ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maarutha Review:‌ ಸೋಶಿಯಲ್ ಮೀಡಿಯಾದ ಕ್ರೈಮ್‌ಗಳ ಮೇಲೆ ಬೆಳಕು ಚೆಲ್ಲುವ ʻಮಾರುತʼ

Maarutha Review And Rating: ನಿರ್ದೇಶಕ ಎಸ್‌. ನಾರಾಯಣ್‌ ಅವರು ಈ ಹಿಂದೆ 5ಡಿ ಎಂಬ ಥ್ರಿಲ್ಲರ್‌ ಸಿನಿಮಾ ಮಾಡಿದ್ದರು. ಈಗ ಮಾರುತ ಹೆಸರಿನ ಮತ್ತೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಈ ಸಿನಿಮಾದಲ್ಲಿ ಒಂದು ಪಾತ್ರವನ್ನು ನಟ ದುನಿಯಾ ವಿಜಯ್‌ ಅವರು ನಿಭಾಯಿಸಿರುವುದು ವಿಶೇಷ. ಅಷ್ಟಕ್ಕೂ ಈ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

Maarutha Review:‌ ಶ್ರೇಯಸ್‌ ಮಂಜು ನಟನೆಯ ʻಮಾರುತʼ ಸಿನಿಮಾ ಹೇಗಿದೆ?

-

Avinash GR
Avinash GR Nov 21, 2025 4:02 PM

Film: ಮಾರುತ

Release Date - ನವೆಂಬರ್‌ 21, 2025

Language - ಕನ್ನಡ

Genre - ಥ್ರಿಲ್ಲರ್‌, ಸಸ್ಪೆನ್ಸ್‌, ಡ್ರಾಮಾ

Director - ಎಸ್.‌ ನಾರಾಯಣ್

Cast - ವಿಜಯ್‌ ಕುಮಾರ್‌, ಶ್ರೇಯಸ್‌ ಮಂಜು, ಬೃಂದಾ ಆಚಾರ್ಯ, ತಾರಾ ಅನುರಾಧ, ಶರತ್‌ ಲೋಹಿತಾಶ್ವ, ರಂಗಾಯಣ ರಘು, ಸಾಧುಕೋಕಿಲ

Duration - 156 Minutes

Rating: 2.5/5


ನಿರ್ದೇಶಕ ಎಸ್‌ ನಾರಾಯಣ್‌ ಅವರು ಫ್ಯಾಮಿಲಿ ಡ್ರಾಮಾಗಳಿಗೆ ಹೆಸರಾದವರು. ಈ ಹಿಂದೆ ಎಂತೆಂಥ ಸೂಪರ್‌ ಹಿಟ್‌ ಸಿನಿಮಾಗಳನ್ನು ಕನ್ನಡಿಗರಿಗೆ ಕೊಟ್ಟಿರುವುದು ಗೊತ್ತೇ ಇದೆ. ಈಚೆಗೆ ಅವರು ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ಆದಿತ್ಯ ನಟನೆಯಲ್ಲಿ 5ಡಿ ಎಂಬ ಸಿನಿಮಾ ಮಾಡಿದ್ದರು. ಇದೀಗ ʻಮಾರುತʼಚಿತ್ರವನ್ನು ಕನ್ನಡಿಗರ ಮುಂದಿಟ್ಟಿದ್ದಾರೆ ಎಸ್‌ ನಾರಾಯಣ್‌. ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ಅವರು ನಟಿಸುತ್ತಿದ್ದಾರೆ ಎಂದಾಗಲೇ ಮಾರುತ ಮೇಲೆ ಒಂದುಮಟ್ಟಿಗಿನ ನಿರೀಕ್ಷೆ ಮೂಡಿತ್ತು. ಹಾಗಾದರೆ, ಈ ಚಿತ್ರ ಹೇಗಿದೆ? ಮುಂದೆ ಓದಿ.

ಮಾರುತ ಕಥೆ ಏನು?

ನಿರ್ದೇಶಕ ಎಸ್‌ ನಾರಾಯಣ್‌ ಅವರು ಈ ಬಾರಿ ಸೋಶಿಯಲ್‌ ಮೀಡಿಯಾದಿಂದ ಆಗುತ್ತಿರುವ ಅಪರಾಧಗಳ ಬಗ್ಗೆ ಹೇಳಹೊರಟಿದ್ದಾರೆ. ಆದರೆ ಅವರು ಆಯ್ಕೆ ಮಾಡಿಕೊಂಡಿರುವ ಕಥಾ ನಿರೂಪಣೆ ಬಹಳವೇ ಭಿನ್ನ. ಮೊದಲು ಬೆಂಗಳೂರಿನಲ್ಲಿ ನಡೆಯುವ ಕ್ರೈಮ್‌ಗಳ ಬಗ್ಗೆ ಹೇಳುತ್ತಾ ತೆರೆದುಕೊಳ್ಳುವ ಸಿನಿಮಾ, ನಂತರ ಮಲೆನಾಡಿಗೆ ಶಿಫ್ಟ್‌ ಆಗುತ್ತದೆ. ಫ್ಯಾಮಿಲಿ ಡ್ರಾಮಾ ತೆರೆದುಕೊಳ್ಳುತ್ತದೆ. ಹೀರೋಗಾಗಿ ಕಷ್ಟಪಡುವ ಅಪ್ಪ - ಅಮ್ಮ, ಎದುರು ಮನೆಯ ಹುಡುಗಿ ಮೇಲೆ ಪ್ರೇಮ, ಎಲ್ಲ ಟೈಮ್‌ನಲ್ಲೂ ಜೊತೆಗಿರುವ ಮಾಮಾ.. ಚಿಕ್ಕಮಗಳೂರಿನಲ್ಲಿ ಸಂಚರಿಸುವ ಕಥೆ ಇದ್ದಕ್ಕಿದ್ದಂತೆಯೇ ತಿರುವು ಪಡೆದುಕೊಳ್ಳುತ್ತದೆ. ಊರೂರು ಸುತ್ತುತ್ತ ಎಲ್ಲೆಲ್ಲೋ ಸಾಗುವ ಮಾರುತ ಅಂತಿಮವಾಗಿ ಸಂದೇಶದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಮೇಕಿಂಗ್‌ ಹೇಗಿದೆ?

ಮಾರುತದಲ್ಲಿ ಹೊಸತನದ ಕೊರತೆ ಇದೆ. ಚಿತ್ರದಲ್ಲಿರುವ ಫ್ಯಾಮಿಲಿ ಡ್ರಾಮಾವನ್ನು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕಂಡಿದ್ದೇವೆ. ಆ ವಿಚಾರದಲ್ಲಿ ನಿರ್ದೇಶಕರು ಅಪ್ಡೇಟ್‌ ಆಗುವ ಅವಶ್ಯಕತೆ ಇತ್ತು. ಸಿನಿಮಾ ಯಾವ ವಿಷಯದ ಮೇಲೆ ಕೇಂದ್ರಿಕರಿಸಿದೆಯೋ, ಅದನ್ನೇ ಹೈಲೈಟ್‌ ಮಾಡಿಕೊಂಡು, ಇನ್ನಷ್ಟು ಬಿಗಿಯಾದ ನಿರೂಪಣೆಯೊಂದಿಗೆ ಒಂದು ಅಚ್ಚುಕಟ್ಟಾದ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ಮಾಡುವ ಎಲ್ಲಾ ಅವಕಾಶಗಳು ನಿರ್ದೇಶಕರಿಗೆ ಇದ್ದವು.

Duniya Vijay: ಮತ್ತೊಂದು ತೆಲುಗು ಚಿತ್ರದಲ್ಲಿ ದುನಿಯಾ ವಿಜಯ್‌; ಪುರಿ ಜಗನ್ನಾಥ್-ವಿಜಯ್‌ ಸೇತುಪತಿ ಸಿನಿಮಾಕ್ಕೆ ಎಂಟ್ರಿ

ಈ ಚಿತ್ರದ ಪ್ಲಸ್‌ ಪಾಯಿಂಟ್‌ ಏನೆಂದರೆ, ಕಲಾವಿದರು. ಬಹುತೇಕ ಎಲ್ಲಾ ಅನುಭವಿ ಮತ್ತು ಪರಿಚಿತ ಕಲಾವಿದರೇ ಇಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಏನೂ ಕೊರತೆಯಾಗದಂತೆ ನಿರ್ಮಾಪಕರು ಒದಗಿಸಿರುವುದು ಗೊತ್ತಾಗುತ್ತದೆ. ಆದರೂ ಸ್ಕ್ರಿಪ್ಟ್‌ನಲ್ಲಿ ಕೆಲ ದೋಷಗಳು ಕೊನೆಯವರೆಗೂ ತಾಳ್ಮೆ ಪರೀಕ್ಷೆ ಮಾಡುತ್ತವೆ. ಸಾಹಸ ಸನ್ನಿವೇಶಗಳು ಚೆನ್ನಾಗಿವೆ. ಸೋಶಿಯಲ್‌ ಮೀಡಿಯಾದಲ್ಲಿನ ನಕಲಿ ಅಕೌಂಟ್‌ಗಳಿಂದ ಏನೆಲ್ಲಾ ಸಮಸ್ಯೆಗಳಾಗುತ್ತಿವೆ? ಯಾವ ರೀತಿ ಹೆಣ್ಣು ಮಕ್ಕಳನ್ನು ಯಾಮಾರಿಸುತ್ತಿದ್ದಾರೆ ಎಂಬುದನ್ನು ಒಂದು ಸಮಾಜಮುಖಿ ಸಂದೇಶದ ಮೂಲಕ ಹೇಳಲಾಗಿದೆ. ಜೆಸ್ಸಿ ಗಿಫ್ಟ್‌ ಅವರ ಸಂಗೀತದಲ್ಲಿ ಹೊಸತನವಿಲ್ಲ. ಇನ್ನು, ಹಳೆ ಕಾಲದ ಕಾಮಿಡಿ ಟ್ರ್ಯಾಕ್‌ಗಳು ನಗಿಸುವುದಿಲ್ಲ. ಸಿನಿಮಾದ ಪೂರ್ತಿ ಇರುವ ಸಾಧು ಕೋಕಿಲ ಅವರನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ‌

Marutha Movie: ದುನಿಯಾ ವಿಜಯ್ - ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ʼಮಾರುತʼ ಚಿತ್ರ ಅ.31ಕ್ಕೆ ರಿಲೀಸ್‌

ಕಲಾವಿದರ ನಟನೆ ಹೇಗಿದೆ?

ನಟ ದುನಿಯಾ ವಿಜಯ್‌ ಅವರು ಈ ಹಿಂದೆಯೇ, "ನಾನು ಈ ಸಿನಿಮಾದ ಹೀರೋ ಅಲ್ಲ" ಎಂದು ಹೇಳಿದ್ದರು. ಅವರು ಹೇಳಿದ್ದು ನಿಜ. ಅವರಿಲ್ಲಿ ಹೀರೋ ಅಲ್ಲ, ಬದಲಿಗೆ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆರಂಭದಿಂದ ಕೊನೆಯವರೆಗೂ ಕುತೂಹಲದಿಂದಲೇ ಈ ಪಾತ್ರ ಸಾಗುತ್ತದೆ. ಸಿನಿಮಾ ನಟ/ನಿರ್ದೇಶಕನಾಗಬೇಕೆಂಬ ಕನಸು ಕಾಣುವ ಮತ್ತು ಎದುರು ಮನೆಯ ಹುಡುಗಿ ಮೇಲಿನ ಪ್ರೀತಿಗಾಗಿ ಏನೂ ಬೇಕಾದರೂ ಮಾಡಲು ತಯಾರಾಗಿ, ಹಲವು ರಿಸ್ಕ್‌ಗಳಿಗೆ ಸಿಲುಕಿಕೊಳ್ಳುವ ಈಶ ಎಂಬ ಪಾತ್ರದಲ್ಲಿ ನಟ ಶ್ರೇಯಸ್‌ ಮಂಜು ಕಾಣಿಸಿಕೊಂಡಿದ್ದಾರೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ನಟನೆಯಲ್ಲಿ ಅವರು ಮಾಗಿದ್ದಾರೆ. ಸಿಕ್ಕ ಪಾತ್ರವನ್ನು ನಾಯಕಿ ಬೃಂದಾ ಆಚಾರ್ಯ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಹೀರೋ ಮಾಮನ ಪಾತ್ರದಲ್ಲಿ ಸಾಧು ಕೋಕಿಲ ಸಿನಿಮಾ ಪೂರ್ತಿ ಇದ್ದಾರೆ. ಆದರೂ ನಗುವಿನ ಕೊರತೆ ಕಾಡುತ್ತದೆ. ಪೋಷಕರ ಪಾತ್ರದಲ್ಲಿ ತಾರಾ ಮತ್ತು ಶರತ್‌ ಲೋಹಿತಾಶ್ವ ಅವರ ನಟನೆ ಇಷ್ಟವಾಗುತ್ತದೆ. ಕಲ್ಯಾಣಿ, ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಮಂಜು ಪಾವಗಡ, ಗಿರಿ ಶಿವಣ್ಣ, ಸುಜಯ್‌ ಶಾಸ್ತ್ರೀ ಸೇರಿದಂತೆ ಇನ್ನೂ ಅನೇಕ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ. ಒಂದು ದೃಶ್ಯದಲ್ಲಿ ರವಿಚಂದ್ರನ್‌ ಮತ್ತು ನಿಶ್ವಿಕಾ ನಾಯ್ಡು ಕೂಡ ಬಂದುಹೋಗುತ್ತಾರೆ.