ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ (Sudeep) ನೀಡುವ ಚಪ್ಪಾಳೆಗೆ ವಿಶೇಷ ಗೌರವವಿದೆ. ವಾರವಿಡೀ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳಲ್ಲಿ ಯಾರ ಆಟ ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ ಎಂಬುದನ್ನು ಗುರುತಿಸಿ ಸುದೀಪ್ ಈ ಗೌರವ ನೀಡುತ್ತಾರೆ. ಆದರೆ ಈ ವಾರ ಉತ್ತಮವಾಗಿ ಆಟವಾಡಿದ ಪ್ರಶಾಂತ್ (Prashanth Thandav) ಹಾಗೂ ತಾಂಡವ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಗದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ಸ್ವತಃ ಕಿಚ್ಚ ಸುದೀಪ್ ತೆರೆ ಎಳೆದಿದ್ದಾರೆ.
ಈ ವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಕೌಟುಂಬಿಕ ಟಾಸ್ಕ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಟಾಸ್ಕ್ನಲ್ಲಿ ತಾಂಡವ್ ರಾಮ್ ಹಾಗೂ ಪ್ರಶಾಂತ್ ಅವರು ಸೌಂದರ್ಯ ಶೆಟ್ಟಿ ಅವರ ತಂದೆ-ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಬಿಗ್ಬಾಸ್ ಹಳೆಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ಎರಡನೇ ಮಗಳಾಗಿ ಮನೆಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ: Amitabh Bachchan: ಬುಲೆಟ್ಪ್ರೂಫ್ ಗಾಜಿನ ಒಳಗಿನಿಂದ ಅಭಿಮಾನಿಗಳಿಗೆ ಕೈಬೀಸಿದ ಅಮಿತಾಭ್ ಬಚ್ಚನ್!
ಟಾಸ್ಕ್ನ ಪ್ರತಿಯೊಂದು ಪಾತ್ರ ಹಾಗೂ ಸನ್ನಿವೇಶವನ್ನು ಬಿಗ್ಬಾಸ್ ತಂಡವೇ ರೂಪಿಸಿತ್ತು. ಅದಕ್ಕೆ ತಕ್ಕಂತೆ ಸ್ಪರ್ಧಿಗಳು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದರು. ತಾಂಡವ್ ಮತ್ತು ಪ್ರಶಾಂತ್ ಅವರ ಆಟಕ್ಕೂ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇಬ್ಬರಿಗೂ ಕಿಚ್ಚನ ಚಪ್ಪಾಳೆ ಸಿಗದಿರುವುದು ವೀಕ್ಷಕರಲ್ಲಿ ಪ್ರಶ್ನೆ ಮೂಡಿಸಿತ್ತು.
ವಾರದ ಪಂಚಾಯ್ತಿಯಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ತಾಂಡವ್ ಮತ್ತು ಪ್ರಶಾಂತ್ ಆಟವನ್ನು ಮೆಚ್ಚಿಕೊಂಡರು. ಇಬ್ಬರೂ ಉತ್ತಮವಾಗಿ ಆಡಿದ್ದೀರಿ, ನಿಮ್ಮ ಆಟದ ಗ್ರಾಫ್ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
ಆಟದಲ್ಲಿ ಸ್ವಂತಿಕೆ ಇರಬೇಕು!
ಕಿಚ್ಚನ ಚಪ್ಪಾಳೆ ನೀಡುವಾಗ ತಾವು ಮುಖ್ಯವಾಗಿ ಗಮನಿಸುವುದು ಸ್ಪರ್ಧಿಗಳ ಸ್ವಂತಿಕೆ ಎಂದು ಸುದೀಪ್ ಹೇಳಿದರು. ಆ ಪಾತ್ರದ ನಡುವೆ ಸ್ಪರ್ಧಿಗಳು ತಮ್ಮ ನೈಜ ವ್ಯಕ್ತಿತ್ವವನ್ನು ಹೇಗೆ ತೋರಿಸುತ್ತಾರೆ ಎಂಬುದು ಮುಖ್ಯ ಎಂದರು.
ಟಾಸ್ಕ್ನಲ್ಲಿ ಎದುರಾಳಿಗಳು ಟೀಕೆ ಮಾಡಿದಾಗ ಅಥವಾ ವ್ಯಂಗ್ಯವಾಡಿದಾಗ ಅದನ್ನು ಹೇಗೆ ಎದುರಿಸುತ್ತೀರಿ? ಕಷ್ಟದ ಪರಿಸ್ಥಿತಿಯಲ್ಲಿ ಕುಗ್ಗದೆ ಮತ್ತೆ ಹೇಗೆ ಮೇಲೆದ್ದು ನಿಲ್ಲುತ್ತೀರಿ? ನಿಮ್ಮ ವಿರುದ್ಧ ಸವಾಲುಗಳು ಎದುರಾದಾಗ ನಿಮ್ಮ ವ್ಯಕ್ತಿತ್ವವನ್ನು ಹೇಗೆ ಉಳಿಸಿಕೊಳ್ಳುತ್ತೀರಿ? ಇಂತಹ ಸಂಗತಿಗಳನ್ನು ತಾನು ಗಮನಿಸುತ್ತೇನೆ ಎಂದು ಸುದೀಪ್ ವಿವರಿಸಿದರು.
ಇದನ್ನೂ ಓದಿ: Bigg Boss Kannada 13: ಮಾತಿಗೆ ಮಾತು ಬೆಳೆದು ಕೂಗಾಡಿಕೊಂಡ ಆಸಿಯಾ-ಗಾನವಿ!
ಉತ್ತಮ ಪದಕಕ್ಕೂ ಕಿಚ್ಚನ ಚಪ್ಪಾಳೆಗೂ ವ್ಯತ್ಯಾಸವಿದೆ!
ತಾಂಡವ್ ಮತ್ತು ಪ್ರಶಾಂತ್ ಅವರಿಗೆ ಉತ್ತಮ ಆಟಗಾರರಾಗಿ ಗುರುತಿಸಿಕೊಂಡಿರುವುದು ಖಂಡಿತವಾಗಿಯೂ ಅರ್ಹವಾದ ಗೌರವ. ಆದರೆ ಕಿಚ್ಚನ ಚಪ್ಪಾಳೆ ಎನ್ನುವುದು ಅದಕ್ಕಿಂತ ವಿಭಿನ್ನವಾದ ಮಾನದಂಡವನ್ನು ಹೊಂದಿದೆ ಎಂದು ಸುದೀಪ್ ತಿಳಿಸಿದರು.