ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿರ್ದೇಶಕ ಆರ್.‌ ಚಂದ್ರುಗೆ ಗೌರವ ಡಾಕ್ಟರೇಟ್; ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ಸಿಹಿ ಸುದ್ದಿ

ನಿರ್ದೇಶಕ ಆರ್‌ ಚಂದ್ರು ಅವರು ಡಾಕ್ಟರೇಟ್‌ ಗೌರವಕ್ಕೆ ಪಾತ್ರರಾಗುವ ಮೂಲಕ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಶಿಡ್ಲಘಟ್ಟದ ಕೇಶವಾರ ಹಳ್ಳಿಯಿಂದ ಬಂದ ಇವರು ಸಿನಿಮಾ ರಂಗದ ಸಾಧನೆ ಮಾತ್ರವಲ್ಲದೆ, ಎತ್ತಿನಹೊಳೆ ಹೋರಾಟ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಮಾಜ ಸೇವೆಗಾಗಿ ಮಣಿಪುರ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಈ ಗೌರವ ಪಡೆದಿದ್ದಾರೆ.

ಆರ್. ಚಂದ್ರುಗೆ ಡಾಕ್ಟರೇಟ್ ಗೌರವ; ಹುಟ್ಟುಹಬ್ಬದ ಸಂಭ್ರಮದಲ್ಲೇ ಸರ್ಪ್ರೈಸ್‌

-

Avinash GR
Avinash GR Feb 8, 2026 3:07 PM

ಸ್ಯಾಂಡಲ್‌ವುಡ್‌ನಲ್ಲಿ ತಾಜ್‌ಮಹಲ್‌, ಚಾರ್‌ಮಿನಾರ್‌, ಕಬ್ಜ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಫೇಮಸ್‌ ಆಗಿರುವ ಆರ್‌ ಚಂದ್ರು, ಸದ್ಯ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವಾರ ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು 20 ವರ್ಷಗಳ ಹಿಂದೆ 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದವರು.

ರೈಟರ್‌ ಆಗಿ ವೃತ್ತಿ ಬದುಕು ಆರಂಭ

ರೈಟರ್ ಆಗಿ ಚಿತ್ರರಂಗದಲ್ಲಿ ವೃತ್ತಿ ಪ್ರಾರಂಭ ಮಾಡಿದ ಚಂದ್ರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಾಧನೆ ಮಾಡಿದ್ದಾರೆ. ಬರಿ ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿ ಹಳ್ಳಿಗೂ ಚಂದ್ರು ಪರಿಚಯ. ಎತ್ತಿನಹೊಳೆ ಯೋಜನೆ ಹೋರಾಟ ಸೇರಿದಂತೆ ಹಲವು ಅಭಿವೃದ್ಧಿಪರ ಹೋರಾಟದಲ್ಲಿ ಭಾಗಿಯಾಗಿದ್ದ ಚಂದ್ರು, ಶಿಕ್ಷಣ ಹಾಗೂ ಧಾರ್ಮಿಕವಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ಜೊತೆಗೆ ಚಂದ್ರು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ಮಣಿಪುರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಡಲು ಘೋಷಣೆ ಮಾಡಿರುವುದು ವಿಶೇಷ. ಅದು ಕೂಡ ಹುಟ್ಟುಹಬ್ಬದ ಸಂದರ್ಭದಲ್ಲಿ. ಆರ್.‌ ಚಂದ್ರು.

ತಂದೆಯಿಂದಲೇ ʻಫಾದರ್‌ʼ ಚಿತ್ರದ ಥೀಮ್ ವಿಡಿಯೋ ರಿಲೀಸ್‌ ಮಾಡಿಸಿದ ಆರ್‌. ಚಂದ್ರು; ಇದು ಪ್ರಕಾಶ್‌ ರಾಜ್‌ - ʻಡಾರ್ಲಿಂಗ್‌ʼ ಕೃಷ್ಣ ಸಿನಿಮಾ

"ಡಾಕ್ಟರೇಟ್ ಪಡೆಯುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ನಾನು ಡಾಕ್ಟರ್‌ ಆಗಬೇಕು ಎಂಬುದು ನಮ್ಮ ತಂದೆ ಆಸೆ ಆಗಿತ್ತು. ಅದಕ್ಕಾಗಿ ನನ್ನನ್ನು ಓದಿಸುತ್ತಿದ್ದರು. ಆದರೆ ಅದು ಆಗಲಿಲ್ಲ. ನನಗೆ ಸಿನಿಮಾರಂಗ ಇಷ್ಟವಿದ್ದರಿಂದ ಇಲ್ಲಿಗೆ ಬಂದೆ. ನಾನು ಮಾಡಿರುವ ಸಿನಿಮಾ ಸೇರಿದಂತೆ ಗಿಡ ನೆಡುವುದು, ನೀರಾವರಿ ಹೋರಾಟ ಹೀಗೆ ಸಮಾಜಪರ ಕೆಲಸಕ್ಕೆ ಈ ಗೌರವ ಡಾಕ್ಟರೇಟ್ ಬಂದಿದೆ. ಈ ಡಾಕ್ಟರೇಟ್ ಬಂದಿದ್ದು ತಂದೆಗೆ ಅರ್ಪಣೆ ಮಾಡುತ್ತೇನೆ" ಅಂತಾರೆ ಆರ್.‌ ಚಂದ್ರು.

ನಮ್ಮವರು ನಮ್ಮ ಸಿನಿಮಾಗಳನ್ನು ಇಷ್ಟಪಡಬೇಕು

"ನಾನು ಕೇವಲ ಸಿನಿಮಾಗೆ ಸೀಮಿತವಾಗದೆ ಕೃಷಿ, ಮೀನುಗಾರಿಕೆ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದೇನೆ. ನನಗೆ 'ಡಾಕ್ಟರ್' ಎಂಬ ಬಿರುದಿಗಿಂತಲೂ, 'ಆರ್. ಚಂದ್ರು' ಎಂದು ಕರೆಸಿಕೊಳ್ಳುವುದೇ ಹೆಚ್ಚು ಇಷ್ಟ. ಇಂದು ಚಿತ್ರರಂಗದ ಬಗ್ಗೆ ಬ್ಯಾಡ್ ಇಂಪ್ರೆಸ್ ಆಗುತ್ತಿದೆ. ನಾವೆಲ್ಲಾ ಪ್ರೀತಿಯಿಂದ ಸಿನಿಮಾ ಮಾಡಬೇಕು. ಹಾಗೆಯೇ ಪ್ರೇಕ್ಷಕ ಮೊದಲು ನಮ್ಮ ಮನೆ ಊಟ (ಸಿನಿಮಾ) ಇಷ್ಟ ಪಡುವಂತೆ ಆಗಬೇಕು. ಸದ್ಯ ನಮ್ಮ ನಿರ್ಮಾಣದ 'ಫಾದರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ನಾನೇ ಮತ್ತೊಂದು ಬೃಹತ್ ಮಟ್ಟದ ಸಿನಿಮಾವನ್ನು ಯೋಜಿಸುತ್ತಿದ್ದು, ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ನೀಡಲಿದ್ದೇನೆ" ಎಂದು ಚಂದ್ರು ಮಾಹಿತಿ ನೀಡಿದರು.

ತಮ್ಮ ಕುಟುಂಬ ಸದಸ್ಯರ ಜೊತೆಗೆ ಚಂದ್ರು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಚಂದ್ರು ಹಿತೈಷಿ ಕೆಎಎಸ್ ಅಧಿಕಾರಿ ಮಂಜಪ್ಪ, ನಿರ್ಮಾಪಕ ಉದಯ ಮೆಹ್ತಾ, ಜೀಮ್ ರವಿ, ನವರಸನ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದು, ಶುಭ ಹಾರೈಸಿದರು.