ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻದಿ ಕೇರಳ ಸ್ಟೋರಿ 2ʼ ಸಿನಿಮಾದ ಕಲೆಕ್ಷನ್‌ನಲ್ಲಿ ಮತ್ತೆ ಇಳಿಕೆ; ಅಂದುಕೊಂಡಷ್ಟು ಆಗುತ್ತಿಲ್ಲ ಗಳಿಕೆ!

The Kerala Story 2 Box Office: ವಿವಾದ ಮತ್ತು ಕಾನೂನು ಹೋರಾಟಗಳ ನಂತರ ಫೆಬ್ರವರಿ 27 ರಂದು ತೆರೆಕಂಡ 'ದಿ ಕೇರಳ ಸ್ಟೋರಿ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದೆ. ಮೊದಲ 4 ದಿನಗಳಲ್ಲಿ ಈ ಚಿತ್ರವು ಕೇವಲ 12.80 ಕೋಟಿ ರೂ. ಗಳಿಕೆಯನ್ನಷ್ಟೇ ಮಾಡಿದೆ.

ಹೇಗಿದೆ 'ದಿ ಕೇರಳ ಸ್ಟೋರಿ 2' ಕಲೆಕ್ಷನ್‌? 4 ದಿನಗಳಲ್ಲಿ ಆದ ಗಳಿಕೆ ಎಷ್ಟು?

-

Avinash GR
Avinash GR Mar 3, 2026 8:04 PM

ರಿಲೀಸ್‌ಗೂ ಮುನ್ನವೇ ಭಾರಿ ಸದ್ದು ಮಾಡಿದ್ದ ಸಿನಿಮಾ ʻದಿ ಕೇರಳ ಸ್ಟೋರಿ 2ʼ. ಹಲವು ಕಾನೂನು ಸಂಘರ್ಷಗಳ ನಂತರ ಈ ಚಿತ್ರವು ಫೆಬ್ರವರಿ 27ರ ಸಂಜೆಯಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಿಸಿತ್ತು. ʻದಿ ಕೇರಳ ಸ್ಟೋರಿ 2ʼ ಸಿನಿಮಾದ ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಮಾತ್ರ ನೀರಸ ಪ್ರದರ್ಶನ ಕಾಣುತ್ತಿದೆ. ʻದಿ ಕೇರಳ ಸ್ಟೋರಿ 2ʼ ಹುಟ್ಟಿಸಿದ್ದ ನಿರೀಕ್ಷೆಗೆ ಹೋಲಿಸಿದರೆ, ಆಗುತ್ತಿರುವ ಗಳಿಕೆ ಏನೇನೂ ಅಲ್ಲ!

ನಾಲ್ಕು ದಿನಗಳಿಗೆ ಆಗಿರುವ ಗಳಿಕೆ ಎಷ್ಟು?

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಈ ಚಿತ್ರವು ಮೊದಲ ಮೂರು ದಿನಗಳಲ್ಲಿ ಅಂದಾಜು 10.15 ಕೋಟಿ ರೂ. ಗಳಿಸಿದ್ದರೆ, 4ನೇ ದಿನ ಸುಮಾರು 2.65 ಕೋಟಿ ರೂ. ಸಂಗ್ರಹಿಸಿದೆ. ಸುಮಾರು 28 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರವು ಇದುವರೆಗೆ ಭಾರತದ ಮಾರುಕಟ್ಟೆಯಲ್ಲಿ 12.80 ಕೋಟಿ ರೂ. ಗಳಿಸಿದೆ. ಇದಕ್ಕೆ ವಿಶ್ವಾದ್ಯಂತ ಆಗಿರುವ ಎಲ್ಲಾ ಗಳಿಕೆಯನ್ನು ಸೇರಿಸಿದರೆ, ಆ ಮೊತ್ತವು 15 ಕೋಟಿ ರೂ. ದಾಟಲಿದೆ.

Sudipto Sen: ʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಿಸಿದ್ದಕ್ಕೆ ಕೇರಳ ಸಿಎಂ ಆಕ್ಷೇಪ; ಖಡಕ್‌ ರಿಪ್ಲೈ ಕೊಟ್ಟ ನಿರ್ದೇಶಕ ಸುದೀಪ್ತೊ ಸೇನ್‌

ಬಜೆಟ್‌ ರಿಕವರಿ ಆಗತ್ತಾ?

ಈ ಚಿತ್ರಕ್ಕೆ ಹಾಕಿರುವ ಬಜೆಟ್‌ನ ಅರ್ಧದಷ್ಟು ಕೂಡ ಹಣ ವಾಪಸ್‌ ಆಗಿಲ್ಲ. ವಾರಾಂತ್ಯದಲ್ಲಿ ಪ್ರತಿ ದಿನ 4 ಕೋಟಿ ರೂ. ಮೇಲೆ ಗಳಿಕೆ ಆಗುತ್ತಿತ್ತು. ಆದರೆ, ಸೋಮವಾರ 2.65 ಕೋಟಿ ರೂ. ಗಳಿಕೆ ಆಗಿದೆ. ಮಂಗಳವಾರ (ಮಾ.3) ಕೂಡ ಇದೇ ಪ್ರಮಾಣದಲ್ಲಿ ಗಳಿಕೆ ಆಗುವ ನಿರೀಕ್ಷೆ ಇದೆ. ಈ ಚಿತ್ರದಿಂದ ನಿರ್ಮಾಪಕರು ದೊಡ್ಡಮಟ್ಟದ ಲಾಭ ನೋಡಬೇಕು ಎಂದರೆ, ಕನಿಷ್ಠ ಎಂದರೂ 70-80 ಕೋಟಿ ರೂ.ಗಳಾದರೂ ಗಳಿಕೆ ಆಗಬೇಕು. ಆದರೆ ಈಗಿರುವ ಪರಿಸ್ಥಿತಿ ಗಮನಿಸಿದರೆ, ಈ ಸಿನಿಮಾವು 25 ಕೋಟಿ ರೂ. ಕೂಡ ಕ್ರಾಸ್‌ ಮಾಡುವುದು ಕಷ್ಟ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಆಗಲಿದೆಯಾ ಎಂಬುದನ್ನು ಕಾದುನೋಡಬೇಕು.

ʻದಿ ಕೇರಳ ಸ್ಟೋರಿ 2ʼ ಸಿನಿಮಾಗೆ ನೀಡಿದ್ದ ತಡೆಯಾಜ್ಞೆ ರದ್ದು; ಯಾವಾಗ ರಿಲೀಸ್‌ ಆಗಲಿದೆ ಈ ಚಿತ್ರ?

ಭಾರಿ ಸದ್ದು ಮಾಡಿದ್ದ ದಿ ಕೇರಳ ಸ್ಟೋರಿ 2

ಬಿಡುಗಡೆಗೂ ಮುನ್ನವೇ ‘ದಿ ಕೇರಳ ಸ್ಟೋರಿ 2’ ಚಿತ್ರವು ತೀವ್ರ ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು. ಒಂದು ವರ್ಗವು ಈ ಚಿತ್ರವು ಅಸಹಿಷ್ಣುತೆ ಮತ್ತು ಇಸ್ಲಾಮೋಫೋಬಿಯಾವನ್ನು ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಿದರೆ, ಮತ್ತೊಂದು ವರ್ಗವು ಇದು ಕೇರಳದ ಘನತೆಗೆ ಧಕ್ಕೆ ತರುವ ಅಪಾಯವಿದೆ ಎಂದು ವಾದಿಸಿತ್ತು. ಈ ಚಿತ್ರದ ಸೆನ್ಸಾರ್ ಮತ್ತು ಬಿಡುಗಡೆಯ ಸುತ್ತ ನಡೆದ ಕಾನೂನು ಪ್ರಕ್ರಿಯೆಗಳು ವಿವಾದವು ಇನ್ನಷ್ಟು ತೀವ್ರವಾಗುವಂತೆ ಮಾಡಿತು.

ಆರಂಭದಲ್ಲಿ ಕೇರಳ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿತ್ತು ಮತ್ತು ನಂತರ ಅದೇ ನ್ಯಾಯಾಲಯದ ವಿಭಾಗೀಯ ಪೀಠವು ತಡೆಯಾಜ್ಞೆಯನ್ನು ತೆರವುಗೊಳಿಸಿ, ಚಿತ್ರದ ಬಿಡುಗಡೆಗೆ ಅವಕಾಶ ನೀಡಿತ್ತು.