ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಬಗ್ಗೆ ಈಚೆಗೆ ಭಾರಿ ಚರ್ಚೆ ಆಗಿತ್ತು. "ಧನಂಜಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಮಾಂಸಾಹಾರ ಸೇವನೆ ಮಾಡಿದ್ದು ತಪ್ಪು" ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿಬಂದವು. ಇದೀಗ ಈ ಬಗ್ಗೆ ನಟ ಧನಂಜಯ್ ಅವರು ಮಾತನಾಡಿದ್ದಾರೆ. ಸ್ಪಷ್ಟನೆ ಜೊತೆಗೆ ಒಂದಷ್ಟು ಬೇಸರವನ್ನೂ ಹೇಳಿಕೊಂಡಿದ್ದಾರೆ.
"ನನ್ನ ಆಹಾರ, ನನ್ನ ಚಟಗಳು.. ನನ್ನ ಆಯ್ಕೆ ಆಗಿವೆ. ಅದು ನನ್ನ ಇಷ್ಟ. ಬೇರೆ ಯಾರಿಗೂ ತೊಂದರೆ ಕೊಡದೆ ಏನು ಮಾಡಿದರೂ ತಪ್ಪಲ್ಲ ಎಂದು ನಾನು ನಂಬುತ್ತೇನೆ. ಗೆಳೆಯನೊಬ್ಬನ ಹೋಟೆಲ್ ಉದ್ಘಾಟನೆಗೆ ಹೋಗಿ, ಅಲ್ಲಿ ಊಟ ಮಾಡಿದ್ದು, ಇಷ್ಟೊಂದು ದೊಡ್ಡ ಸುದ್ದಿ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಜೊತೆಗೆ ಇದರಲ್ಲಿ ಜಾತಿಯನ್ನು ಎಳೆದು ತಂದದ್ದು ನನಗೆ ಇನ್ನಷ್ಟು ಬೇಸರ ಮಾಡಿತು. ನಾನು ಎಂದಿಗೂ ಲಿಂಗಧರಿಸಿ, ಮಾಂಸಾಹಾರ ಸೇವಿಸಿಲ್ಲ. ಅದು ಕುಟುಂಬದವರಿಗೇ ಬೇಸರ ಮಾಡುತ್ತದೆ. ಇನ್ನೊಬ್ಬರಿಗೆ ನೋವು ಮಾಡುವಂತಹ ಯಾವ ಕೆಲಸವನ್ನು ನಾನು ಮಾಡುವುದಿಲ್ಲ" ಎಂದು ಧನಂಜಯ ಹೇಳಿದ್ದಾರೆ.
Sivakarthikeyan: ಬಹುನಿರೀಕ್ಷಿತ ʻಪರಾಶಕ್ತಿʼ ಸಿನಿಮಾದಲ್ಲಿ ʻಡಾಲಿʼ ಧನಂಜಯ್ ನಟನೆ; ಏನು ಪಾತ್ರ?
ಚರ್ಚೆ ಆಗಬೇಕಾದ ವಿಚಾರಗಳೇನು?
"ನಮ್ಮ ಚಿತ್ರರಂಗಕ್ಕಾಗಿ ನಾನು ಮಾಡುತ್ತಿರುವ ಕೆಲಸಗಳ ಬಗ್ಗೆ ಚರ್ಚೆಯಾಗಬೇಕಿದೆ. ಅದು ನನ್ನ ಆಶಯ. ನಾನು ನಟನಾಗಿ ಚಿತ್ರರಂಗಕ್ಕೆ ಬಂದು, ನಿರ್ಮಾಣ ಸಂಸ್ಥೆ ಆರಂಭಿಸಿದೆ. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಹೊಸಬರಿಗೆ ಅವಕಾಶ ನೀಡಿದೆ. ನಾನು ನೂರಾರು ಕೋಟಿ ವ್ಯಾಪಾರ ಮಾಡುವ ನಿರ್ಮಾಪಕ ಅಲ್ಲದಿದ್ದರೂ, ಚಿತ್ರರಂಗಕ್ಕಾಗಿ ನಾವೆಲ್ಲಾ ಒದ್ದಾಡುತ್ತಿದ್ದೇವೆ. ಆದರೆ ಈ ಬಗ್ಗೆ ಯಾಕೆ ಚರ್ಚೆಯಾಗುತ್ತಿಲ್ಲ" ಎಂದು ಧನಂಜಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Daali Dhananjay Birthday: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಹೊರಬಿತ್ತು ʼಜಿಂಗೋʼ ಚಿತ್ರದ ಪೋಸ್ಟರ್
ತಂದೆಯಾಗುತ್ತಿರುವ ಧನಂಜಯ್
ಅಂದಹಾಗೆ, ನಟ ಧನಂಜಯ್ ಅವರು ಕಳೆದ ವರ್ಷ ಡಾ. ಧನ್ಯತಾ ಅವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಇದೀಗ ಅವರು ತಂದೆಯಾಗುತ್ತಿದ್ದಾರೆ. ಶೀಘ್ರದಲ್ಲೇ ಡಾಲಿ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಎಂಟ್ರಿ ಕೊಡಲಿದ್ದಾರೆ. "ನಾನು ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು, ಈಗ ಮಗುವಿಗೆ ಸಂಬಂಧಿಸಿದ ರೀಲ್ಸ್ಗಳೇ ಬರುತ್ತವೆ. ಈ ಹಂತವನ್ನು ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಮಗುವನ್ನು ಎತ್ತಿಕೊಳ್ಳುವ ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ" ಎಂದು ಡಾಲಿ ಧನಂಜಯ್ ಅವರು ಹೇಳಿದ್ದಾರೆ.
ಸದ್ಯ ಅವರು ಅಣ್ಣಾ ಫ್ರಮ್ ಮೆಕ್ಸಿಕೋ, ಹಲಗಲಿ, 666 ಆಪರೇಷನ್ ಡ್ರೀಮ್ ಥಿಯೇಟರ್ ಮುಂತಾದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಜೆಸಿ, ಹೆಗ್ಗಣ ಮುದ್ದು, ಮದರ್ ಪ್ರಾಮೀಸ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೆಸಿ ಸಿನಿಮಾವು ಇದೇ ಫೆ.6ಕ್ಕೆ ತೆರೆಗೆ ಬರಲಿದೆ.