Balaramana Dinagalu Movie: ʼಬಲರಾಮನ ದಿನಗಳುʼ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಎದುರು ವಿಲನ್ ಲುಕ್‌ನಲ್ಲಿ ʼಆನೆʼ ವಿನಯ್ ಗೌಡ ಅಬ್ಬರ
Balaramana Dinagalu Movie: ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿರುವ ʼಬಲರಾಮನ ದಿನಗಳುʼ ಚಿತ್ರದಲ್ಲಿ ಖಳನ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ನಟಿಸುತ್ತಿದ್ದಾರೆ. ಹೀರೋಗಿಂತ ಖಡಕ್ ಖಳನಾಗಿಯೇ ಗುರುತಿಸಿಕೊಳ್ಳಬೇಕೆಂಬ ಹಂಬಲ ನನಗೆ ಎಂದು ವಿನಯ್ ಗೌಡ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಬಿಗ್ ಬಾಸ್ ಮೂಲಕವೇ ಹೆಚ್ಚು ಜನಪ್ರಿಯತೆ ಪಡೆದವರು ನಟ ವಿನಯ್ ಗೌಡ (Vinay Gowda). 2012 ರಲ್ಲಿಯೇ ಕಿರುತೆರೆಯ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ವಿನಯ್ ಗೌಡ ಬದುಕು ಬದಲಿಸಿದ್ದು ಮಾತ್ರ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10. ಅಲ್ಲಿಂದ ಹೊಸ ಪಥದತ್ತ ವಿನಯ್ ಮುಖಮಾಡಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ಖಡಕ್ ಖಳನಾಗುವ ತಮ್ಮ ಬಹುವರ್ಷಗಳ ಕನಸನ್ನು ಸಾಕಾರ ಮಾಡಿಕೊಂಡಿದ್ದಾರೆ. ಅದರಂತೆ, ʼಬಲರಾಮನ ದಿನಗಳುʼ ಸಿನಿಮಾದಲ್ಲಿ (Balaramana Dinagalu Movie), ವಿನೋದ್ ಪ್ರಭಾಕರ್ (Vinod Prabhakar) ಎದುರು ಖಡಕ್ ಗತ್ತಿನ ಖಳನಾಗಿ ಎಂಟ್ರಿ ಕೊಟ್ಟಿದ್ದಾರೆ ವಿನಯ್ ಗೌಡ.
ಚಂದನವನದಲ್ಲಿ ಸೂಕ್ಷ್ಮ ಸಂವೇದಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಕೆ.ಎಂ. ಚೈತನ್ಯ, ಇದೀಗ ʼಬಲರಾಮನ ದಿನಗಳುʼ ಸಿನಿಮಾ ಕೈಗೆತ್ತಿಕೊಂಡು, ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿಸಿದ್ದಾರೆ. ʼಆ ದಿನಗಳುʼ ಸಿನಿಮಾ ಬಳಿಕ ಬೆಂಗಳೂರು ಭೂಗತಲೋಕದ ಮತ್ತೊಂದು ರಕ್ತಚರಿತ್ರೆಯ ಕಥೆಯನ್ನು ಕೆ.ಎಂ. ಚೈತನ್ಯ ಈ ಸಿನಿಮಾದಲ್ಲಿಯೂ ಮುಂದುವರಿಸಲಿದ್ದಾರೆ. ʼಮರಿ ಟೈಗರ್ʼ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ, ಖಳನ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ನಟಿಸುತ್ತಿದ್ದಾರೆ. ಈ ಅವಕಾಶ ಸಿಕ್ಕಿದ್ದು ಹೇಗೆ ಮತ್ತು ʼಬಲರಾಮನ ದಿನಗಳುʼ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
ʼಬಲರಾಮನ ದಿನಗಳುʼ ಚಿತ್ರದ ಪ್ರೊಡ್ಯೂಸರ್ ಶ್ರೇಯಸ್ ಅವರು ನನ್ನನ್ನು ಬಿಗ್ ಬಾಸ್‌ನಲ್ಲಿ ನೋಡಿದ್ದರು. ಕತ್ತಿ ಅನ್ನೋ ಪಾತ್ರಕ್ಕೆ ವಿನಯ್ ಅವರೇ ಸೂಕ್ತ. ವಿನೋದ್ ಪ್ರಭಾಕರ್ ಅವರ ಎದುರು ನಿಲ್ಲೋಕೆ ಹೀರೋ ಸರಿಸಮ ಪಾತ್ರಬೇಕು ಅನ್ನೋ ಕಾರಣಕ್ಕೆ, ನಿರ್ದೇಶಕ ಚೈತನ್ಯ ಅವರಿಗೆ ನನ್ನನ್ನು ರೆಫರ್ ಮಾಡಿದ್ರು. ನಿರ್ದೇಶಕರೂ, ನನ್ನನ್ನು ಒಪ್ಪಿಕೊಂಡರು. ಅಲ್ಲಿಂದ ಈ ಸಿನಿಮಾ ಜರ್ನಿ ಶುರುವಾಯ್ತು ಎನ್ನುತ್ತಾರೆ ವಿನಯ್ ಗೌಡ.
ʼ20 ರಿಂದ 25 ದಿನಗಳ ಶೂಟಿಂಗ್ ಮುಗಿದರೆ, ನನ್ನ ಭಾಗದ ಕೆಲಸ ಮುಗಿದಂತೆ. ದೊಡ್ಡ ಫೈಟ್ ಸೀನ್ ಇದೆ. ಅದು ಮುಗಿಯುತ್ತಿದ್ದಂತೆ, ಬಹುತೇಕ ನನ್ನ ಭಾಗದ ಶೂಟಿಂಗ್ ಮುಗಿಯುತ್ತೆ. ಈಗಾಗಲೇ ಶೇ.50 ಭಾಗದ ಚಿತ್ರೀಕರಣ ಮುಗಿದಿದೆ. ಮೇಜರ್ ಫೈಟ್ ಸೀಕ್ವೆನ್ಸ್ ಇವೆ. ಅದು ಮುಗಿದರೆ, ಸಿನಿಮಾ ಮುಗಿದಂತೆʼ ಎಂಬುದು ವಿನಯ್ ಗೌಡ ಮಾತು.
ಈ ಸುದ್ದಿಯನ್ನೂ ಓದಿ | Winter Shawl Styling 2025: ಚಳಿಗಾಲದಲ್ಲಿ ಶಾಲನ್ನು ಸ್ಟೈಲಿಶ್ ಆಗಿ ಧರಿಸಲು ಇಲ್ಲಿದೆ ಸೂಪರ್ ಐಡಿಯಾ!
ಚಿಕ್ಕ ವಯಸ್ಸಿನಲ್ಲಿ, ಸಿನಿಮಾಗಳಲ್ಲಿ ಹೀರೋಗಿಂತ ವಿಲನ್‌ಗಳನ್ನೇ ನೋಡಿ ಹೆಚ್ಚು ಆಕರ್ಷಿತನಾಗಿದ್ದೆ. ನನಗೆ ವಜ್ರಮುನಿ ಅವರೆಂದರೆ ತುಂಬ ಇಷ್ಟ. ತಮಿಳಿನ ರಘುವರನ್ ಸಹ ಇಷ್ಟ. ವಜ್ರಮುನಿ ಅವರು ಒಂದು ರೀತಿ ನೀರಿದ್ದಂತೆ, ಯಾವ ಪಾತ್ರೆಗೆ ಹಾಕಿದರೂ, ಅದೇ ಶೇಪ್‌ಗೆ ಬರ್ತಾರೆ. ಹೀರೋ ಅಂದ್ರೆ ಅಲ್ಲಿ ಒಂದು ಚೌಕಟ್ಟು ಇರುತ್ತೆ. ಒಳ್ಳೆಯ ಮಗನಾಗಿ, ಒಳ್ಳೆಯ ಗಂಡನಾಗಿ, ಒಳ್ಳೆಯ ಬಾಯ್‌ಫ್ರೆಂಡ್ ಇರಬೇಕು. ಆದರೆ, ವಿಲನ್‌ಗೆ ಅದ್ಯಾವುದೂ ಇರಲ್ಲ. ಹಾಗಾಗಿ ನಾನು ವಿಲನ್ ಆಗಿಯೇ ಗುರುತಿಸಿಕೊಳ್ಳಬೇಕು ಎಂದಿದ್ದಾರೆ. ಅಂದಹಾಗೆ ʼಬಲರಾಮನ ದಿನಗಳುʼ ಚಿತ್ರವನ್ನು ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಾಣ ಮಾಡುತ್ತಿದ್ದಾರೆ.