ನೇಹ ಸಂಬಂಧ ಹೊಂದಿದ್ದರು. ಅಲ್ಲದೆ 2019ರಲ್ಲಿ ಅಬರೀಷ್‌ ಅವರ ಪತ್ನಿ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದಾಗ ಯಶ್‌ ಪ್ರಚಾರಕ್ಕೆ ತೆರಳಿದ್ದರು. ದರ್ಶನ್‌ ಜತೆ ಕ್ಷೇತ್ರದಾದ್ಯಂತ ಸಂಚರಿಸಿ ಸುಮಲತಾ ಪರ ಮತ ಯಾಚಿಸಿದ್ದರು. ಈ ವೇಳೆ ಯಶ್‌-ದರ್ಶನ್‌ ಅವರನ್ನು ಜೋಡೆತ್ತು ಎಂದೇ ಕರೆಯಲಾಗುತ್ತಿತ್ತು.

ಅದಾಗ್ಯೂ ಯಶ್‌ ರಾಜಕೀಯದಿಂದ, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಪಕ್ಷ ನೋಡಿ ಅಲ್ಲ, ಬದಲಾಗಿ ವೈಯಕ್ತಿಕವಾಗಿ ಸುಮಲತಾ ಪರ ಪ್ರಚಾರ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದರು. ಅಲ್ಲದೆ ಇದುವರೆಗೆ ಯಶ್‌ ಯಾವುದೇ ಪಕ್ಷದ ಪರವಾಗಿ ಮಾತನಾಡಿಲ್ಲ, ಗುರುತಿಸಿಕೊಂಡಿಲ್ಲ.

ʼಟಾಕ್ಸಿಕ್‌ʼ ಬಿಡುಗಡೆಗೆ ದಿನ ಗಣನೆ

ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಆ್ಯಕ್ಷನ್ ಕಟ್‌ ಹೇಳುತ್ತಿರುವ ʼಟಾಕ್ಸಿಕ್‌ʼ ಆಗಸ್ಟ್‌ 26ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಚಿತ್ರ ರಿಲೀಸ್‌ ಆಗಲಿದ್ದು, ಈಗಾಗಲೇ ಜಾಗತಿಕ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಯಶ್‌ ಜತೆ ನಯನತಾರಾ, ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್‌, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತಿತರರು ನಟಿಸಿದ್ದಾರೆ.