ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭೈರಪ್ಪನವರು ವಿಚಾರವಾದಿಯೂ ಹೌದು !

ಭೈರಪ್ಪ ಹಾಗೆ ದೀಪ ಹಿಡಿದು ಮಂಚದಡಿಯ ಹಾವು ಮಾತ್ರವಲ್ಲದೆ ಅಲ್ಲಿರುವ ಇತರ ವಸ್ತು, ಪದಾರ್ಥ ಗಳ ಮೇಲೂ ಪಂಜಿನಂತೆ ಬೆಳಕು ಬೀರಿ ಆ ಪ್ರದೇಶ ಝಗ್ಗನೆ ಬೆಳಗುವಂತೆ ಮಾಡಬಲ್ಲರು. ಹಾಗೆಯೇ ಬೆರಗನ್ನೂ ಕವಿಸಬಲ್ಲರು. ಅವರೊಬ್ಬ ಶುದ್ಧ ಸಾಹಿತಿ. ಶುದ್ಧ ಸಾಹಿತಿಯೆಂದರೆ ಭಾರತೀಯ ಕಾವ್ಯ ಮೀಮಾಂಸೆಯ ಮುಖ್ಯ ತಿರುಳಾದ ರಸತತ್ತ್ವವನ್ನು ಆಧರಿಸಿ ಬರೆಯುವವನು.

ಭೈರಪ್ಪನವರು ವಿಚಾರವಾದಿಯೂ ಹೌದು !

-

Profile
Ashok Nayak Jun 21, 2026 1:00 PM

ಗ.ನಾ.ಭಟ್ಟ

ಭಾರತದ ಪ್ರಮುಖ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರನ್ನು ಅವರು ನಿಧನರಾಗಿ ಒಂಭತ್ತು ತಿಂಗಳು ಕಳೆಯುತ್ತಿರುವ ಈ ಸಂದರ್ಭದಲ್ಲಿ, ಅವರನ್ನು ಸ್ಮರಿಸಿಕೊಳ್ಳುವ ಒಂದು ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ‘ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ’ ಹಮ್ಮಿಕೊಂಡಿದೆ. 21-06-2026, ಭಾನುವಾರ ಸಂಜೆ 4 ಗಂಟೆಗೆ ಮೈಸೂರಿನ ಬಿ.ಎಸ್.ಎಸ್.ವಿದ್ಯೋದಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

ಪ್ರೊ.ಅಜಕ್ಕಳ ಗಿರೀಶ್ ಭಟ್ಟ, ವಿದ್ವಾನ್ ಗ.ನಾ.ಭಟ್ಟ, ಡಾ. ಹೆಚ್.ವಿ.ನಾಗರಾಜ ರಾವ್, ಆರ್. ವಾಸುದೇವ ಭಟ್ ಮೊದಲಾದವರು ಪಾಲ್ಗೊಳ್ಳುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ವಹಿಸುವರು. ಈ ಸಂದರ್ಭದಲ್ಲಿ, ಭೈರಪ್ಪನವರ ನಿಖರ ಮತ್ತು ದಿಟ್ಟ ವಿಮರ್ಶಾವೈಖರಿಯ ಕುರಿತು ಒಂದು ಬರಹ ಗ.ನಾ.ಭಟ್ಟ ಕನ್ನಡದ ಪ್ರಮುಖ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪನವರು ಒಳ್ಳೆಯ ಲೇಖಕರೂ, ಶ್ರೇಷ್ಠಮಟ್ಟದ ಕಾದಂಬರಿಕಾರರೂ ಆಗಿರುವಂತೆ ಮಹಾವಿಚಾರವಾದಿಯೂ, ಪ್ರಖರ ಚಿಂತಕರೂ, ಗಟ್ಟಿ ವಿಮರ್ಶಕರೂ ಹೌದು. ಅವರ ವಿಮರ್ಶೆ ಪಕ್ಷಾಭಿಮಾನವಿಲ್ಲದ್ದು; ನ್ಯಾಯೈಕ ನಿಷ್ಠುರ ವಾದುದು; ಸಕಲಪಕ್ಷದರ್ಶಿಯಾದುದು. ಮಲಗುವ ಕೋಣೆಯಲ್ಲಿ ಮಂಚದ ಕೆಳಗಡೆ ಹಾವಿದೆ ಎಂಬ ಭೀತಿ ತೋರಿದಾಗ ನಮಗೆ ಬೇಕಾದ ಉಪಕಾರಿ ದೊಣ್ಣೆ ಹಿಡಿದವನು ಮಾತ್ರವಲ್ಲ; ದೀಪ ಹಿಡಿದವನೂ ಬೇಕಾಗುತ್ತದೆ; ಅವನೂ ಅಷ್ಟೇ ಮುಖ್ಯನಾಗುತ್ತಾನೆ.

ಭೈರಪ್ಪ ಹಾಗೆ ದೀಪ ಹಿಡಿದು ಮಂಚದಡಿಯ ಹಾವು ಮಾತ್ರವಲ್ಲದೆ ಅಲ್ಲಿರುವ ಇತರ ವಸ್ತು, ಪದಾರ್ಥಗಳ ಮೇಲೂ ಪಂಜಿನಂತೆ ಬೆಳಕು ಬೀರಿ ಆ ಪ್ರದೇಶ ಝಗ್ಗನೆ ಬೆಳಗುವಂತೆ ಮಾಡಬಲ್ಲರು. ಹಾಗೆಯೇ ಬೆರಗನ್ನೂ ಕವಿಸಬಲ್ಲರು. ಅವರೊಬ್ಬ ಶುದ್ಧ ಸಾಹಿತಿ. ಶುದ್ಧ ಸಾಹಿತಿಯೆಂದರೆ ಭಾರತೀಯ ಕಾವ್ಯಮೀಮಾಂಸೆಯ ಮುಖ್ಯ ತಿರುಳಾದ ರಸತತ್ತ್ವವನ್ನು ಆಧರಿಸಿ ಬರೆಯುವವನು.

ಭೈರಪ್ಪ ಆ ವರ್ಗಕ್ಕೆ ಸೇರಿದವರು; ಅವರು ಯಾವ ಪಂಥ, ಗುಂಪಿಗೂ ಸೇರದೆ ಇದ್ದವರು. ಆದರೆ ಅವರಲ್ಲಿ ಖಚಿತ ಚಿಂತನೆಯಿತ್ತು. ‘ನೆಹರೂಗೆ ಕಮ್ಯೂನಿಸಂನ ಅಂಧಭಕ್ತಿಯಿತ್ತು. ಲಕ್ಷಗಟ್ಲೆ ಜನರನ್ನು ಕೊಲೆ ಮಾಡಿಸಿದ್ದ ಲೆನಿನ್ ಹಾಗೂ ಸ್ಟಾಲಿನ್‌ರನ್ನು ಅವರು ಹೊಗಳುತ್ತಿದ್ದರು. ಅವರ ಮಿದೆಳೆಲ್ಲ ಕಮ್ಯೂನಿಸ್ಟ್ ಪಾಂಪ್ಲೆಟ್‌ಗಳಿಂದ ತುಬಿಹೋಗಿತ್ತು’ ಎಂದು ಭೈರಪ್ಪ ಬರೆಯುತ್ತಾರೆ. (ಸಾಕ್ಷಿ ಪರ್ವ-75)

ಇದನ್ನೂ ಓದಿ: S L Byrappa: ಇಂದು ಭೈರಪ್ಪ ಪ್ರತಿಷ್ಠಾನ ಉದ್ಘಾಟನೆ

ಶುದ್ಧಸಾಹಿತ್ಯ ಅಥವಾ ರಸತತ್ತ್ವದ ಬಗ್ಗೆ ಭೈರಪ್ಪನವರು ಸ್ವಾನುಭವದ ಮೂಲಕ ಬಹು ಸುಂದರ ವಾಗಿ ವಿವೇಚಿಸಬಲ್ಲರು. ಅವರು ತೀ.ನಂ.ಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆ, ನಗೇಂದ್ರರ ರಸಸಿದ್ಧಾಂತ, (ಹಿಂದಿ) ರಾಘವನ್‌ರ ‘ನಂಬರ್ ಆಫ್ ರಸಾಸ್’ ಆನಂದಕುಮಾರಸ್ವಾಮಿ ಯವರ ಕೃತಿಗಳು, ಹಿರಿಯಣ್ಣನವರ ‘ಆರ್ಟ್ ಎಕ್ಸಿಪೀರಿಯನ್ಸ್’ ನಂತಹ ಕೃತಿಗಳನ್ನು ತುಂಬಾ ಚೆನ್ನಾಗಿ ಓದಿಕೊಂಡಿದ್ದಾರೆ.

ಇವುಗಳ ಹಿನ್ನೆಲೆಯಲ್ಲಿ ಅವರು ಸಾಹಿತ್ಯ ಕೃತಿಗಳಲ್ಲಿ ರಸಸ್ಥಾನಗಳನ್ನು ಚೆನ್ನಾಗಿ ಗುರುತಿಸ ಬಲ್ಲರು ಮತ್ತು ಬರೆಯಬಲ್ಲರು. ಭಾರತೀಯ ಕಾವ್ಯಮೀಮಾಂಸೆಯ ರಸಸಿದ್ಧಾಂತ ಮತ್ತು ಅವರು ಓದಿದ ತತ್ತ್ವಶಾಸ್ತ್ರದಿಂದ ಪರಿಪಕ್ವಗೊಂಡ, ಸಂಸ್ಕಾರಗೊಂಡ ಅವರ ಮನಸ್ಸು ಸಹಜವಾಗಿಯೇ ಶುದ್ಧ ಸಾಹಿತ್ಯ ರಚನೆಗೆ ತೊಡಗಿತು.

ಇದರ ಬಗ್ಗೆ ಅವರು ಅಲ್ಲಲ್ಲಿ ಆಗಾಗ ಹೇಳುವ ಮಾತು ತುಂಬಾ ಗಮನಾರ್ಹವಾದುದು. ‘ನಾನೇಕೆ ಬರೆಯುತ್ತೇನೆ?’ ಎಂಬ ಅವರ ಕೃತಿಯಲ್ಲಿ ‘ಪರ್ವ ಬರೆದದ್ದು’ ಎಂಬ ಅಧ್ಯಾಯದಲ್ಲಿ ‘ಮಹಾ ಭಾರತದ ಕ್ರಿಯೆಯು ನಡೆದದ್ದು ಮೂರು ನಾಲ್ಕು ಸಾವಿರ ವರ್ಷದ ಹಿಂದೆ ಎಂದು ಭಾವಿಸಿದರೂ ವೇಷಭೂಷಣ, ಆಹಾರ, ನೆರಳುಗಳ ಬಾಹ್ಯವಿವರವು ನಮ್ಮದಕ್ಕಿಂತ ಭಿನ್ನವಾದರೂ ಸಾಹಿತ್ಯ ಕೃತಿಯ ಮೂಲದ್ರವ್ಯವು ಮಾನವ ಭಾವವೇ ಆಗಿದೆ.

ಮನುಷ್ಯನ ಆಸೆ, ಆಕಾಂಕ್ಷೆ, ನಿರಾಶೆ, ಸುಖ- ದುಃಖಗಳೇ ಆಗಿವೆ. ಈ ವಸ್ತುವನ್ನು (ಪರ್ವವನ್ನು) ಕುರಿತು ಬರೆಯಲು ನಾನು ಹೊರಟಿರುವುದು ಐತಿಹಾಸಿಕ ಕೃತಿಯೊಂದನ್ನು ನಿರ್ಮಿಸುವ ಉದ್ದೇಶ ದಿಂದ ಅಲ್ಲ. ನನ್ನನ್ನು ಕಾಡುತ್ತಿರುವ ಹಲವು ಭಾವಗಳನ್ನು, ಮಾನವಸಂಬಂಧದ ಪ್ರಶ್ನೆಗಳನ್ನು ಶೋಧಿಸಲು ಈ ಐತಿಹಾಸಿಕ ವಸ್ತುವು ಅನುಕೂಲವಾದ ಸನ್ನಿವೇಶವನ್ನು ಕೊಡುತ್ತದೆಯಾದ್ದರಿಂದ ಇದನ್ನು ಆರಿಸಿಕೊಂಡಿದ್ದೇನೆ’ ಎಂದು ಹೇಳಿರುವುದು ಅವರ ಶುದ್ಧಸಾಹಿತ್ಯ ರಚನೆಯ ಕಾರಣ ವನ್ನು ತಿಳಿಸುತ್ತದೆ.

ಇದು ಭೈರಪ್ಪನವರ ಸಾಹಿತ್ಯ ವಿಮರ್ಶೆಯ ಒಂದು ಝಲಕ್ಕಾದರೆ ಅವರು ಅದಮ್ಯವಾಗಿ ಪ್ರೀತಿಸುವ ಸಂಗೀತ ಮತ್ತು ಸಂಗೀತ ಕಲಾವಿದರ ಬಗ್ಗೆ ಮಾಡಿದ ಒಂದು ವಿಮರ್ಶೆ ಚೇತೋಹಾರಿಯೂ, ಒಳನೋಟದಿಂದ ಕೂಡಿದ್ದೂ ಆಗಿದೆ. ಭೈರಪ್ಪನವರು ಬರೋಡ, ಮುಂಬಯಿ, ಅಹಮದಾಬಾದು ಗಳಲ್ಲಿ ನಡೆಯುತ್ತಿದ್ದ ಎಲ್ಲ ಮುಖ್ಯ ಸಂಗೀತ ಕಛೇರಿಗಳಿಗೂ ಹೋಗುತ್ತಿದ್ದರು. ಅಲ್ಲಿ ತಮಗಾದ ಅನುಭವವನ್ನು ಮುಕ್ತವಾಗಿ ತಮ್ಮ ಭಿತ್ತಿಯಲ್ಲಿ ಹಂಚಿಕೊಂಡಿದ್ದಾರೆ.(ಪುಟ-435, 436)

‘ನನ್ನ ಕಾಲದ ಅತ್ಯುತ್ತಮ ಕಲಾವಿದರುಗಳಾದ ರವಿಶಂಕರ, ಅಲೀ ಅಕ್ಬರರರು ಆಗ ಕಲೆಯ ಪ್ರಬುದ್ಧತೆಯನ್ನು ಮುಟ್ಟಿ ಶಾರೀರಿಕ ಕಸುವೂ ಉಳಿದಿರುವ ನಲವತ್ತರ ಪ್ರಾಯದವರು. ಆಗ ಮತ್ತು ಅನಂತರ ಇವರಲ್ಲಿ ಒಬ್ಬೊಬ್ಬರದನ್ನೂ ಮೂವತ್ತು ಕಛೇರಿಯಾದರೂ ನಾನು ಕೇಳಿದ್ದೇನೆ. ಭೀಮಸೇನ ಜೋಶಿಯವರದು ಕೂಡಾ ಪ್ರಬುದ್ಧತೆ ಬಂದು ಕಸುವು ಕಿಂಚಿತ್ತೂ ಇಳಿಯದಿದ್ದ ವಯಸ್ಸಿನಿಂದ ಇದುವರೆಗೆ ನಲವತ್ತು ಐವತ್ತು ಕೇಳಿದ್ದೇನೆ.

ಜಸರಾಜ್, ಕುಮಾರ ಗಂಧರ್ವ ಮೊದಲಾದವರನ್ನು ಆಗ ತಾನೆ ಅರಳಿ ನಿಂತಿದ್ದ ಕಾಲದಿಂದ ಕೇಳುತ್ತಿದ್ದೇನೆ. ಉಸುರಿನ ಶಕ್ತಿ ಇದ್ದ ನಲವತ್ತರ ಪ್ರಾಯದಲ್ಲಿ ಬಿಸ್ಮಿಲ್ಲಾರನ್ನು ಹತ್ತು ಹದಿನೈದು ಸಲ ಕೇಳಿದ್ದೇನೆ. ಹರಿಪ್ರಸಾದ ಚೌರಾಸಿಯಾ ಅವರು ಕೊಳಲಿನ ಸಾಧ್ಯತೆಗಳನ್ನು ವಿಸ್ತರಿಸುತ್ತಾ ಬೆಳೆಯ ತೊಡಗಿದುದನ್ನು, ಇನ್ನೂ ಬೆಳೆಯುತ್ತಿರುವುದನ್ನು ನೋಡುತ್ತಿದ್ದೇನೆ.

ಚಲನಶೀಲ ಸಂಗೀತವನ್ನು ಚಿತ್ರಕಲೆಯಂತಹ ಸ್ಥಗಿತ ಸೌಂದರ್ಯವನ್ನಾಗಿ ಮಾರ್ಪಡಿಸುತ್ತಿದ್ದ ಅಮೀರಖಾನರ ಪ್ರಭು ಸಂಯಮವನ್ನು ಕೇಳಿ ಬೆರಗಾಗಿದ್ದೇನೆ. ಗಂಗೂಬಾಯಿ ಮೊರೆಯುವ ಭಾವಶಕ್ತಿಯನ್ನು ಉಳಿದ ಯಾವ ಕಲೆಯೂ ಮುಟ್ಟಬೇಕಾದ ಹದವೆನ್ನುವಂತೆ ಭಾವಿಸಿದ್ದೇನೆ. ರಾಜಗುರುವಿನ ಪ್ರತಿಯೊಂದು ಕಛೇರಿಯಲ್ಲೂ ನಿರಾಶನಾಗಿದ್ದೇನೆ. ಅವರಿಗಿದ್ದ ಧ್ವನಿಶ್ರೇಣಿ, ಸ್ವರಜ್ಞಾನ, ರಾಗ ಹಾಗೂ ಹಾಡುಗಳ ಸಂಗ್ರಹದಲ್ಲಿ ಅದ್ಭುತವನ್ನು ಕೊಡಬಹುದಿತ್ತು. ಆದರೆ ಗಾಯನದಲ್ಲಿ ಮಗ್ನತೆ ಇರಲಿಲ್ಲ’ ಎಂದು ಸಾಧಾರಿತವಾಗಿ ವಿಮರ್ಶಿಸುತ್ತಾರೆ.

‘ಮಲ್ಲಿಕಾರ್ಜುನ ಮನ್ಸೂರರ ಗಾಯನದಲ್ಲಿ ಪಾಂಡಿತ್ಯ ಹೆಚ್ಚು. ಅಲಂಕಾರ ವಿನ್ಯಾಸ ಹೆಚ್ಚು. ಅದು ಅವರ ಘರಾಣೆಯ ಲಕ್ಷಣ. ಆದರೆ ರಸ ಕಡಿಮೆ. ಪಂಡಿತವಲಯದಲ್ಲಿ ಕೆಲವು ವಿಮರ್ಶಕರ ವರ್ತುಲದಲ್ಲಿ ಅವರಿಗೆ ಹೆಸರಿದ್ದರೂ ರಸಿಕರನ್ನು ಎಳೆದು ತಂದು ಕಟ್ಟಿ ನಿಲ್ಲಿಸುವ ಗುಣ ಅವರ ಗಾಯನಕ್ಕಿಲ್ಲವೆಂದು ನನ್ನ ಅನುಭವವೂ ಹೌದು.

ಉತ್ತರ ಭಾರತದ ಕಛೇರಿಗಳಲ್ಲಿ ನಾನು ಗಮನಿಸಿರುವ ಸಭಿಕರ ಪ್ರತಿಕ್ರಿಯೆಯೂ ಹೌದು. ಪರ್ವಿನ್ ಸುಲ್ತಾನ್ ಕುಳ್ಳಗಿದ್ದರೂ ತೆಳ್ಳಗೆ ಬೆಳ್ಳಗೆ ದುಂಡುಮುಖದ ಚೆಲುವೆಯಾಗಿದ್ದಳು. ಜೇನಿನಂತಹ ಕಂಠ. ಮೇಲಿನ ಸಪ್ತಕದಲ್ಲೂ ಸಂಚರಿಸುವ ಶ್ರುತಿ. ಒಬ್ಬ ದೊಡ್ಡ ಕಲಾವಿದೆಯ ಉದಯವಾಯಿತೆಂದು ನಾನೂ ಬೆರಗಾಗಿದ್ದೆ. ಸಂಗೀತ ವನ್ನುಮೀರಿದ ಆಕರ್ಷಣೆ ನನಗೆ ಆಕೆಯಲ್ಲಿ ಹುಟ್ಟಿತ್ತು.

ಇನ್ನೊಮ್ಮೆ ಎಂದು ಅವಳ ಗಾಯನವನ್ನು ಕೇಳಿಯೇನೋ ಎಂದು ಹಂಬಲದಲ್ಲಿ ತೊಳಲುತ್ತಿದ್ದೆ. ಒಂದೇ ತಿಂಗಳಲ್ಲಿ ಅವಳ ಗಾಯನ ಮುಂಬಯಿಯಲ್ಲಿದೆಯೆಂದು ತಿಳಿದು ಅಷ್ಟು ದೂರ ಓಡಿದೆ. ಮೊದಲ ಸಲ ಹಾಡಿದ ಮೂರೂ ಬಿಹಾಗನ್ನೇ ಹಾಡಿದಳು. ಅವೇ ವರಸೆಗಳು. ಅವೇ ಜಲ್ದ್‌ಬಾಜಿಗಳು. ಪ್ರೇಕ್ಷಕರನ್ನು ಗೆದ್ದು ಹೊಸಕಿ ಹಾಕುವ ಅದೇ ಗೂಳಿಯಾಟ. ಆದರೆ ನನಗೆ ಮೋಹ ಕಳೆದಿರಲಿಲ್ಲ. ಇನ್ನೂ ಮೆಚ್ಚಿಕೊಂಡೆ’.

‘ಇದಾದ ಎರಡು ತಿಂಗಳ ನಂತರ ಜಯಪುರದಲ್ಲಿ ನಡೆದ ಅವಳ ಸಂಗೀತ ಕಛೇರಿಗೆ ಹೋದೆ. ಮತ್ತೆ ಅವೇ ಮೂರೂ ಬಿಹಾಗ್. ಡಿಟ್ಟೊ ಸಂಚಾರಮಾರ್ಗಗಳು. ವಿಮಾನಚಾಲನಾ ಪ್ರದರ್ಶನದಲ್ಲಿ ಮಾಡುವಂತಹ ಪಲ್ಟಿಯಾಟ ಗಳು. ಸಭಿಕರ ಮನಸ್ಸನ್ನು ಗೆಲ್ಲುವ ನಿರೀಕ್ಷಿತ ತಂತ್ರಗಳು ಫಲಿಸಿದಾಗ ಎದೆಯುಬ್ಬಿಸುವ ವಿಜೃಂಭಣೆಯ ಬೀಗು. ಮುಂದಿನ ರಾಗ. ಅದರ ಮುಂದಿನ ಠುಮರಿ. ಕೊನೆಯದು ಹೀಗೆ ಎಲ್ಲವೂ ಅವೇ. ನನ್ನ ಭ್ರಮೆಯ ಪೊರೆ ಕಳಚಿಹೋಯಿತು. ಕಲಾವಿದರಿಗೆ ಕಲೆಯನ್ನು ಬಿಟ್ಟು ಬೇರೆ ಆಕರ್ಷಣೆ ಇರಬಾರದು; ಕಲೆಗೆ ರಸವನ್ನು ಬಿಟ್ಟು ಬೇರೆ ಆಕರ್ಷಣೆ ಸಲ್ಲದು ಎನ್ನಿಸತೊಡ ಗಿತು. ಈಕೆ ಕೂಡಾ ಮುಂದೆ ಬೆಳೆಯಲಿಲ್ಲ’ ಎಂದು ಷರಾ ಬರೆಯುತ್ತಾರೆ.

ಎಂತಹ ರೋಚಕ ವಿಮರ್ಶೆ ಇದು! ಒಬ್ಬೊಬ್ಬರ ಇತಿ-ಮಿತಿಯನ್ನೂ, ಸಾಮರ್ಥ್ಯವನ್ನೂ ಅಳೆದು ತೂಗಿ ನೋಡುವ ಈ ವಿಮರ್ಶೆ ಸಂಗೀತ ಆಸ್ವಾದಿ ಸುವವನಿಗೆ, ಸಹೃದಯರಿಗೆ ದಾರಿದೀಪವೇ ಆಗಿದೆ.

ನಮ್ಮಲ್ಲಿ ಇಲ್ಲ ಸಮೃದ್ಧ ವಿಮರ್ಶೆ

ಭೈರಪ್ಪನವರ ಸಂಗೀತ ವಿಮರ್ಶೆ ಕುರಿತು ಏಕೆ ಇಷ್ಟೆಲ್ಲ ಹೇಳಬೇಕಾಯಿತೆಂದರೆ -ನಮ್ಮ ಕನ್ನಡ ಸಾಹಿತ್ಯಪ್ರಪಂಚದಲ್ಲಿ ವಿಮರ್ಶೆ ಎಂಬುದು ಸಮೃದ್ಧವಾಗಿ ಬೆಳೆದು ಬಂದಿಲ್ಲ. ಅದರಲ್ಲೂ ಸಂಗೀತದಂತಹ ಮಹಾನ್ ಕಲೆಯ ಬಗ್ಗೆ, ಕಲಾವಿದರ ಬಗ್ಗೆ ವಿಮರ್ಶೆ ತುಂಬಾ ಕಡಿಮೆ. ಭೈರಪ್ಪ ನವರು ಒಂದಿಷ್ಟು ದಿವಸ ಸಂಗೀತಪಾಠವನ್ನೂ ಹೇಳಿಸಿಕೊಂಡಿದ್ದರು. ಹಾಗಾಗಿಯೇ ಅವರ ವಿಮರ್ಶೆಗೆ ಒಂದು ಅಥೆಂಟಿಸಿಟಿ ಒದಗಿ ಬರುತ್ತದೆ.

‘ಕಲಾವಿಮರ್ಶೆಯೆಂದರೆ ಶಕ್ತನಾದ ಸೂಕ್ಷ್ಮಜ್ಞನಾದ ಸಹೃದಯನೊಬ್ಬ ಅದನ್ನು ಆಸ್ವಾದಿಸಿ, ಆಲೋಚಿಸಿ ಅದರ ಗುಣದೋಷಗಳನ್ನು ವಿವೇಚಿಸಿ ಅದರ ಬೆಲೆ ಕಟ್ಟುವ ಒಂದು ನಿಷ್ಪಕ್ಷಪಾತ ಪ್ರಯತ್ನ’ ಎಂದು ಡಾ|| ಜಿ.ಎಸ್.ಶಿವರುದ್ರಪ್ಪನವರು ಹೇಳುತ್ತಾರೆ. ಅಂತಹವನಿಗೆ ಸೂಕ್ಷ್ಮದೃಷ್ಟಿ ಬೇಕು; ಚಿತ್ತಸ್ವಾಸ್ಥ್ಯ ಬೇಕು. ಭೈರಪ್ಪ ಅವನ್ನೆಲ್ಲ ಹೊಂದಿದವರಾಗಿದ್ದರು. ಆ ಕಾರಣಕ್ಕಾಗಿಯೆ ಸಂಗೀತವನ್ನು ಕುರಿತಾಗಿಯೇ ‘ಮಂದ್ರ’ದಂತಹ ಅಪೂರ್ವ ಕಾದಂಬರಿ ಉದಯವಾಯಿತು.

ರಾಜಕೀಯ ವಿಶ್ಲೇಷಣೆ

ಅವರ ಅಂತಹ ಚಿಂತನ-ಮಂಥನಗಳಲ್ಲಿ ರಾಜಕಿಯ ವಿಶ್ಲೇಷಣೆಯೂ ಒಂದು. “ಪ್ರಜಾಪ್ರಭುತ್ವ ದಲ್ಲಿ ಒಂದು ಪರ್ಯಾಯಧ್ವನಿಯಿರಬೇಕು’ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಸಂದರ್ಶಕರು ಕೇಳಿದ ಪ್ರಶ್ನೆಯೊಂದಕ್ಕೆ ಭೈರಪ್ಪ ಉತ್ತರಿಸಿದ್ದು ಭಾರತದ ರಾಜಕಾರಣಿಗಳು ಕಲಿಯುವ ಪಾಠ ತುಂಬಾ ಇದೆ ಎಂಬುದನ್ನು ಸಾರುತ್ತದೆ.

ಭೈರಪ್ಪ ಹೇಳುತ್ತಾರೆ-‘ಸರಕಾರದ ನೀತಿಗಳೆಲ್ಲವನ್ನೂ ಏಕೆ ವಿರೋಧಿಸಬೇಕು? ಒಳ್ಳೆಯ ನೀತಿ ಗಳನ್ನೇಕೆ ಬೆಂಬಲಿಸಬಾರದು? ನಮ್ಮ ದೇಶದಲ್ಲಿ ವಿರೋಧಪಕ್ಷವೆಂದರೆ ಅದು ಸರಕಾರವು ಮಾಡಿ ದ್ದೆಲ್ಲವನ್ನೂ ವಿರೋಧಿಸಬೇಕು ಎಂಬ ತಿಳಿವಳಿಕೆಯಿದೆ. ಪಾಶ್ಚಾತ್ಯ ದೇಶಗಳಲ್ಲಿ ಹಾಗೇನಿಲ್ಲ’ ಎನ್ನುತ್ತಾ ಅವರು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಧ್ವಂಸ ಮಾಡಿದ ಒಸಾಮಾ ಬಿನ್ ಲಾಡೆನ್‌ನ್ನು ಅಲ್ಲಿಯ ಸರಕಾರ ಹೇಗೆ ಶಿಕ್ಷಿಸಿತು ಎಂಬುದನ್ನು ತುಂಬಾ ಸ್ವಾರಸ್ಯಕರವಾಗಿ ಮತ್ತು ಬೋಧಪ್ರದವಾಗಿ ಬಣ್ಣಿಸಿದ್ದಾರೆ. ಅದನ್ನು ಕುರಿತು ನಮ್ಮ ಸರಕಾರ ಮತ್ತು ನಮ್ಮ ಜನ ಹತ್ತು ಸಲ ಯೋಚಿಸುವಂತೆ ಮಾಡಿದ್ದಾರೆ. ಅದರಿಂದ ನಮ್ಮವರು ಅದೆಂತಹ ನಾಚಿಕೆಗೇಡಿನವರು, ಭ್ರಷ್ಟರು, ಅಧಃಪಾತ ಹೊಂದಿದವರು ಎಂಬುದು ವೇದ್ಯವಾಗುತ್ತಾ ನಾವು ತಲೆತಗ್ಗಿಸುವಂತೆ ಆಗಿಬಿಡುತ್ತದೆ.

ಅದು ನಡೆದದ್ದು ಬುಷ್ ಅಧ್ಯಕ್ಷರಾಗಿದ್ದ ಕಾಲದಲ್ಲಿ. ಆ ದುರ್ಘಟನೆಗೆ ಬುಷ್‌ನ ನಡೆಗಳಷ್ಟೇ ಕಾರಣ ಎಂದು ಯಾವ ವಿರೋಧಪಕ್ಷದವರೂ ಅವನನ್ನು ವಿರೋಧಿಸಲಿಲ್ಲ. ಅದೇ ನಮ್ಮಲ್ಲಾಗಿದ್ದಿದ್ದರೆ ‘ಭದ್ರವಾ ವೈಫಲ್ಯವಾಗಿದೆ, ನಮ್ಮ ಭದ್ರತಾವ್ಯವಸ್ಥೆ ಸರಿ ಇಲ್ಲ; ಇವರು ಯೂಸ್ಲೆಸ್; ಇವರಿಗೆ ಸಂಬಳ ಕೊಡುವುದು ವ್ಯರ್ಥ. ಇದಕ್ಕೆ ಸಂಬಂಧಪಟ್ಟ ಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು’ ಎಂದೆಲ್ಲಾ ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು. ಆದರೆ ಅಲ್ಲಿ ಎಲ್ಲರೂ ಸರಕಾರಕ್ಕೆ ಬೆಂಬಲವಾಗಿ ನಿಂತರು. ಆತಂಕವಾದಿಗಳನ್ನು ಏನು ಮಾಡಬೇಕು ಎಂಬುದನ್ನು ಸರಕಾರವು ತೀರ್ಮಾನಿಸಿ ಅದರಂತೆ ಕಾರ್ಯಪ್ರವೃತ್ತವಾಯಿತು. ಆ ಆಕ್ರಮಣದ ರೂವಾರಿಯಾದ ಒಸಾಮಾ ಬಿನ್ ಲಾಡೆನ್ನನ್ನು ಶಿಕ್ಷಿಸಿದವನು ಬುಷ್ ನಂತರ ಅಧ್ಯಕ್ಷನಾದ ಒಬಾಮಾ. ಅದು ಬುಷ್ ಕಾಲದಲ್ಲಿ ಆದದ್ದು ಎಂದು ಆತ ಬುಷ್‌ನನ್ನು ಕುರಿತು ಒಂದು ಮಾತನ್ನೂ ಆಡಲಿಲ್ಲ.

ಒಬಾಮಾ ಆದಮೇಲೆ ಟ್ರಂಪ್ ತನ್ನದೇ ನೀತಿ ತರುತ್ತಿದ್ದಾನೆ. ಒಬಾಮಾನದು ತಪ್ಪು ಎಂದು ಇದುವರೆಗೂ ಆತ ಹೇಳಲಿಲ್ಲ. ಆ ಪರಿಪಕ್ವತೆ ಅವರಿಗಿದೆ. ನಮ್ಮಲ್ಲಿ ಅದಿಲ್ಲ" ಎಂದು ಹೇಳುತ್ತಾರೆ. ನಮ್ಮ ರಾಜಕಾರಣಿಗಳಲ್ಲಿ ಪರಿಪಕ್ವತೆ ಇಲ್ಲ ಎಂದು ಭೈರಪ್ಪನವರು ಹತ್ತೆಂಟು ಕಡೆ ಹೇಳಿದ್ದಾರೆ. ಭೈರಪ್ಪನವರು ಶ್ರೇಷ್ಠಮಟ್ಟದ ಕಾದಂಬರಿಕಾರರಾಗಿರುವಂತೆಯೇ ಶ್ರೇಷ್ಠಮಟ್ಟದ ಚಿಂತಕರೂ, ವಿಮರ್ಶಕರೂ, ವಿಚಾರವಾದಿಯೂ, ಅಪ್ರತಿಮ ರಾಷ್ಟ್ರಭಕ್ತರೂ ಆಗಿದ್ದಾರೆ. ಭೈರಪ್ಪನವರು ಸಾರ್ವಜನಿಕ ಜೀವನಕ್ಕೆ ಸ್ಪಂದಿಸಿ ಬರೆದದ್ದು ಕಡಿಮೆಯಾದರೂ ಬರೆದಷ್ಟು ಮಾತ್ರ ತುಂಬಾ ತೂಕಬದ್ಧವಾಗಿಯೂ, ಪ್ರಮಾಣವತ್ತಾಗಿಯೂ, ಚಿಂತನಪೂರ್ಣವಾಗಿಯೂ ಇದೆ.