ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರ ಕರ್ನಾಟಕದ ಪ್ರತಿಭೆಗಳ ʻಹುಲಿಬೀರʼ ಸಿನಿಮಾದ ‘ಜಿಗ್ರಿ ದೋಸ್ತ್’ ಸಾಂಗ್‌ ರಿಲೀಸ್‌; ಇದು ಹಳ್ಳಿಗಳ ಉದ್ಧಾರದ ಕಥೆ

ಉತ್ತರ ಕರ್ನಾಟಕದ ಪ್ರತಿಭೆಗಳು ಒಗ್ಗೂಡಿ ನಿರ್ಮಿಸಿರುವ, ಹಳ್ಳಿಗಳ ಉದ್ಧಾರ ಹಾಗೂ ನಗರ ವಲಸೆ ತಡೆಯುವ ಸೂಕ್ಷ್ಮ ಕಥಾಹಂದರ ಹೊಂದಿರುವ ‘ಹುಲಿಬೀರ’ ಚಿತ್ರದ ‘ಜಿಗ್ರಿ ದೋಸ್ತ್’ ಹಾಡು ಬಿಡುಗಡೆಯಾಗಿದೆ. ಮದರಂಗಿ ಮಲ್ಲಿಕಾರ್ಜುನ್ ನಿರ್ದೇಶನದ, ಅಂಜನ್ ಹಾಗೂ ಚೈತ್ರಾ ತೋಟದ ನಟನೆಯ ಈ ಮಣ್ಣಿನ ಸೊಗಡಿನ ಚಿತ್ರಕ್ಕೆ ವೀರಸಮರ್ಥ್ ಜಾನಪದ ಶೈಲಿಯ ಸಂಗೀತ ನೀಡಿದ್ದಾರೆ.

ʻಹುಲಿಬೀರʼ ಚಿತ್ರದ ಹೊಸ ಹಾಡು ರಿಲೀಸ್; ಇದು ಹಳ್ಳಿಗಳ ಉದ್ಧಾರದ ಕಥೆ

-

Avinash GR
Avinash GR Jun 19, 2026 2:15 PM

ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ, ಮಣ್ಣಿನ ಸೊಗಡಿನ ಕಥಾಹಂದರ ಹೊಂದಿರುವ ‘ಹುಲಿಬೀರ’ ಚಿತ್ರದ ‘ಜಿಗ್ರಿ ದೋಸ್ತ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಸಾಯಿ ಸ್ಟಾರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್. (ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದು, 'ಯರ್ರಾಬಿರ್ರಿ' ಖ್ಯಾತಿಯ ನಟ ಅಂಜನ್ ನಾಯಕನಾಗಿ ಹಾಗೂ ಚೈತ್ರ ತೋಟದ ನಾಯಕಿಯಾಗಿ ನಟಿಸಿದ್ದಾರೆ.

ಹಳ್ಳಿಗಳ ಉದ್ಧಾರದ ಕಥೆ

ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಮಲ್ಲಿಕಾರ್ಜುನ್, "ಈ ಕಥೆ ಐದಾರು ವರ್ಷಗಳ ಹಿಂದೆಯೇ ಮೂಡಿಬಂದಿತ್ತು. ಜುಲೈ 24ಕ್ಕೆ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ. ಹಳ್ಳಿಯ ಮುಗ್ಧ ಹುಡುಗನೊಬ್ಬ ಇಡೀ ತನ್ನೂರನ್ನು ಹೇಗೆ ಉದ್ಧಾರ ಮಾಡುತ್ತಾನೆ ಎಂಬುದು ಸಿನಿಮಾದ ಮುಖ್ಯ ಕಥಾಹಂದರ. ಇಂದಿನ ವಿದ್ಯಾವಂತ ಯುವಕ-ಯುವತಿಯರು ಕೆಲಸ ಅರಸಿ ನಗರಗಳಿಗೆ ವಲಸೆ ಹೋದರೆ ಹಳ್ಳಿಗಳನ್ನು ಬೆಳೆಸುವವರು ಯಾರು? ಈ ಸೂಕ್ಷ್ಮ ಸಮಸ್ಯೆಯನ್ನು ನಾಯಕ 'ಬೀರ' ಹೇಗೆ ಬಗೆಹರಿಸಿ, ಎಲ್ಲರೂ ಮತ್ತೆ ಹಳ್ಳಿಗೆ ಮರಳುವಂತೆ ಮಾಡುತ್ತಾನೆ ಎಂಬ ರೋಚಕ ಕಥೆ ಇಲ್ಲಿದೆ" ಎಂದರು.

Surya Trailer Out: `ಸೂರ್ಯ’ ಸಿನಿಮಾ ಟ್ರೈಲರ್ ರಿಲೀಸ್ ; ಉತ್ತರ ಕರ್ನಾಟಕ ಸೊಗಡಿನ ಒಂದೊಳ್ಳೆ ಕಥೆ

ನಾಲ್ಕು ಜಾನಪದ ಶೈಲಿಯ ಹಾಡುಗಳು

ಸಂಗೀತ ನಿರ್ದೇಶಕ ವೀರಸಮರ್ಥ್ ಮಾತನಾಡಿ, "ಚಿತ್ರದಲ್ಲಿ ಮಣ್ಣಿನ ಸೊಗಡಿನ ನಾಲ್ಕು ಜಾನಪದ ಶೈಲಿಯ ಹಾಡುಗಳು ಹಾಗೂ ಎರಡು ಬಿಟ್‌ಗಳಿವೆ. ನಿರ್ದೇಶಕರು, ಶಿವು ಬೆರ್ಗಿ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. 'ಹುಟ್ಟಿಬಂದೆ ಹುಲಿಬೀರನಾಗಿ' ಹಾಡನ್ನು ಸಂಗೀತಾ ಕಟ್ಟಿ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಕಥೆ ಮತ್ತು ಅಂಜನ್ ನಟನೆ ನೋಡಿ ನಾನೇ ಕಣ್ಣೀರಿಟ್ಟಿದ್ದೇನೆ" ಎಂದರು. ಪ್ರಸ್ತುತ ಬಿಡುಗಡೆಯಾಗಿರುವ 'ಜಿಗ್ರಿ ದೋಸ್ತ್' ಹಾಡಿಗೆ ಮಾಳು ನಿಪನಾಳ ಹಾಗೂ ಶಿವಾನಿ ಧ್ವನಿಯಾಗಿದ್ದಾರೆ.

ಪ್ರತಿ ಮನೆಯಲ್ಲೂ ಇರುವ ಹುಡುಗನ ಕಥೆ

ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡ ನಾಯಕ ಅಂಜನ್, "ನಾನು ಕುಂದಗೋಳದವನು. ಹಳ್ಳಿಯ ಯಾವುದೇ ಸಮಸ್ಯೆ ಬಂದರೂ ಬೀರ ಮುಂದೆ ನಿಂತು ಬಗೆಹರಿಸುತ್ತಾನೆ. ಅದಕ್ಕೇ ಆತನಿಗೆ 'ಹುಲಿಬೀರ' ಎನ್ನುತ್ತಾರೆ. ಪ್ರತಿ ಮನೆಯಲ್ಲೂ ಇಂತಹ ಒಬ್ಬ ಹುಡುಗ ಇರುತ್ತಾನೆ. ಸಮಾಜದಲ್ಲಿ ಕೊನೆಯ ಆದ್ಯತೆ ಸಿಗುವ ಹುಡುಗನೊಬ್ಬ ಇಡೀ ಊರನ್ನೇ ಹೇಗೆ ಬದಲಾಯಿಸುತ್ತಾನೆ ಎಂಬುದೇ ನನ್ನ ಪಾತ್ರ. ಸಿನಿಮಾ ನೋಡಿದ ಹಲವರು ಕ್ಲೈಮ್ಯಾಕ್ಸ್ ನೋಡಿ ಕಣ್ಣೀರು ಹಾಕಿದ್ದಾರೆ," ಎಂದರು. ಚಿತ್ರದಲ್ಲಿ ನಾಯಕನ ತಾಯಿಯಾಗಿ ಸುನಂದಮ್ಮ ಹಾಗೂ ಮಾವನ ಪಾತ್ರದಲ್ಲಿ ಮಲ್ಲು ಬಾಗಲಕೋಟೆ ನಟಿಸಿದ್ದಾರೆ.

ನಿರ್ಮಾಪಕರಾದ ದಾವಲ್ ಸಾಹೇಬ, ಅಶೋಕ್ ಹಾಗೂ ಸುಜಾತ ಗಿರೀಶ್ ಮಾತನಾಡಿ, ಸಿನಿಮಾ ರಿಲೀಸ್ ಹಂತಕ್ಕೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಚಿತ್ರಕ್ಕೆ ಸನಾತನ ಅವರ ಛಾಯಾಗ್ರಹಣವಿದ್ದು, ಧರ್ಮ ವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಹಳ್ಳಿಯ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಗುರುರಾಜ್, ಆದಿತ್ಯ ಶಶಿಕುಮಾರ್ ಮತ್ತು ವಿಕ್ರಂ ಶ್ರೀಧರ್ ಚಿತ್ರಕ್ಕೆ ಯಶಸ್ಸು ಕೋರಿದರು.