Ameesha Patel: ಸಾರ್ವಜನಿಕ ಸ್ಥಳದಲ್ಲೇ ಕಪಾಳಮೋಕ್ಷ ಮಾಡಿದ್ದೆ... ಬಾಲಿವುಡ್ ನಟಿ ಅಮೀಶಾ ಪಟೇಲ್ ಹೀಗಂದಿದ್ದೇಕೆ?
ಕಹೋ ನಾ ಪ್ಯಾರ್ ಹೇ, ಗದರ್ನಂತಹ ಬಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ನಾಯಕಿಯಾಗಿ ಅಭಿನಯಿಸಿದ್ದ ನಟಿ ಅಮೀಷಾ ಪಾಟೇಲ್ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 49 ವರ್ಷ ವಯಸ್ಸಾಗಿದ್ದರೂ ಈಗಲೂ ಟೀನೇಜ್ ಹುಡುಗಿಯಂತೆ ಕಾಣುವ ಈಕೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅಮೀಶಾ ಪಟೇಲ್ ತನ್ನ ವೈಯಕ್ತಿಕ ಬದುಕಿಗೆ ಅಧಿಕ ಪ್ರಾಮುಖ್ಯತೆ ನೀಡುತ್ತಿದ್ದು ಇತ್ತೀಚಿನ ಸಂದರ್ಶನವೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಮೇಲೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದ ಆಘಾತಕಾರಿ ವಿಚಾರವನ್ನು ನಟಿ ಬಹಿರಂಗಪಡಿಸಿದ್ದಾರೆ



ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಗಳಿಸಿದ್ದ ಬಳಿಕ ನಟಿ ಅಮೀಶಾ ಪಟೇಲ್ಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರಲಾರಂಭಿಸಿತ್ತು. ಹಿಂದಿ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಸೋಶಿಯಲ್ ಮೀಡಿಯಾಗಳಲ್ಲೂ ಅಮೀಶಾ ಪಟೇಲ್ ಬಹಳ ಆ್ಯಕ್ಟಿವ್ ಆಗಿದ್ದು ಆಗಾಗ ತಮ್ಮ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಗದರ್ ಚಿತ್ರೀಕರಣದ ಸಮಯದಲ್ಲಿ ನಡೆದ ಭಯಾನಕ ಆಘಾತಕಾರಿ ಘಟನೆಯ ಕುರಿತು ಸಂದರ್ಶನದ ಒಂದರಲ್ಲಿ ನಟಿ ಅಮೀಶಾ ಪಟೇಲ್ ಮುಕ್ತವಾಗಿ ಮಾತನಾಡಿದ್ದಾರೆ.ಗದರ್ ಚಿತ್ರದ ಒಂದು ಪ್ರಮುಖ ದೃಶ್ಯದ ಶೂಟಿಂಗ್ ರೈಲ್ವೇ ನಿಲ್ದಾಣದಲ್ಲಿ ಆಗುತ್ತಿದ್ದು ಅಲ್ಲಿಗೆ 20,000 ಜನರು ನೆರೆದಿದ್ದರು. ತನಗೆ ಸಿನಿಮಾದ ಎಮೋಶನಲ್ ಸೀನ್ ನೀಡಲಾಗಿದ್ದು ಅದಕ್ಕಾಗಿ ತಯಾರಿ ನಡೆಸುತ್ತಿದ್ದೆ ಆದರೆ ಇದೇ ಜನಸಂದಣಿಯಲ್ಲಿ ಕೆಲವು ಜನರು ತನ್ನೊಂದಿಗೆ ಅನುಚಿತ ವರ್ತನೆ ಮಾಡಿದ್ದಾರೆ. ಸೆಲೆಬ್ರಿಟಿಗಳ ಮೇಲೂ ಇಂತಹ ದೌರ್ಜನ್ಯ ಇದ್ದೇ ಇರುತ್ತೆ ಎಂದು ಆ ಕಹಿ ಘಟನೆ ನೆನಪಿಸಿಕೊಂಡರು.

ಶೂಟಿಂಗ್ ಸ್ಥಳದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ನಟಿ ಅಮೀಶಾ ಪಟೇಲ್ ಕಿಡಿಕಾರಿದ್ದರಂತೆ. ತಕ್ಷಣ ಅಲ್ಲಿನ ಚಿತ್ರತಂಡಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು ನಿರ್ದೇಶಕರು ಸೆಟ್ನಲ್ಲಿ ಸಂಪೂರ್ಣ ಸುರಕ್ಷತೆಯನ್ನು ಖಚಿತ ಪಡಿಸಿ ಕೊಂಡರು. ಬಳಿಕ ಪೊಲೀಸ್ ರಕ್ಷಣೆಯನ್ನು ಸಹ ಒದಗಿಸಲಾಯಿತು ನಟಿ ಅಮೀಷಾ ಈ ಬಗ್ಗೆ ತಿಳಿಸಿದ್ದಾರೆ.

ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾನು ಇಂತಹ ಅನೇಕ ಕೆಟ್ಟ ವರ್ತನೆಗಳನ್ನು ಅನುಭವಿಸಿದ್ದೇನೆ. ಅಗತ್ಯವಿದ್ದಾಗ ಪ್ರತಿದಾಳಿ ಮಾಡಲು ನಾನು ಎಂದಿಗೂ ಹಿಂಜರಿದಿಲ್ಲ. ನನ್ನ ಮೇಲೆ ಅನುಚಿತವಾಗಿ ವರ್ತಿಸಿದ್ದ ವ್ಯಕ್ತಿ ಯೊಬ್ಬರನ್ನು ತಿರಸ್ಕರಿಸಿ ಎಲ್ಲರೆದುರು ಕಪಾಳಮೋಕ್ಷ ಮಾಡಿದ್ದೇನೆ. ಪ್ರತಿಯೊಬ್ಬ ಮಹಿಳೆಯೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕು. ಅದು ಅಪರಿಚಿತರಾಗಿರಲಿ, ಕುಟುಂಬದ ಸದಸ್ಯರಾಗಿರಲಿ, ಸ್ನೇಹಿತರಾಗಿರಲಿ ಯಾರೇ ಆದರೂ ಮಹಿಳೆಯನ್ನು ಅನುಚಿತವಾಗಿ ಮುಟ್ಟಿದರೆ, ಅದನ್ನು ತಡೆದುಕೊಳ್ಳುವ ಅನಿವಾರ್ಯತೆ ಇಲ್ಲ ಬದಲಾಗಿ ವಿರೋಧಿಸಿ ಧೈರ್ಯವಾಗಿ ಅಂತವರನ್ನು ಎದುರಿಸಬೇಕು ಎಂದು ಅವರು ಹೇಳಿದ್ದಾರೆ.

ಅಮೀಶಾ ಪಟೇಲ್ ವೈವಾಹಿಕ ಜೀವನದಿಂದ ದೂರವಿದ್ದಾರೆ. ಸಿನಿಮಾ,ಟ್ರಾವೆಲ್ ಎಂದು ತಮ್ಮ ಬ್ಯುಟಿಫುಲ್ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇವರು ದುಬೈ ಪ್ರವಾಸಕ್ಕೆ ತೆರಳಿದ್ದು ಈ ಸಂಬಂಧಿತ ಕೆಲ ಫೋಟೊ ಕೂಡ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ವೀವ್ಸ್ ಗಳಿಸಿದೆ.