ಈಗಿನ ಕಾಲಘಟ್ಟದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡಲು ಸಾಧ್ಯವೇ? ಅಂತಹ ಸಿನಿಮಾಗಳನ್ನು ಯಾರು ನೋಡುತ್ತಾರೆ ಎಂಬ ಮಾತುಗಳು ಕೇಳುವುದು ಸಹಜ. ಕಾದಂಬರಿ ಆಧಾರಿತ ಸಿನಿಮಾಗಳ ಕಾಲ 70-80ರ ದಶಕಕ್ಕೆ ಮುಕ್ತಾಯವಾಯಿತು ಎನ್ನುವವರೂ ಇದ್ದಾರೆ. ಆದರೆ ಈಗಲೂ ಅಂಥ ಸಿನಿಮಾಗಳಿಗೆ ಪ್ರೇಕ್ಷಕರಿದ್ದಾರೆ ಎಂಬ ನಂಬಿಕೆ ಮೇಲೆ ನಿರ್ಮಾಣವಾಗಿರುವ ಸಿನಿಮಾ ʻಸರಳ ಸುಬ್ಬರಾವ್ʼ. ತ್ರಿವೇಣಿ ಅವರ ವಸಂತ ಗಾನ ಕಾದಂಬರಿಯನ್ನು ಆಧರಿಸಿ ಮಂಜು ಸ್ವರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾವು ಶೀರ್ಷಿಕೆಯಂತೆಯೇ ಸರಳವಾಗಿದೆ ಮತ್ತು ಸುಂದರವಾಗಿದೆ.
ಸರಳ ಸುಬ್ಬರಾವ್ ಕಥೆ ಏನು?
ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿರುವ ಸುಬ್ಬರಾವ್‌ಗೆ (ಅಜಯ್ ರಾವ್) ಮದುವೆ ವಯಸ್ಸು. ಆ ಸಮಯಕ್ಕೆ ಸರಿಯಾಗಿ ಸರಳ (ಮಿಶಾ) ಮೇಲೆ ಅವನ ಕಣ್ಣು ಬೀಳುತ್ತದೆ. ಮೊದಲ ನೋಟದಲ್ಲೇ ಸುಬ್ಬರಾವ್‌ಗೆ ಇಷ್ಟವಾಗಿಬಿಡುತ್ತಾಳೆ ಸರಳ. ಆಕೆಯ ಮಗುವಿನಂತಹ ಮನಸ್ಸು, ತುಂಟತನ, ಮುಗ್ಧತೆ ಎಲ್ಲವೂ ಸುಬ್ಬರಾವ್‌ಗೆ ಹಿಡಿಸುತ್ತದೆ. ಸರಳ ಜೊತೆಗೆ ಸುಬ್ಬರಾವ್ ಮದುವೆ ಅಷ್ಟೇನೂ ದೊಡ್ಡ ಕಷ್ಟಕರವಾಗುವುದಿಲ್ಲ. ಎರಡೂ ಕುಟುಂಬಗಳು ಖುಷಿಯಿಂದಲೇ ಸರಳ ಮತ್ತು ಸುಬ್ಬರಾವ್‌ಗೆ ಮದುವೆ ಮಾಡುತ್ತಾರೆ. ಮುಂದೆ ಈ ಜೋಡಿ ಹೇಗೆ ಹೊಂದಾಣಿಕೆಯಿಂದ ಬದುಕು ಸಾಗಿಸುತ್ತದೆ. ಎಲ್ಲವೂ ಸರಿ ಇರುವಾಗಲೂ ಒಮ್ಮೊಮ್ಮೆ ಎದುರಾಗುವ ತಿರುವುಗಳು.. ಅವುಗಳನ್ನು ಈ ಜೋಡಿ ಹೇಗೆ ನಿಭಾಯಿಸುತ್ತದೆ ಎಂಬುದೇ ಸರಳ ಸುಬ್ಬರಾವ್ ಕಥೆ. ಇದೆಲ್ಲರ ಜೊತೆಗೆ 1971ರಲ್ಲಿ ನಡೆವ ಭಾರತ - ಪಾಕ್ ನಡುವಿನ ಯುದ್ಧ ಹೇಗೆ ಸರಳ ಸುಬ್ಬರಾವ್ ಕುಟುಂಬಕ್ಕೆ ಬ್ಲೆಂಡ್ ಆಗುತ್ತದೆ ಅನ್ನೋದು ಮತ್ತೊಂದು ಕುತೂಹಲ.
ಕಾದಂಬರಿಯಂತೆ ಓದಿಸಿಕೊಳ್ಳುವ ಸಿನಿಮಾ...
ಕಾದಂಬರಿ ಆಧಾರಿಸಿ ಮಾಡಿದ ಕಾರಣಕ್ಕೋ ಏನೋ, ಸರಳ ಸುಬ್ಬರಾವ್ ಸಿನಿಮಾವು ಒಂದು ಕಾದಂಬರಿಯನ್ನು ಓದಿದ ಫೀಲ್ ನೀಡುತ್ತದೆ. ಸರಳ ಮತ್ತು ಸುಬ್ಬರಾವ್ ಪಾತ್ರಗಳ ಮೇಲೆಯೇ ಹೆಚ್ಚು ಕೇಂದ್ರಕೃತವಾಗಿರುವ ಈ ಕಥೆಯು, ಆ ಎರಡು ಪಾತ್ರಗಳ ಸುತ್ತವೇ ಸಾಗುತ್ತದೆ. ಮದುವೆಯಿಂದಿಡಿದು, ದಂಪತಿಗಳ ಓಡಾಟ, ಒಡನಾಟ, ತುಂಟಾಟವನ್ನು ಎಲ್ಲವನ್ನೂ ರೊಮ್ಯಾಂಟಿಕ್ ಆಗಿಯೇ ತೋರಿಸಲಾಗಿದೆ. ಇಲ್ಲಿ ಫೈಟ್ಸ್, ಬಿಲ್ಡಪ್, ಐಟಂ ಸಾಂಗ್.. ಹೀಗೆ ಸಿನಿಮಾಕ್ಕೆ ಅಗತ್ಯವಿಲ್ಲದ್ದನ್ನು ಕಮರ್ಷಿಯಲ್ ಮಾಡುವ ಯತ್ನ ಮಾಡಿಲ್ಲ. ಬದಲಿಗೆ, ಸಿಂಪಲ್ ಮೇಕಿಂಗ್‌ನಲ್ಲಿ ಅರ್ಥಪೂರ್ಣ ಸಂಭಾಷಣೆಗಳೊಂದಿಗೆ ಸರಳ ಮತ್ತು ಸುಬ್ಬರಾವ್ ಬದುಕನ್ನು ಕಟ್ಟಿಕೊಡಲಾಗಿದೆ.
ತ್ರಿವೇಣಿ ಬರೆದ ಕಾದಂಬರಿ ಆಧರಿಸಿ ಬರ್ತಿದೆ ʻಸರಳ ಸುಬ್ಬರಾವ್ʼ ಸಿನಿಮಾ; 70ರ ದಶಕಕ್ಕೆ ಜಾರಿದ ನಟ ಅಜಯ್ ರಾವ್
ಅಜನೀಶ್ ಲೋಕನಾಥ್ ಅವರ ಸಂಗೀತ ಇದಕ್ಕೆ ಸಾಥ್ ನೀಡಿದೆ. ರೆಟ್ರೋ ಕಾಲದ ಸಿನಿಮಾ ಕಾರಣಕ್ಕೋ ಏನೋ, ಸಂಭಾಷಣೆಯಲ್ಲಿ ಕೆಲವು ನಾಟಕೀಯ ಶೈಲಿಯ ಮಾತುಗಳು ಇಣುಕುತ್ತವೆ. ಹಾಸ್ಯ ಕಲಾವಿದರು ಇರುವುದರಿಂದ, ಕಾಮಿಡಿಗೆ ಇನ್ನಷ್ಟು ಒತ್ತು ನೀಡಬಹುದಾಗಿತ್ತು. 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಮಂಜು ಸ್ವರಾಜ್ ಅವರು ಭಾಗಶಃ ಗೆದ್ದಿದ್ಧಾರೆ.
ಮಿಂಚುವ ಮಿಶಾ ನಾರಂಗ್
ನಟ ಅಜಯ್ ರಾವ್ ಅವರು ಸುಬ್ಬರಾವ್ ಆಗಿ ಇಷ್ಟವಾಗುತ್ತಾರೆ. ಇಂಗ್ಲಿಷ್ ಪ್ರೊಫೆಸರ್ ಆಗಿ, ಪೋಷಕರಿಗೆ ಒಳ್ಳೆಯ ಮಗನಾಗಿ, ಪತಿಗೆ ಮುದ್ದಿನ ಗಂಡನಾಗಿ, ಜವಾಬ್ದಾರಿಯುತ ತಂದೆಯಾಗಿ ಇಷ್ಟವಾಗುತ್ತಾರೆ. ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಅಕ್ಷರಶಃ ಪ್ರೇಕ್ಷಕರನ್ನು ಅಳಿಸುತ್ತಾರೆ ಅಜಯ್ ರಾವ್. ನಾಯಕಿ ಮಿಶಾ ನಾರಂಗ್‌ಗೆ ಇದು ಮೊದಲ ಪ್ರಯತ್ನ. ಅದನ್ನು ಅವರು ಬಹಳ ಅಚ್ಚುಕಟ್ಟಾಗಿ ಬಳಕೆ ಮಾಡಿಕೊಂಡಿದ್ದಾರೆ. ಸರಳ ಪಾತ್ರದ ಜೀವಂತಿಕೆ ಹೆಚ್ಚಿಸುವಲ್ಲಿ ಮಿಶಾ ಅವರ ಕೊಡುಗೆ ಜಾಸ್ತಿ ಇದೆ. ಕನ್ನಡ ಮಾತನಾಡಲು ಬಾರದೇ ಇದ್ದರೂ, ದೃಶ್ಯಗಳ ಭಾವವನ್ನು ಅರ್ಥೈಸಿಕೊಂಡು, ಅದಕ್ಕೆ ತಕ್ಕ ನಟನೆ ನೀಡುವಲ್ಲಿ ಅವರು ಗೆದ್ದಿದ್ದಾರೆ. ಮುದ್ದು ಮುದ್ದಾಗಿ ಕಾಣಿಸುವ ಮಿಶಾಗೆ ಸ್ಯಾಂಡಲ್‌ವುಡ್‌ನಲ್ಲಿ ಭವಿಷ್ಯ ಇದೆ.
ರಂಗಾಯಣ ರಘು ಮತ್ತು ವೀಣಾ ಸುಂದರ್ ಅವರ ಟ್ರ್ಯಾಕ್ ಇಷ್ಟವಾಗುತ್ತದೆ. ಗರ್ಭದಲ್ಲಿ ಮಗುವಿನ ಬೆಳವಣಿಗೆಯನ್ನು ಹೇಳುವ ಪಾತ್ರದಲ್ಲಿ ರಾಮಕೃಷ್ಣ ಮೆಚ್ಚುಗೆ ಪಡೆಯುತ್ತಾರೆ. ರಘು ರಾಮನಕೊಪ್ಪ, ವಿಜಯ್ ಚೆಂಡೂರ್ ಅವರು ನಗಿಸುವ ಪ್ರಯತ್ನ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಶ್ರೀ ಮಹಾದೇವ್ ಕಾಣಿಸಿಕೊಂಡಿದ್ದಾರೆ.
Movie: ಸರಳ ಸುಬ್ಬರಾವ್
Release Date: ಫೆಬ್ರವರಿ 20, 2026
Language: ಕನ್ನಡ
Genre: ಡ್ರಾಮಾ, ರೊಮ್ಯಾನ್ಸ್
Director: ಮಂಜು ಸ್ವರಾಜ್
Cast: ಅಜಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ಚಿತ್ಕಳಾ ಬಿರಾದರ್, ರಘು ರಾಮನಕೊಪ್ಪ, ವಿಜಯ್ ಚೆಂಡೂರು, ರಾಮಕೃಷ್ಣ, ಪ್ರೊ. ಕೃಷ್ಣೇಗೌಡ
Duration: 130 ನಿಮಿಷ
Rating: 3/5