ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chiranjeevi: ಬಾಕ್ಸ್‌ ಆಫೀಸ್‌ನಲ್ಲಿ ʻಮನ ಶಂಕರ ವರಪ್ರಸಾದ್‌ ಗಾರುʼ ಅಬ್ಬರ; ರಾಜಮೌಳಿಯಂತೆ ದಾಖಲೆ ಬರೆದ ನಿರ್ದೇಶಕ ಅನಿಲ್‌ ರವಿಪುಡಿ

Mana Shankara Vara Prasad Garu Collection: ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರ ಮೊದಲ ದಿನವೇ ಜಾಗತಿಕವಾಗಿ 84 ಕೋಟಿ ರೂ. ಗಳಿಸುವ ಮೂಲಕ ಚಿರಂಜೀವಿ ಅವರ ಕೆರಿಯರ್ ಬೆಸ್ಟ್ ಓಪನಿಂಗ್ ಪಡೆದಿದೆ.

ಮೊದಲ ದಿನವೇ ಭರ್ಜರಿ ಕಮಾಯಿ ಮಾಡಿದ 'ಮನ ಶಂಕರ ವರಪ್ರಸಾದ್ ಗಾರು'!

-

Avinash GR
Avinash GR Jan 13, 2026 1:58 PM

ʻಮೆಗಾ ಸ್ಟಾರ್ʼ ಚಿರಂಜೀವಿ ನಟನೆಯ 'ಮನ ಶಂಕರ ವರ ಪ್ರಸಾದ್ ಗಾರು' (MSG) ಸಿನಿಮಾವು ಸೋಮವಾರ (ಜನವರಿ 12) ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಮೊದಲ ಪ್ರದರ್ಶನದಿಂದಲೇ ಬಾಕ್ಸ್ ಆಫೀಸ್ ಧೂಳೀಪಟ ಮಾಡುತ್ತಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.

ಚಿರಂಜೀವಿ ಅವರ ಕಾಮಿಡಿ ಟೈಮಿಂಗ್, ಪಂಚ್ ಡೈಲಾಗ್‌ಗಳು ಮತ್ತು ಡ್ಯಾನ್ಸ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿವೆ. ಬಹಳ ದಿನಗಳ ನಂತರ ಪೂರ್ಣ ಪ್ರಮಾಣದ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾದಲ್ಲಿ ಚಿರಂಜೀವಿಯನ್ನು ನೋಡಿದ ಅಭಿಮಾನಿಗಳು ಹಬ್ಬದ ಸಂಭ್ರಮದಲ್ಲಿದ್ದಾರೆ.

Chiranjeevi: ಸಿನಿಮಾ ನೋಡುವಾಗಲೇ ಚಿರಂಜೀವಿ ಅಭಿಮಾನಿ ಕುಸಿದು ಬಿದ್ದು ಸಾವು

ಭರ್ಜರಿ ಕಮಾಯಿ ಮಾಡಿದ ಎಂಎಸ್‌ಜಿ

ಜನವರಿ 11ರಂದು ಪೇಯ್ಡ್‌ ಪ್ರೀಮಿಯರ್‌ ಶೋ ಮಾಡಲಾಗಿತ್ತು. ಅದು ಸೇರಿ ಮೊದಲ ದಿನ 'ಮನ ಶಂಕರ ವರ ಪ್ರಸಾದ್ ಗಾರು' ಸಿನಿಮಾವು ವಿಶ್ವಾದ್ಯಂತ 84 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದು ಚಿರಂಜೀವಿ ಅವರ ವೃತ್ತಿಜೀವನದಲ್ಲೇ ಅತ್ಯಧಿಕ ಓಪನಿಂಗ್ ಪಡೆದ ಸಿನಿಮಾ ಎಂಬ ದಾಖಲೆ ಬರೆದಿದೆ. "ಜಾಗತಿಕವಾಗಿ ಸಾರ್ವಕಾಲಿಕ ದಾಖಲೆಯ ಓಪನಿಂಗ್... ನಮ್ಮ ಶಂಕರ ವರ ಪ್ರಸಾದ್ ಗಾರು ಸಂಚಲನ" ಎಂದು ಚಿತ್ರತಂಡ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ.

ರಾಜಮೌಳಿಯಂತೆ ಅನಿಲ್‌ ದಾಖಲೆ

ಈ ಸಿನಿಮಾವನ್ನು ನಿರ್ದೇಶಿಸಿರುವುದು ಅನಿಲ್‌ ರವಿಪುಡಿ. ಇದು ಇವರ 9ನೇ ಸಿನಿಮಾ. ಅನಿಲ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಕೆ ಮಾಡದೇ ಇರಬಹುದು. ಆದರೆ ನಿರ್ಮಾಪಕರಿಗೆ ಹಾಕಿದ ಬಂಡವಾಳಕ್ಕೆ ದೊಡ್ಡ ಲಾಭ ತಂದುಕೊಟ್ಟಿವೆ. ಈವರೆಗೂ ಇವರ ಯಾವ ಸಿನಿಮಾವೂ ಸೋತಿಲ್ಲ. ಸದ್ಯ ನಿರ್ದೇಶಕ ರಾಜಮೌಳಿ ಹೆಸರಿನಲ್ಲಿ ಈ ದಾಖಲೆ ಇದೆ. ಅದೇ ದಾಖಲೆಯನ್ನು ಅನಿಲ್‌ ರವಿಪುಡಿ ಕೂಡ ಹೊಂದಿದ್ದಾರೆ.

ಚಿರಂಜೀವಿ ಸಿನಿಮಾಕ್ಕೂ ದ್ವೇಷಿಗಳಿದ್ದಾರಾ? ʻಡೆವಿಲ್‌ʼ, ʻಮಾರ್ಕ್‌ʼ, ʻ45ʼ ಹಾದಿಯನ್ನೇ ತುಳಿದ ʻಮನ ಶಂಕರ ವರಪ್ರಸಾದ್‌ ಗಾರುʼ!

ಸಂಕ್ರಾಂತಿ ಸಂಚಲನ

ಚಿರಂಜೀವಿ ನಟನೆಯ ಹಿಂದಿನ ʻಭೋಳಾ ಶಂಕರ್ʼ‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಹಾಗಾಗಿ, 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಗೆಲುವು ಬಹಳ ಪ್ರಮುಖವಾಗಿತ್ತು. ಇದೀಗ ಈ ಸಿನಿಮಾ ಗೆಲುವಿನತ್ತ ಹೆಜ್ಜೆ ಹಾಕಿದೆ. ಸುಮಾರು 100 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರವನ್ನು 85 ದಿನಗಳಲ್ಲಿ ಶೂಟಿಂಗ್‌ ಮಾಡಲಾಗಿದೆ.

ರಿಲೀಸ್‌ಗೂ ಮುನ್ನವೇ ಒಂದಷ್ಟು ಹಣ ಬಾಚಿಕೊಂಡಿದ್ದ ಈ ಸಿನಿಮಾ ಸದ್ಯ ಮೊದಲ ದಿನವೇ ಬ್ಲಾಸ್ಟಿಂಗ್‌ ಕಲೆಕ್ಷನ್‌ ಮಾಡಿದ್ದು, ನಿರ್ಮಾಪಕರಿಗೆ ದೊಡ್ಡ ಮೊತ್ತವನ್ನು ತಂದುಕೊಡುವುದರಲ್ಲಿ ಡೌಟೇ ಬೇಡ. ಈ ಬಾರಿಯ ಸಂಕ್ರಾಂತಿಗೆ ಚಿರಂಜೀವಿ ಸಿನಿಮಾವೇ ವಿನ್ನರ್‌ ಎಂಬ ಮಾತುಗಳು ಕೇಳಿಬಂದಿವೆ. ಸಾಹು ಗಾರಪಾಟಿ ಮತ್ತು ಸುಸ್ಮಿತಾ ಕೊನಿಡೇಲ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಚಿತ್ರತಂಡ ಹಂಚಿಕೊಂಡ ಕಲೆಕ್ಷನ್‌ ಮಾಹಿತಿ

ಈ ಚಿತ್ರದಲ್ಲಿ ಚಿರಂಜೀವಿ ಅವರಿಗೆ ಜೋಡಿಯಾಗಿ ನಯನತಾರಾ ನಟಿಸಿದ್ದರೆ, ವಿಕ್ಟರಿ ವೆಂಕಟೇಶ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಭೀಮ್ಸ್ ಸಿಸಿರೋಲಿಯೊ ಅವರ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿದೆ. ಸದ್ಯ ಸಂಕ್ರಾಂತಿ ಹಬ್ಬದ ರಜೆಯ ಲಾಭ ಪಡೆಯುತ್ತಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಅನೇಕ ದಾಖಲೆಗಳನ್ನು ಬರೆಯುವ ಸೂಚನೆ ನೀಡಿದೆ.