Ghaati Box Office Collection: ಬಾಕ್ಸ್ ಆಫೀಸ್ ವಾರ್‌ನಲ್ಲಿ ಗೆದ್ರಾ ಅನುಷ್ಕಾ ಶೆಟ್ಟಿ? ʼಘಾಟಿʼ ಚಿತ್ರ ಗಳಿಸಿದ್ದೆಷ್ಟು?
Ghaati Movie: ಕನ್ನಡತಿ ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಚಿತ್ರ ʼಘಾಟಿʼ ಕೊನೆಗೂ ರಿಲೀಸ್ ಆಗಿದೆ. ಎರಡೆರಡು ಬಾರಿ ರಿಲೀಸ್ ದಿನಾಂಕ ಮುಂದೂಡಿಕೆಯಾಗಿದ್ದ ಈ ಚಿತ್ರ ಇದೀಗ ತೆರೆ ಮೇಲೆ ಬಂದಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಗಮನ ಸೆಳೆದಿದ್ದು, ಗಳಿಸಿದ್ದೆಷ್ಟು ಎನ್ನುವ ವಿವರ ಇಲ್ಲಿದೆ.

-

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್, ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಈಗಲೂ ಬಹುಬೇಡಿಕೆಯ ನಟಿ. ಮಹಿಳಾ ಪ್ರಧಾನ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ರೂ. ದೋಚಬಲ್ಲದು ಎಂದು ತೋರಿಸಿಕೊಟ್ಟ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದ್ದರೂ ಇನ್ನೂ ಕ್ರೇಝ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಅವರ ಕಾಲ್‌ಶೀಟ್‌ಗಾಗಿ ಇಂದಿಗೂ ನಿರ್ಮಾಪಕರು ಕಾಯುತ್ತಿದ್ದಾರೆ . ಹೀಗೆ ತಮಿಳು ಮತ್ತು ತೆಲುಗಿನಲ್ಲಿ ಛಾಪು ಮೂಡಿಸಿದ ಅನುಷ್ಕಾ ಶೆಟ್ಟಿ ಅವರ ಬಹು ನಿರೀಕ್ಷಿತ ಟಾಲಿವುಡ್ ಚಿತ್ರ ʼಘಾಟಿʼ (Ghaati) ಸೆಪ್ಟೆಂಬರ್ 5ರಂದು ತೆರೆಕಂಡಿದೆ. ಬಹು ದಿನಗಳ ಬಳಿಕ ಅನುಷ್ಕಾ ತೆರೆ ಮೇಲೆ ಬಂದಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ? ಕಲೆಕ್ಷನ್ ಎಷ್ಟಾಯ್ತು? (Ghaati Box Office Collection) ಮುಂತಾದ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕ್ರಿಶ್ ಜಗರ್ಲಮುಡಿ ನಿರ್ದೇಶನದ ʼಘಾಟಿʼಯಲ್ಲಿ ಅನುಷ್ಕಾ ಶೆಟ್ಟಿ ಮತ್ತೊಮ್ಮೆ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಆ್ಯಕ್ಷನ್, ಕ್ರೈಂ, ಡ್ರಾಮದಲ್ಲಿನ ಅನುಷ್ಕಾ ನಟನೆಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಇಡೀ ಚಿತ್ರದ ಜವಾಬ್ದಾರಿಯನ್ನು ಅವರು ಮತ್ತೊಮ್ಮೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಕನ್ನಡಿಗರ ಹೋರಾಟಕ್ಕೆ ಸಂದ ಜಯ; ಬೆಂಗಳೂರಿಗರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ‘ಲೋಕಃʼ ಮಲಯಾಳಂ ಚಿತ್ರತಂಡದಿಂದ ಕ್ಷಮೆಯಾಚನೆ
ಕಲೆಕ್ಷನ್ ಎಷ್ಟಾಯ್ತು?
ಮೂಲಗಳ ಪ್ರಕಾರ ʼಘಾಟಿʼ ಮೊದಲ ದಿನ 2 ಕೋಟಿ ರೂ. ಕಲೆಕ್ಷನ್ ಮಾಡಿದೆ. 2ನೇ ದಿನದ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದೆ. ಅಂದರೆ ಶನಿವಾರ (ಸೆಪ್ಟೆಂಬರ್ 8) ಕಲೆಕ್ಷನ್ ಮಾಡಿದ್ದು 1.49 ಕೋಟಿ ರೂ. ಅಂದರೆ 2 ದಿನಗಳಲ್ಲಿ 3.49 ಕೋಟಿ ರೂ. ಬಾಚಿಕೊಂಡಂತಾಗಿದೆ. ತೀವ್ರ ಪೈಪೋಟಿ ನಡುವೆ ಮಹಿಳಾ ಪ್ರಧಾನ ಚಿತ್ರವೊಂದು ಇಷ್ಟು ಗಳಿಸಲು ಸಾಧ್ಯವಾಗಿದ್ದು ಕಡಿಮೆ ಸಾಧನೆ ಏನಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 5ರಂದೇ ಕನ್ನಡದ ಬಹುನಿರೀಕ್ಷಿತ ʼಏಳುಮಲೆʼ, ತಮಿಳಿನ ʼಮದರಾಸಿʼ ಮತ್ತು ಹಿಂದಿಯ ʼಭಾಗಿ 4ʼ ರಿಲೀಸ್ ಆಗಿದೆ. ಅಲ್ಲದೆ ಮಲಯಾಳಂನ ‘ಲೋಕಃ: ಚಾಪ್ಟರ್ 1- ಚಂದ್ರ’ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಘಾಟಿಗೆ ಪ್ರಬಲ ಪೈಪೋಟಿ ಎದುರಾಗಿದ್ದು, ರಜಾ ದಿನವಾದ ಭಾನುವಾರ ಎಷ್ಟು ಗಳಿಸಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.
ಮಿಶ್ರ ಪ್ರತಿಕ್ರಿಯೆ
ʼಘಾಟಿʼ ಚಿತ್ರಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನುಷ್ಕಾ ಶೆಟ್ಟಿ ಅಭಿನಯವನ್ನು ಬಹುತೇಕರು ಮೆಚ್ಚಿಕೊಂಡಿದ್ದರೂ ಕಥೆ, ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು ಎನ್ನುವ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. 2023ರಲ್ಲಿ ತೆರೆಕಂಡ ʼಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿʼ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಅಲ್ಲದೆ ʼಘಾಟಿʼ ಸಿನಿಮಾದ ಟ್ರೈಲರ್ ಕೂತೂಹಲ ಮೂಡಿಸಿತ್ತು. ಈ ಎಲ್ಲ ಕಾರಣಗಳಿಂದ ಪ್ರೇಕ್ಷಕರು ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಹೀಗಾಗಿ ಅವರನ್ನು ಇದು ಸ್ವಲ್ಪ ನಿರಾಸೆಗೊಳಿಸಿದೆ. ಅದಾಗ್ಯೂ ಸಿನಿಮಾದ ಒಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಒಳ್ಳೆಯ ಮೊತ್ತಕ್ಕೆ ಖರೀದಿಸಿದೆ. ಹೀಗಾಗಿ ನಿರ್ಮಾಪಕರಿಗೆ ಯಾವುದೇ ರೀತಿಯಲ್ಲಿ ಲಾಸ್ ಆಗುವುದಿಲ್ಲ ಎನ್ನುವ ಮಾತೂ ಕೇಳಿ ಬಂದಿದೆ. ಈ ಚಿತ್ರಕ್ಕಾಗಿ ಅನುಷ್ಕಾ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಇನ್ನು ʼಘಾಟಿʼ ಚಿತ್ರದ ಮುಖ್ಯ ಪಾತ್ರಗಳಲ್ಲಿ ವಿಕ್ರಂ ಪ್ರಭು, ಚೈತನ್ಯ ರಾವ್, ಜಗಪತಿ ಬಾಬು, ರಾಘವ್ ರುದ್ರ, ಜಾನ್ ವಿಜಯ್ ಮತ್ತಿತರರು ನಟಿಸಿದ್ದಾರೆ.