ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾಗೆ ಕಲ್ಯಾಣ; ಪ್ರಿಯಕರ ರೋಹನ್ ಠಕ್ಕರ್ ಜೊತೆ ಅದ್ದೂರಿಯಾಗಿ ನಡೆದ ಮದುವೆ
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಪುತ್ರಿ ಹಾಗೂ ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್ ಅವರು ತಮ್ಮ ದೀರ್ಘಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಡೇಟಿಂಗ್ ಆಪ್ ಮೂಲಕ ಪರಿಚಯವಾದ ಈ ಜೋಡಿ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.
-
ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಬೋನಿ ಕಪೂರ್ ಮತ್ತು ಮೋನಾ ಶೌರಿ ಕಪೂರ್ ದಂಪತಿಯ ಪುತ್ರಿ, ನಟ ಅರ್ಜುನ್ ಕಪೂರ್ ಅವರ ಸಹೋದರಿಯೂ ಆಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನ್ಶುಲಾ ಕಪೂರ್ ಅವರು ಇಂದು (ಜುಲೈ 6) ತಮ್ಮ ಬಹುಕಾಲದ ಗೆಳೆಯ ರೋಹನ್ ಠಕ್ಕರ್ ಅವರೊಂದಿಗೆ ವಿವಾಹವಾಗಿದ್ದಾರೆ.
ಮುಂಬೈನಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮದುವೆ ಸಮಾರಂಭದಲ್ಲಿ 35 ವರ್ಷದ ಅನ್ಶುಲಾ ಅವರು ಆಕರ್ಷಕ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರೆ, ವರ ರೋಹನ್ ಐವರಿ ಬಣ್ಣದ ಶೇರ್ವಾನಿಯಲ್ಲಿ ಕಂಗೊಳಿಸಿದರು.
ಕಪೂರ್ ಕುಟುಂಬದ ಮದುವೆ
ಅನ್ಶುಲಾ ಅವರ ವಿವಾಹ ಸಂಭ್ರಮದಲ್ಲಿ ಇಡೀ ಕಪೂರ್ ಕುಟುಂಬವೇ ಒಂದೆಡೆ ಸೇರಿತ್ತು. ಚಿಕ್ಕಪ್ಪ ಅನಿಲ್ ಕಪೂರ್, ಸಹೋದರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸೇರಿದಂತೆ ಹಲವರು ಭಾಗವಹಿಸಿ ನವದಂಪತಿಗೆ ಹರಸಿದರು. ಮೂಲಗಳ ಪ್ರಕಾರ, ಇಂದು ಕೇವಲ ಆಪ್ತರಿಗಷ್ಟೇ ಮದುವೆ ಸೀಮಿತವಾಗಿದ್ದು, ನಾಳೆ (ಮಂಗಳವಾರ) ಅದ್ದೂರಿ ರಿಸೆಪ್ಷನ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ.
ಜೂನ್‌ನಿಂದಲೇ ಆರಂಭವಾಗಿದ್ದ ಪ್ರೀ-ವೆಡ್ಡಿಂಗ್ ಸಂಭ್ರಮ
ಕಳೆದ ಕೆಲವು ದಿನಗಳಿಂದಲೇ ಅನ್ಶುಲಾ ಅವರ ಮನೆಯಲ್ಲಿ ಮದುವೆ ಮುಂಚಿತದ ಶಾಸ್ತ್ರಗಳು ಅದ್ದೂರಿಯಾಗಿ ನೆರವೇರುತ್ತಿದ್ದವು. ಇದರ ಝಲಕ್‌ಗಳನ್ನು ಅನ್ಶುಲಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೂನ್ 21ರಂದು ರೋಹನ್ ಕುಟುಂಬದವರು ಹಮ್ಮಿಕೊಂಡಿದ್ದ 'ಮಾತಾ ಕಿ ಚೌಕಿ' ಪೂಜೆಯೊಂದಿಗೆ ವಿವಾಹದ ಸಂಭ್ರಮ ಆರಂಭವಾಗಿತ್ತು. ಈ ಪೂಜೆಯಲ್ಲಿ ಮಹೀಪ್ ಕಪೂರ್, ಶನಾಯಾ ಕಪೂರ್, ಜಾನ್ವಿ ಮತ್ತು ಖುಷಿ ಕಪೂರ್ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದ್ದರು.
ನಂತರ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಸೋನಂ ಕಪೂರ್, ರಿಯಾ ಕಪೂರ್, ಹರ್ಷವರ್ಧನ್ ಕಪೂರ್, ಶಬಾನಾ ಅಜ್ಮಿ ಹಾಗೂ ಕರಿಷ್ಮಾ ಕಪೂರ್ ಮುಂತಾದವರು ಉಪಸ್ಥಿತರಿದ್ದರು. ಮೆಹಂದಿ ಬಳಿಕ 'ಚೂಡಾ' ಮತ್ತು 'ಕಲೀರೆ' ಶಾಸ್ತ್ರಗಳು ಜರುಗಿದವು. ಈ ಇಡೀ ಸಂಭ್ರಮಾಚರಣೆಯ ಯೋಜನೆ ಮತ್ತು ಆತಿಥ್ಯದ ಜವಾಬ್ದಾರಿಯನ್ನು ಅನ್ಶುಲಾ ಅವರ ಸಹೋದರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ವಹಿಸಿಕೊಂಡಿದ್ದು ವಿಶೇಷ.
ಅನ್ಶುಲಾಗೆ ಅದ್ದೂರಿ ಮದುವೆ
Mumbai, Maharashtra: The wedding ceremony of Anshula Kapoor, sister of Actor Arjun Kapoor, being held at the Taj Lands End pic.twitter.com/uEtlKxxUru
— IANS (@ians_india) July 6, 2026
ಡೇಟಿಂಗ್ ಆಪ್‌ನಲ್ಲಿ ಶುರುವಾದ ಪ್ರೀತಿ!
2022ರಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದ ಈ ಜೋಡಿ, ಕಳೆದ ವರ್ಷ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ತಮ್ಮ ಪ್ರೇಮಕಥೆಯ ಬಗ್ಗೆ ಈ ಹಿಂದೆ ಬರೆದುಕೊಂಡಿದ್ದ ಅನ್ಶುಲಾ, "ನಾವು ಮಂಗಳವಾರ ಮಧ್ಯರಾತ್ರಿ 1:15 ಕ್ಕೆ ಮಾತನಾಡಲು ಪ್ರಾರಂಭಿಸಿದೆವು, ಆ ಮಾತು ಗಂಟೆಗಟ್ಟಲೆ ಮುಂದುವರಿಯಿತು. ಮೂರು ವರ್ಷಗಳ ನಂತರ, ನನ್ನ ನೆಚ್ಚಿನ ನಗರದ ಸೆಂಟ್ರಲ್ ಪಾರ್ಕ್‌ನ ಕೋಟೆಯ ಮುಂದೆ ರೋಹನ್ ನನಗೆ ಪ್ರಪೋಸ್ ಮಾಡಿದ್ದರು" ಎಂದು ನೆನಪಿಸಿಕೊಂಡಿದ್ದರು. ಆ ಸುಂದರ ಪ್ರೀತಿ ಈಗ ಮದುವೆಯ ಬಂಧದೊಂದಿಗೆ ಅಧಿಕೃತಗೊಂಡಿದೆ.