ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಜಾಹೀರಾತಿಗಾಗಿ ಹಿಜಾಬ್‌ ಧರಿಸಿದ ದೀಪಿಕಾ ಪಡುಕೋಣೆ; ನೆಟ್ಟಿಗರಿಂದ ಭಾರಿ ವಿರೋಧ

ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂಬ ಕೂಗು ಕೇಳಿ ಬಂದಿದೆ. ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಜಾಹೀರಾತಿನಲ್ಲಿ ದೀಪಿಕಾ ಹಿಜಾಬ್‌ ಧರಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಮತ್ತೆ ಕೇಳಿಬಂತು ದೀಪಿಕಾ ಪಡುಕೋಣೆ ಬ್ಯಾನ್‌ ಕೂಗು

-

Ramesh B Ramesh B Oct 8, 2025 4:09 PM

ಮುಂಬೈ, ಅಕ್ಟೋಬರ್‌ 08: ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಹುಬೇಡಿಕೆಯ ನಟಿಯಾಗಿರುವ ಅವರು ಕೆಲವು ತಿಂಗಳ ಹಿಂದೆ 8 ಗಂಟೆ ಮಾತ್ರ ಶೂಟಿಂಗ್‌ನಲ್ಲಿ ಭಾಗವಹಿಸುವುದಾಗಿ ಹೇಳಿ ತೆಲುಗಿನ ʼಸ್ಪಿರಿಟ್‌ʼ ಚಿತ್ರದಿಂದ ಹೊರ ನಡೆದಿದ್ದರು. ಅದಾದ ಬಳಿಕ 'ಕಲ್ಕಿ 2898 ಎಡಿ-2' ಸಿನಿಮಾದದಿಂದಲೂ ಹೊರಬಿದ್ದಿದ್ದರು. ಇದೀಗ ಜಾಹೀರಾತಿನಲ್ಲಿ ಕಾಣಿಸಿಕೊಂಡ ರೀತಿಗೆ ವಿರೋಧ ವ್ಯಕ್ತವಾಗುತ್ತಿದೆ. ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಜಾಹೀರಾತಿನಲ್ಲಿ ದೀಪಿಕಾ ತಮ್ಮ ಪತಿ ರಣವೀರ್‌ ಸಿಂಗ್‌ (Ranveer Singh) ಜತೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ದೀಪಿಕಾ ಹಿಜಾಬ್‌ ಧರಿಸಿದ್ದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ.

ವಿಸಿಟ್‌ ಅಬುಧಾಬಿ (Visit Abu Dhabi) ಅಭಿಯಾನ ಇದಾಗಿದ್ದು, ಈ ವಿಡಿಯೊಕ್ಕೆ ʼಮೇರ ಸುಕೂನ್‌ʼ ಎಂದು ಹೆಸರಿಡಲಾಗಿದೆ. ದೀಪಿಕಾ - ರಣವೀರ್‌ ಅಬುಧಾಬಿಯ ಪ್ರವಾಸಿ ತಾಣದ ಬಗ್ಗೆ ಮಾತನಾಡುತ್ತಾ, ಶೇಖ್ ಜಾಯೆದ್ ಗ್ರಾಂಡ್ ಮಸೀದಿ (Sheikh Zayed Grand Mosque) ಆವರಣಕ್ಕೆ ಬಂದಿದ್ದಾರೆ. ಈ ವೇಳೆ ದೀಪಿಕಾ ಹಿಬಾಬ್‌ ಧರಿಸಿ ಅಲ್ಲಿನ ವಿಶೇಷತೆ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ದೀಪಿಕಾ ಪಡುಕೋಣೆಯನ್ನು ಟ್ರೋಲ್‌ ಮಾಡುವ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಈ ಸುದ್ದಿಯನ್ನೂ ಓದಿ: Deepika Padukone-Ranveer Singh: ಮತ್ತೆ ತೆರೆಮೇಲೆ ಒಂದಾದ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ

ಭಾರಿ ವಿರೋಧ

ಸದ್ಯ ದೀಪಿಕಾ ಹಿಜಾಬ್‌ ಧರಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ದೀಪಿಕಾ ಹಿಂದೂ ಸಂಸ್ಕೃತಿಗೆ ಗೌರವ ನೀಡುತ್ತಿಲ್ಲ ಎಂದು ಹಲವರು ವಾದಿಸಿದ್ದಾರೆ. ʼʼದೀಪಿಕಾ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು. ಅವರು ಹಿಂದೂ ಧರ್ಮದ ಮೌಲ್ಯಗಳನನು ಗೌರವಿಸುತ್ತಿಲ್ಲʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼದೀಪಿಕಾ ದ್ವಿಮುಖ ನೀತಿಯನ್ನು ಹೊಂದಿದ್ದಾರೆ. ಅದಾಗ್ಯೂ ಅವರ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆʼʼ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼದೀಪಿಕಾ ಹಣಕ್ಕಾಗಿ ಹಿಜಾಬ್‌ ಧರಿಸಿದ್ದಾರೆʼʼ ಎಂದು ಮತ್ತೊಬ್ಬರು ಟ್ರೋಲ್‌ ಮಾಡಿದ್ದಾರೆ. ʼʼದೀಪಿಕಾ ಹಿಜಾಬ್‌ ಧರಿಸಿ ಮಸೀದಿ ಪರ ಪ್ರಚಾರ ನಡೆಸುತ್ತಾರೆ. ಆದರೆ ಎಂದಿಗೂ ಹಿಂದೂ ಧರ್ಮದ ಬಗ್ಗೆ ಮಾತನಾಡುವುದಿಲ್ಲʼʼ ಎಂದು ಮಗದೊಬ್ಬರು ದೂರಿದ್ದಾರೆ.

ದೀಪಿಕಾ ಪರ ಹಂಚಿಕೊಳ್ಳಲಾದ ಪೋಸ್ಟ್‌:



ನೆಚ್ಚಿನ ನಟಿಯ ಬೆಂಬಲಕ್ಕೆ ಧಾವಿಸಿದ ಫ್ಯಾನ್ಸ್‌

ಇತ್ತ ದೀಪಿಕಾ ಫ್ಯಾನ್ಸ್‌ ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ದೀಪಿಕಾ ಮತ್ತು ರಣವೀರ್‌ ವಿವಿಧ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಶೇಖ್ ಜಾಯೆದ್ ಗ್ರಾಂಡ್ ಮಸೀದಿಗೆ ತೆರಳುವಾಗ ಪ್ರತಿಯೊಬ್ಬರು ಹಿಜಾಬ್‌ ಧರಿಸಬೇಕಾಗುತ್ತದೆ. ಈ ನಿಯಮವನ್ನು ಅವರು ಅನುಸರಿದ್ದಾರೆ. ಅದರಲ್ಲೇನು ತಪ್ಪು ಎಂದು ಕೆಲವರು ಪ್ರಶ್ನಿಸಿದ್ದಾರೆ. ʼʼವಿಶ್ವ ವಿಖ್ಯಾತ ಗಾಯಕಿ ರಿಯಾನಾ ಕೂಡ ಈ ಮಸೀದಿಗೆ ಭೇಟಿ ನೀಡುವಾಗ ಹಿಜಾಬ್‌ ಧರಿಸುತ್ತಾರೆ. ಈ ಕಾರಣಕ್ಕೆ ದೀಪಿಕಾ ಅವರನ್ನು ವಿರೋಧಿಸುವುರಲ್ಲಿ ಅರ್ಥವಿಲ್ಲʼʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ʼʼದೀಪಿಕಾ ಎಂದಿಗೂ ದೇವಸ್ಥಾನಗಳಲ್ಲಿ ಅಗೌರವದಿಂದ ನಡೆದುಕೊಂಡಿಲ್ಲ. ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಸರಿಯಲ್ಲʼʼ ಎಂದಿದ್ದಾರೆ. ದೀಪಿಕಾ ಯಾವುದೇ ತಪ್ಪು ಮಾಡಿಲ್ಲ ಎಂದು ಹಲವರು ಹೇಳಿದ್ದಾರೆ. ಒಟ್ಟಿನಲ್ಲಿ ಈ ಜಾಹೀರಾತು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ದೀಪಿಕಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ವರ್ಷ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ದುವಾ ಎಂದು ಹೆಸರಿಟ್ಟಾಗಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ದುವಾ ಪದ ಅರೇಬಿಕ್‌ ಮತ್ತು ಇಸ್ಲಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹಲವರು ದೂರಿದ್ದರು. ದೀಪಿಕಾ ಮಗಳಿಗೆ ಮುಸ್ಲಿಂ ಹೆಸರನ್ನು ಇಟ್ಟಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು.