‘ಬಿಗ್ ಬಾಸ್ ಕನ್ನಡ 11’ & ‘ಬಿಗ್ ಬಾಸ್ ಕನ್ನಡ 12’ ಶೋಗೆ ಬರುವುದಕ್ಕೂ ಮುನ್ನ ಚೈತ್ರಾ ಕುಂದಾಪುರ ಅವರು ಫೈರ್ ಬ್ರ್ಯಾಂಡ್ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿದ್ದರು. ಕೋರ್ಟ್ ಕೇಸ್‌ಗಳಲ್ಲಿಯೂ ಚೈತ್ರಾ ಹೆಸರು ಕೇಳಿಬಂದಿತ್ತು. ಇದೀಗ 9 ವರ್ಷಗಳ ಹಿಂದಿನ ಒಂದು ಕೇಸ್ ಇತ್ಯರ್ಥವಾಗಿದ್ದು, ಆ ಬಗ್ಗೆ ಚೈತ್ರಾ ಕುಂದಾಪುರ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆಂದರೆ, ಈ ಪ್ರಕರಣದಲ್ಲಿ ಚೈತ್ರಾ ಅವರನ್ನು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಆ ಹಿನ್ನೆಲೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಚೈತ್ರಾ ಹಂಚಿಕೊಂಡಿದ್ದಾರೆ.
ಚೈತ್ರಾ ಕುಂದಾಪುರ ಪೋಸ್ಟ್‌ನಲ್ಲಿ ಏನಿದೆ?
"9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆ... ʻಆ ಹೆಣ್ಣು ಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ಲೇ..ʼ ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ" ಎಂದು ಚೈತ್ರಾ ಕುಂದಾಪುರ ಬರೆದುಕೊಂಡಿದ್ದಾರೆ.
Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು
ಲಕ್ಷಾಂತರ ಜನರ ಪ್ರೀತಿ ಅಭಿಮಾನ ಕೊಟ್ಟ ಹೋರಾಟವಿದು
"9 ವರ್ಷಗಳು.. ಬರೋಬ್ಬರಿ 5 ಕೇಸುಗಳು.. ಇವೆಲ್ಲವೂ ಒಂದು ಚಿಂತನೆಗಾಗಿ, ಪಕ್ಷಕ್ಕಾಗಿ ಹಾಕಿಸಿಕೊಂಡದ್ದು.. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ... ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು.. ಲಕ್ಷಾಂತರ ಜನರ ಪ್ರೀತಿ ಅಭಿಮಾನ ಕೊಟ್ಟ ಹೋರಾಟವಿದು. ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ.. ಆದರೆ ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲ ನಾನು ಇಂದು ಅಕ್ಕಾ ಎಂದು ಕರೆಸಿಕೊಳ್ಳುತ್ತಿದ್ದೇನೆ" ಎಂದು ಚೈತ್ರಾ ಕುಂದಾಪುರ ಹೇಳಿಕೊಂಡಿದ್ದಾರೆ.
Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್!
ಅಷ್ಟಕ್ಕೂ ಏನಿದು ಪ್ರಕರಣ?
2018ರ ವಿಧಾನಸಭಾ ಚುನಾವಣೆಯ ವೇಳೆ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ಮತ್ತು ಬಿಜೆಪಿಯ ಪರಣ್ಣ ಮುನವಳ್ಳಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಚೈತ್ರಾ ಕುಂದಾಪುರ ಗಂಗಾವತಿಗೆ ಆಗಮಿಸಿದ್ದರು. ಪ್ರಚಾರದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದ್ವೇಷ ಭಾಷಣ ಹಾಗೂ ಪರಸ್ಪರ ನಿಂದನೆ ಮಾಡಿದ ಆರೋಪದಡಿ ಚೈತ್ರಾ ಕುಂದಾಪುರ ವಿರುದ್ಧ ಗಂಗಾವತಿ ಠಾಣೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಇದೀಗ ಚೈತ್ರಾ ಕುಂದಾಪುರ ಸೇರಿದಂತೆ ಮೂವರು ಆರೋಪಿಗಳು ನಿರ್ದೋಷಿ ಎಂದು ಗಂಗಾವತಿಯ ನ್ಯಾಯಾಲಯ ತೀರ್ಪು ನೀಡಿದೆ. ಇದರೊಂದಿಗೆ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
ಚೈತ್ರಾ ಕುಂದಾಪುರ ಅವರ ಪೋಸ್ಟ್
ನ್ಯಾಯಾಲಯದ ಆದೇಶದಲ್ಲಿ ಏನಿದೆ?
ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿಯ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗಳ ಮೇಲಿನ ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಎಲ್ಲರನ್ನೂ ಖುಲಾಸೆಗೊಳಿಸಿದೆ. "ದಂಡ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 248(1) ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾ, 1 ರಿಂದ 3ನೇ ಆರೋಪಿಗಳು ಭಾರತೀಯ ದಂಡ ಸಂಹಿತೆಯ (IPC) ಕಲಂ 171H, 171G ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 125, 127ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಎಸಗಿಲ್ಲವೆಂದು ನಿರ್ಣಯಿಸಲಾಗಿದೆ. ಹೀಗಾಗಿ ಆರೋಪಿಗಳನ್ನು ನಿರ್ದೋಷಿಗಳೆಂದು ಪರಿಗಣಿಸಿ, ಸದರಿ ಆರೋಪಗಳಿಂದ ಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.