ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಟಿ ಅಮೀಶಾ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್; ಚೆಕ್ ಬೌನ್ಸ್ ಕೇಸ್‌ನಲ್ಲಿ 'ಗದರ್' ಬೆಡಗಿಗೆ ಸಂಕಷ್ಟ!

ನಟಿ ಅಮೀಶಾ ಪಟೇಲ್‌ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಪದೇ ಪದೇ ಸಮನ್ಸ್ ನೀಡಿದರೂ ಕೋರ್ಟ್‌ಗೆ ಹಾಜರಾಗದ ಕಾರಣ ಈಗ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆದರೆ, ನಟಿ ಅಮೀಶಾ ಪಟೇಲ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಹಾಗಾದರೆ ಏನಿದು ಕೇಸ್?

ಬಾಲಿವುಡ್‌ನಲ್ಲಿ ಈಗ ಚೆಕ್‌ ಬೌನ್ಸ್‌ ಕೇಸ್‌ಗಳದ್ದೇ ಸದ್ದು ಕೇಳಿಬರುತ್ತಿದೆ. ನಟ ರಾಜ್‌ಪಾಲ್‌ ಯಾದವ್‌ ಅವರು ಈಚೆಗಷ್ಟೇ ಚೆಕ್‌ ಬೌನ್ಸ್‌ ಕೇಸ್‌ನಿಂದಾಗಿ ತಿಹಾರ್‌ ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ರಿಲೀಸ್‌ ಆಗಿದ್ದಾರೆ. ಈಗ ನಟಿ ಅಮೀಶಾ ಪಟೇಲ್‌ ಅವರ ಸರದಿ. ಹೌದು, 2017ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಮೀಶಾ ಪಟೇಲ್‌ಗೆ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಲಾಗಿದೆ. ಆಮೀಶಾ ವಿರುದ್ಧ ಮೊರಾದಾಬಾದ್‌ನ ಇವೆಂಟ್ ಮ್ಯಾನೇಜರ್ ಪವನ್ ವರ್ಮಾ ಚೆಕ್‌ಬೌನ್ಸ್‌ ಪ್ರಕರಣ ದಾಖಲಿಸಿದ್ದರು.

ಏನಿದು ಪ್ರಕರಣ?

2017ರ ನವೆಂಬರ್ 16ರಂದು ಮೊರಾದಾಬಾದ್‌ನ ಮದುವೆ ಸಮಾರಂಭಕ್ಕೆ ಆಗಮಿಸುವ ಸಲುವಾಗಿ ಪವನ್ ವರ್ಮಾ ಜತೆ 14.50 ಲಕ್ಷ ರೂ.ಗಳಿಗೆ ಅಮೀಶಾ ಮಾತುಕತೆ ಮಾಡಿದ್ದರು. ಆದರೆ ಅಮೀಶಾ ಅಂದು ಮೊರಾದಾಬಾದ್‌ಗೆ ಬರಲಿಲ್ಲ. ಬದಲಾಗಿ ಹಣ ಪಾವತಿಸುವುದಾಗಿ ಪವನ್‌ಗೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ 10 ಲಕ್ಷ ರೂ. ನಗದು ಹಣವನ್ನು ನೀಡಿದ್ದರು. ಉಳಿದ 4.50 ಲಕ್ಷಕ್ಕೆ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಪವನ್ ವರ್ಮಾ ನ್ಯಾಯಾಲಯದ ಮೊರೆ ಹೋಗಿದ್ದರು.

Ameesha Patel: ಸಾರ್ವಜನಿಕ ಸ್ಥಳದಲ್ಲೇ ಕಪಾಳಮೋಕ್ಷ ಮಾಡಿದ್ದೆ... ಬಾಲಿವುಡ್ ನಟಿ ಅಮೀಶಾ ಪಟೇಲ್‌ ಹೀಗಂದಿದ್ದೇಕೆ?

ಈ ಸಂಬಂಧ ಮೊರಾದಾಬಾದ್‌ ಕೋರ್ಟ್‌ನಿಂದ ಹಲವು ಬಾರಿ ಅಮೀಶಾ ಅವರಿಗೆ ಸಮನ್ಸ್‌ ನೀಡಲಾಗಿತ್ತು. ಆದರೆ, ಅಮೀಶಾ ವಿಚಾರಣೆಗೆ ಹಾಜರಾಗಿರಲಿಲ್ಲ. ಆದ್ದರಿಂದ ಈಗ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಆದರೆ ಈ ಕುರಿತ ಅಮೀಶಾ ಪಟೇಲ್‌ ಪರ ವಕೀಲ ಅಭಿಷೇಕ್‌ ಶರ್ಮಾ ಮಾಹಿತಿ ಹಂಚಿಕೊಂಡಿದ್ದು, "ಇದು 2017ರಲ್ಲಿ ನಡೆದ ಘಟನೆ ಇದೆ. ಈಗಾಗಲೇ ಪೂರ್ಣ ಹಣ ಪಾವತಿಯೂ ಆಗಿದೆ. ಆದರೆ ಈಗ ಕಾನೂನನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.‌ ಈ ಕುರಿತಂತೆ ಅಮೀಶಾ ಪಟೇಲ್ ಅವರು ಕೋರ್ಟ್‌ಗೆ ಹಾಜರಾಗಿ ಸ್ಪಷ್ಟನೆ ನೀಡಲಿದ್ದಾರೆ" ಎಂದು ಹೇಳಿದ್ದಾರೆ.

ಪ್ರತಿಕ್ರಿಯೆ ನೀಡಿದ ನಟಿ ಅಮೀಶಾ ಪಟೇಲ್‌

"ಮೊರಾದಾಬಾದ್‌ನಲ್ಲಿ ಪವನ್ ವರ್ಮಾ ಎಂಬುವವರು ನನ್ನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈ ಮೂಲಕ ನಾನು ಹೇಳಲು ಇಚ್ಚಿಸುವುದೇನೆಂದರೆ, ಇದು ವರ್ಷಗಳ ಹಿಂದಿನ ಬಹಳ ಹಳೆಯ ಪ್ರಕರಣವಾಗಿದೆ. ಈ ವಿಷಯದಲ್ಲಿ ಪವನ್ ವರ್ಮಾ ಅವರು ಈಗಾಗಲೇ ರಾಜೀ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದದ ಪ್ರಕಾರ ಸಂಪೂರ್ಣ ಹಣವನ್ನು ಪಡೆದುಕೊಂಡಿದ್ದಾರೆ" ಎಂದು ನಟಿ ಅಮೀಶಾ ಪಟೇಲ್‌ ತಿಳಿಸಿದ್ದಾರೆ.

ತಿಹಾರ್ ಜೈಲಿನಿಂದ ಹೊರಬಂದ ರಾಜ್‌ಪಾಲ್ ಯಾದವ್; ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನಿಗೆ ನ್ಯಾಯಾಲಯದಿಂದ ಜಾಮೀನು!

"ಹಣವನ್ನು ಪಡೆದಕೊಂಡ ಮೇಲೂ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ದೂರು ದಾಖಲಿಸಿರುವುದು ಕಂಡುಬಂದಿದೆ. ಈ ವ್ಯಕ್ತಿಯ ಸುಳ್ಳುಗಳನ್ನು ಬಯಲಿಗೆಳೆಯಲು ನನ್ನ ವಕೀಲರು ಅವರ ವಿರುದ್ಧ ಸೂಕ್ತ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುವದಕ್ಕಾಗಿ ಇಂತಹ ಸಾರ್ವಜನಿಕ ಪ್ರಹಸನ ಮಾಡುವವರನ್ನು ನಾನು ನಿರ್ಲಕ್ಷಿಸುತ್ತೇನೆ ಮತ್ತು ನನ್ನ ಕೆಲಸದತ್ತ ಹೆಚ್ಚು ಗಮನ ಹರಿಸಲು ಇಷ್ಟಪಡುತ್ತೇನೆ" ಎಂದಿದ್ದಾರೆ ಅಮೀಶಾ ಹೇಳಿದ್ದಾರೆ.