‘ಉಳಿದದ್ದನ್ನು ಕಾಲ, ಕರ್ಮಕ್ಕೆ ಬಿಡುತ್ತೇನೆ’; ನಟ ʻದುನಿಯಾʼ ವಿಜಯ್‌ಗೆ ಡಿವೋರ್ಸ್ ನೀಡಿದ ಬಳಿಕ ನಾಗರತ್ನ ಸುದೀರ್ಘ ಪತ್ರ!
ʻದುನಿಯಾʼ ವಿಜಯ್ ಪ್ರಕರಣದಲ್ಲಿ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಹೈಕೋರ್ಟ್ ಕಾನೂನಾತ್ಮಕ ಅಂತ್ಯ ಹಾಡಿದೆ. ತೀರ್ಪಿನ ಬೆನ್ನಲ್ಲೇ ಮಾಜಿ ಪತ್ನಿ ನಾಗರತ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅನೈತಿಕ ಸಂಬಂಧವನ್ನು ಅಧಿಕೃತಗೊಳಿಸಲು ವಿಚ್ಛೇದನ ಪಡೆಯಲಾಗಿದೆ ಎಂದು ಆಪಾದಿಸಿದ್ದಾರೆ.
-
ನಟ 'ದುನಿಯಾ' ವಿಜಯ್ ಮತ್ತು ನಾಗರತ್ನ ಅವರ 27 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. 2013ರಿಂದಲೂ ಕೌಟುಂಬಿಕ ಕಲಹದ ಮೂಲಕ ಸುದ್ದಿಯಲ್ಲಿದ್ದ ಈ ದಂಪತಿಗೆ ಹೈಕೋರ್ಟ್ ಈಗ ವಿಚ್ಛೇದನ ಮಂಜೂರು ಮಾಡಿದ್ದು, ಕಾನೂನಾತ್ಮಕವಾಗಿ ಇವರಿಬ್ಬರ ಸಂಬಂಧ ತಾರ್ಕಿಕ ಅಂತ್ಯ ಕಂಡಿದೆ. ವಿಚ್ಛೇದನದ ಬಳಿಕ ವಿಜಯ್ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದೀಗ ನಾಗರತ್ನ ಕೂಡ ತಮ್ಮ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.
ಕೊನೆಗೂ ಆ ಉದ್ದೇಶ ಈಡೇರಿದೆ
"ಎಲ್ಲಾ ಪ್ರೀತಿಯ ಜನತೆಗೆ ಹಾಗೂ ಮಾಧ್ಯಮದವರಿಗೆ ನನ್ನ ನಮಸ್ಕಾರಗಳು... ಇಷ್ಟು ವರ್ಷಗಳ ಕಾಲ ನಾನು, ನನ್ನ ಮಕ್ಕಳಿಗಾಗಿ ಹಾಗೂ ಅವರ ಭವಿಷ್ಯದ ಒಳಿತಿಗಾಗಿ ಎಲ್ಲವನ್ನೂ ಸಹಿಸಿಕೊಂಡು, ಈ ಮದುವೆಯನ್ನು ಉಳಿಸಿಕೊಳ್ಳುವ ಆಶಯದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದೆ. ಅದು ಸುಲಭವಾಗಿರಲಿಲ್ಲ. ಆದರೆ ಇಂದು, ನ್ಯಾಯಾಲಯವು ಅಂತಿಮವಾಗಿ ವಿಚ್ಛೇದನವನ್ನು ಮಂಜೂರು ಮಾಡಿದೆ. ಈ ದೀರ್ಘ ಹೋರಾಟದ ಉದ್ದೇಶ, ನಮ್ಮ ಮದುವೆಯ ಹೊರಗೆ ಆಯ್ಕೆ ಮಾಡಿಕೊಂಡ ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಆಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ"
ಅರಿವು ಮೂಡಿಸುವುದೇ ನನ್ನ ಉದ್ದೇಶ
"ನಾನು ಅನುಭವಿಸಿದ NARCISSISTIC ABUSE ಹಾಗೂ ಅದರ ನೋವು ಮತ್ತು ಅದರಿಂದಾದ ಎಲ್ಲಾ ಪರಿಣಾಮಗಳನ್ನು ಸಹಿಸಿಕೊಂಡಿದ್ದೇನೆ. ಹೊರಗಿನಿಂದ ಯಾರಿಗೂ ಕಾಣದಂತಹ ಆಳವಾದ ಮಾನಸಿಕ ಹಾಗೂ ಭಾವನಾತ್ಮಕ ನೋವನ್ನು ಒಳಗೇ ಇಟ್ಟುಕೊಂಡು ಬದುಕುವುದು ಹೇಗಿರುತ್ತದೆ ಎಂಬುದು ನನಗೆ ಮಾತ್ರ ಗೊತ್ತು. ನನ್ನ ಅನುಭವವನ್ನು ಒಂದು ದಿನ ಖಂಡಿತವಾಗಿಯೂ ಹಂಚಿಕೊಳ್ಳಲು ಬಯಸುತ್ತೇನೆ. ಯಾರ ಮೇಲೂ ಆರೋಪ ಹೊರಿಸುವುದಕ್ಕಾಗಲಿ ಅಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಅರಿವು ಮೂಡಿಸುವುದೇ ನನ್ನ ಉದ್ದೇಶ"
ನನ್ನದೇ ಮಾತುಗಳಲ್ಲಿ ಹಂಚಿಕೊಳ್ಳುತ್ತೇನೆ
"ನನ್ನ ಮಕ್ಕಳ ಭವಿಷ್ಯವೇ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿತ್ತು, ಇಂದಿಗೂ ಅದೇ ನನ್ನ ಮೊದಲ ಆದ್ಯತೆ. ಏಕೆಂದರೆ... ಅವರ ಜೀವನದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ, ನನ್ನ ವೈಯಕ್ತಿಕ ನೋವುಗಳು ಅದರ ಮೇಲೆ ನೆರಳು ಬೀಳುವುದು ನನಗೆ ಇಷ್ಟವಿಲ್ಲ. ಆದ್ದರಿಂದ ಇಂದು ನಾನು ಮೌನವಾಗಿರಲು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲದಕ್ಕೂ ಒಂದು ಸರಿಯಾದ ಸಮಯವಿದೆ ಎಂಬ ಕಾರಣಕ್ಕೆ. ಒಂದು ದಿನ ನನ್ನ ಅನುಭವವನ್ನು ನನ್ನದೇ ಮಾತುಗಳಲ್ಲಿ ಹಂಚಿಕೊಳ್ಳುತ್ತೇನೆ"
ನನ್ನ ಮಕ್ಕಳು ನನ್ನ ಶಕ್ತಿ
"ನನ್ನ ಮಕ್ಕಳು ಯಾವಾಗಲೂ ನನ್ನ ಶಕ್ತಿಯಾಗಿ ನನ್ನ ಜೊತೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೂವರು ಮಕ್ಕಳ ಮೇಲಿದ್ದರೆ, ನನಗೆ ಅಷ್ಟೇ ಸಾಕು. ವಿಜಯ್ ಕುಮಾರ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ. ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ"- ಎಂದು ನಾಗರತ್ನ ಅವರು ಬರೆದುಕೊಂಡಿದ್ದಾರೆ.