‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟದಲ್ಲಿ ಇಷ್ಟು ದಿನ ನಡೆದಿದ್ದ ಲೆಕ್ಕಾಚಾರಗಳೇ ಬೇರೆ, ಇನ್ಮುಂದೆ ನಡೆಯಲಿರುವ ಆಟವೇ ಬೇರೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ 16 ಸ್ಪರ್ಧಿಗಳಲ್ಲಿ ಒಟ್ಟು ನಾಲ್ವರು ಹೊರಬಿದ್ದಿದ್ದಾರೆ. ಮನೆಯಲ್ಲಿ ತಾಂಡವ್ ಸೇರಿ 12 ಸ್ಪರ್ಧಿಗಳು ಉಳಿದುಕೊಂಡಿರುವ ಬೆನ್ನಲ್ಲೇ, ಆಟಕ್ಕೆ ಮತ್ತಷ್ಟು ರಂಗು ತುಂಬಲು ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶ ಪಡೆದಿದ್ದಾರೆ. ಕಿರುತೆರೆಯ ಪ್ರತಿಭೆ ‘ಘಾಟಿ’ ಗಾನವಿ, ನಟಿ ಸೋನಿಕಾ ಗೌಡ ಮತ್ತು ಹಾಸ್ಯ ಕಲಾವಿದ ಪ್ರಶಾಂತ್ ಗೌಡ ಅವರನ್ನು ನಿರೂಪಕ ಕಿಚ್ಚ ಸುದೀಪ್ ಭಾನುವಾರದ ವೇದಿಕೆಯಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡು ಮನೆಯೊಳಗೆ ಬೀಳ್ಕೊಟ್ಟಿದ್ದಾರೆ.
ನಾನು ತುಂಬಾ ಖಾರ ಎಂದಿರುವ ಗಾನವಿ
ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿರುವ ಗಾನವಿ ಗೌಡ ಅವರು 'ಹಳ್ಳಿ ಪವರ್ ಸೀಸನ್-1' ಮೂಲಕ ಅಪಾರ ಜನಪ್ರಿಯತೆ ಗಳಿಸಿದವರು. ಅಕುಲ್ ಬಾಲಾಜಿ ಅವರಿಂದ ‘ಘಾಟಿ ಗಾನವಿ’ ಎಂಬ ಬಿರುದು ಪಡೆದು ಆ ಶೋನಲ್ಲಿ ರನ್ನರ್ ಅಪ್ ಆಗಿದ್ದ ಇವರು ಚಿಕ್ಕಮಗಳೂರು ಮೂಲದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರ ತಾಯಿ ಪೊಲೀಸ್ ಅಧಿಕಾರಿಯಾಗಿದ್ದು, ಗಾನವಿ ಅಂತಿಮ ವರ್ಷದ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.
ಈ ಹಿಂದೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇವರು ಬಿಗ್ ಬಾಸ್ ಅನ್ನು ತಮ್ಮ ಬದುಕಿನ ಅಲ್ಟಿಮೇಟ್ ಮೈಲ್‌ಸ್ಟೋನ್ ಎಂದಿದ್ದಾರೆ. "ನಾನು ನೋಡೋಕೆ ಸಾಫ್ಟ್ ಆಗಿರಬಹುದು, ಆದರೆ ತುಂಬಾ ಖಾರ" ಎಂದು ಸವಾಲು ಹಾಕಿಯೇ ಗಾನವಿ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.
ಮದುವೆಯಾದ ಬೆನ್ನಲ್ಲೇ ಬಿಗ್ ಬಾಸ್‌ಗೆ ಬಂದ ಪ್ರಶಾಂತ್
ಎರಡನೇ ಸ್ಪರ್ಧಿಯಾಗಿ ಕಾಲಿಟ್ಟಿರುವ ಗಿಚ್ಚಿ-ಗಿಲಿಗಿಲಿಯ ಪ್ರಶಾಂತ್ ಗೌಡ ಹಾಸ್ಯಪ್ರಿಯರಿಗೆ ಚಿರಪರಿಚಿತರು. ‘ಗಿಚ್ಚಿ ಗಿಲಿಗಿಲಿ’ಯ ಸತತ ಮೂರು ಸೀಸನ್‌ಗಳಲ್ಲಿ ಭಾಗವಹಿಸಿ ‘ಟ್ಯಾಲೆಂಟೆಡ್ ಕಲಾವಿದ’ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ ಇವರು, ‘ಕ್ವಾಟ್ಲೆ ಕಿಚನ್’ ವಿನ್ನರ್ ಕೂಡ ಆಗಿದ್ದರು. ಸಾಮಾಜಿಕ ಜಾಲತಾಣಗಳ ರೀಲ್ಸ್ ಮೂಲಕ ಮನೆಮಾತಾಗಿರುವ ಇವರಿಗೆ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದೆ. ಈ ಹಿಂದೆ ಬಿಗ್ ಬಾಸ್ ವೇದಿಕೆಯಲ್ಲೇ ಸ್ಪರ್ಧಿಗಳ ಸ್ಪೂಫ್ ಮಾಡಿ ನಗಿಸಿದ್ದ ಪ್ರಶಾಂತ್, "ನಾನು ಮನೆಯೊಳಗೆ ಜಗಳವಾಡಲು ಹೋಗುತ್ತಿಲ್ಲ, ತುಸು ನಗು, ತಮಾಷೆಯ ವಾತಾವರಣ ಸೃಷ್ಟಿಸಲು ಹೋಗುತ್ತಿದ್ದೇನೆ" ಎಂದಿದ್ದಾರೆ.
ಕೇರಳ ಮೂಲದ ಸೋನಿಕಾ
ಮೂರನೇ ಸ್ಪರ್ಧಿಯಾಗಿ ಬಂದಿರುವ ಸೋನಿಕಾ ಗೌಡ ಮಾಡಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ಪರಿಚಿತ ಮುಖ. ಮೂಲತಃ ಕೇರಳದವರಾಗಿದ್ದು ಮುಂಬೈನಲ್ಲಿ ಹುಟ್ಟಿ ಬೆಳೆದ ಸೋನಿಕಾ, ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಫ್ಯಾಷನ್ ಡಿಸೈನಿಂಗ್ ಕಲಿತಿರುವ ಇವರು ಭರತನಾಟ್ಯ ಸೀನಿಯರ್ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.
Bigg boss Kannada 13: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇವರೇ?
2013ರಲ್ಲಿ ಮಾಡೆಲಿಂಗ್ ಆರಂಭಿಸಿ 80ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಮಿಂಚಿರುವ ಇವರು ‘ಮಿಸ್ ಕೇರಳ 2015’, ‘ಬೆಂಗಳೂರು ಸೂಪರ್ ಮಾಡೆಲ್’ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಶತಾಯ ಗತಾಯ’, ‘ನಾನೇ ರಾಜ’ ಮುಂತಾದ ಸಿನಿಮಾಗಳಲ್ಲೂ, ಭೋಜಪುರಿ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಹಿಂದೆ ಬಿಗ್ ಬಾಸ್‌ನ ಮೂರು ಸೀಸನ್‌ಗಳ ಆಫರ್ ತಿರಸ್ಕರಿಸಿದ್ದ ಸೋನಿಕಾ, ಈಗ ಅಂತಿಮವಾಗಿ ಬಿಗ್ ಬಾಸ್ ರಣರಂಗಕ್ಕೆ ಇಳಿದಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ಪರಿಚಯಿಸಲ್ಪಟ್ಟಿರುವ ಈ ಮೂವರು, ಸೋಮವಾರದ ಸಂಚಿಕೆಯಲ್ಲಿ ಮನೆಯ ಒಳಪ್ರವೇಶಿಸಲಿದ್ದು, ಈಗಾಗಲೇ ಇರುವ ಸ್ಪರ್ಧಿಗಳಿಗೆ ಇವರು ಎಷ್ಟರಮಟ್ಟಿಗೆ ಪೈಪೋಟಿ ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.