ʻರಾಯರ ದರ್ಶನʼ ಆಲ್ಬಂ ಸಾಂಗ್‌ಗೆ ಧ್ವನಿ ನೀಡಿದ ʻಬ್ರಹ್ಮಕಳಶʼ ಖ್ಯಾತಿಯ ಅಬ್ಬಿ; ಮಂತ್ರಾಲಯದಲ್ಲಿ ಬಿಡುಗಡೆಯಾಗಲಿರುವ ಹಾಡು
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಹಿಮೆ ಸಾರುವ ‘ರಾಯರ ದರ್ಶನ’ ಆಲ್ಬಂ ಸಾಂಗ್ ಜೂನ್ 20 ರಂದು ಶ್ರೀ ಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಮತ್ತು ಟಿಎನ್‌ಐಟಿ ಲಾಂಛನದಲ್ಲಿ ಸುಗುಣ ರಘು ನಿರ್ಮಿಸಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
-
ಕಲಿಯುಗದ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಹಿಮೆ ಹಾಗೂ ಅಲ್ಲಿ ವರ್ಷವಿಡೀ ನಡೆಯುವ ವಿಶೇಷ ಉತ್ಸವಗಳನ್ನು ಕಣ್ತುಂಬಿಸುವ "ರಾಯರ ದರ್ಶನ" ಆಲ್ಭಂ ಸಾಂಗ್ ಬಿಡುಗಡೆಗೆ ಸಿದ್ಧವಾಗಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ (TNIT) ಲಾಂಛನದಲ್ಲಿ ಸುಗುಣ ರಘು ನಿರ್ಮಿಸಿರುವ ಈ ಆಲ್ಬಂನ ಲೋಕಾರ್ಪಣೆ ಜೂನ್ 20 ರಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಈ ಸಮಾರಂಭ ನಡೆಯಲಿದ್ದು, ಇದರ ಟೀಸರ್ ಅನ್ನು ಹಿರಿಯ ನಟಿ ತಾರಾ ಅನುರಾಧ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನಾವರಣಗೊಳಿಸಿದರು. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ಜಂಟಿಯಾಗಿ ಈ ಹಾಡಿಗೆ ಸಂಗೀತ ನೀಡಿದ್ದು, 'ಕಾಂತಾರ' ಸಿನಿಮಾದ 'ಬ್ರಹ್ಮಕಳಶ' ಹಾಡಿನ ಖ್ಯಾತಿಯ ಕೆನಡಾ ಮೂಲದ ಗಾಯಕ ಅಬ್ಬಿ ವಿ ಧ್ವನಿ ನೀಡಿರುವುದು ವಿಶೇಷ. ನಾಗಾರ್ಜುನ ಶರ್ಮ ಈ ಭಕ್ತಿಗೀತೆಗೆ ಸಾಹಿತ್ಯ ಬರೆದಿದ್ದಾರೆ.
ಈ ಆಲ್ಬಂ ರೂಪಿಸಲು ಒಂದು ವರ್ಷ ಬೇಕಾಯಿತು
ಕಾರ್ಯಕ್ರಮದ ಸಾರಥ್ಯ ವಹಿಸಿರುವ ರಘು ಭಟ್ ಮಾತನಾಡಿ, "ಮಂತ್ರಾಲಯದ ಪೂಜೆ, ವೈಭವೋತ್ಸವ ಹಾಗೂ ಆರಾಧನೆಗಳ ಸಂಪೂರ್ಣ ವಿವರಣೆ ಒಳಗೊಂಡಿರುವ ಈ ಆಲ್ಬಂ ರೂಪಿಸಲು ಒಂದು ವರ್ಷ ಸಮಯ ಹಿಡಿದಿದೆ. ಜೂನ್ 20 ರಂದು ರಾಯರ ಸನ್ನಿಧಿಯಲ್ಲೇ ಹಾಡು ಬಿಡುಗಡೆಯಾಗಲಿದ್ದು, ಅಂದು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಜೆ ಕೂಡ ಇರಲಿದೆ. ಸಮಾರಂಭಕ್ಕೆ ಮೂರು ರಾಜ್ಯಗಳ ಉಪ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ" ಎಂದರು.
ಇದೇ ವೇಳೆ ತಮ್ಮ ಸಂಸ್ಥೆಯಿಂದ ಕಳೆದ 9 ವರ್ಷಗಳಿಂದ ನೀಡಲಾಗುತ್ತಿರುವ 'TNIT ಮಾಧ್ಯಮ ಪ್ರಶಸ್ತಿ' ಪ್ರದಾನ ಸಮಾರಂಭವು ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಬಾರಿ ವಿದ್ಯುನ್ಮಾನದ ಜೊತೆಗೆ ಮುದ್ರಣ ಮಾಧ್ಯಮದವರನ್ನೂ ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.
ರಾಯರ ಹಾಡಿಗೆ ಅಜನೀಶ್ ಲೋಕನಾಥ್ ಮ್ಯೂಸಿಕ್
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, "ನಾನು ಚಿಕ್ಕವಯಸ್ಸಿನಿಂದಲೂ ಪೂಜ್ಯಾಯಾ ರಾಘವೇಂದ್ರಯಾ ಶ್ಲೋಕ ಹೇಳಿಯೆ ಆಚೆ ಹೊಗುತ್ತಿದ್ದೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವುದು ತಮ್ಮ ಪುಣ್ಯ. ನಾನು ಹಾಗೂ ಬಾಬಿ ಅವರು ರಾಯರ ಮೇಲಿನ ಅಪಾರ ಭಕ್ತಿಯಿಂದ ಈ ಆಲ್ಬಂ ಗೆ ಸಂಗೀತ ನೀಡಿದ್ದೇವೆ" ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ಮಹೇಶ್ ಗೌಡ, ಮಂತ್ರಾಲಯ ಮಠದ ಶ್ರೀನಿಧಿ ಕರಣಂ ಹಾಗೂ ಶ್ರೀಶ ಜೋಯಿಸ್ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.