#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Actor Yash: ಯಶ್‌ಗೆ ರಿಲೀಫ್‌, ಟಾಕ್ಸಿಕ್‌ ಸಿನಿಮಾ ತಂಡದ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Actor Yash: ಯಶ್‌ಗೆ ರಿಲೀಫ್‌, ಟಾಕ್ಸಿಕ್‌ ಸಿನಿಮಾ ತಂಡದ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಹರೀಶ್‌ ಕೇರ ಹರೀಶ್‌ ಕೇರ Dec 6, 2024 6:50 AM
ಬೆಂಗಳೂರು: ಬೆಂಗಳೂರಿನ ಎಚ್‌ಎಂಟಿ (HMT) ಆವರಣದಲ್ಲಿ ಯಶ್‌ (Actor Yash) ನಟನೆಯ ಟಾಕ್ಸಿಕ್ (Toxic movie) ಸಿನಿಮಾ ಸೆಟ್‌ ನಿರ್ಮಾಣಕ್ಕಾಗಿ ಮರ ಕಡಿದ ಆರೋಪದ ಮೇಲೆ ಸಿನಿಮಾ ನಿರ್ಮಾಪಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಗೆ ಹೈಕೋರ್ಟ್ (Karnataka High court) ತಡೆ ನೀಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್‌ರ ಮಾನ್‌ಸ್ಟರ್ ಮೈಂಡ್ಸ್ ವಿರುದ್ಧ ರಾಜ್ಯ ಅರಣ್ಯ ಇಲಾಖೆ ದೂರು ನೀಡಿತ್ತು, ದೂರನ್ನು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಟಾಕ್ಸಿಕ್ ಸಿನಿಮಾಗಾಗಿ ಬೆಂಗಳೂರಿನ ಎಚ್‌ಎಂಟಿ ಮೈದಾನದ ಸಮೀಪದ ಕೆನರಾ ಬ್ಯಾಂಕ್‌ಗೆ ಸೇರಿದ್ದ ಜಾಗದಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಸೆಟ್ ನಿರ್ಮಿಸಲು ಮೈದಾನದಲ್ಲಿದ್ದ ಮರಗಳನ್ನು ಕಡಿಯಲಾಗಿದೆ ಎನ್ನುವ ಆರೋಪ ಸಿನಿಮಾ ತಂಡದ ಮೇಲೆ ಬಂದಿತ್ತು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಚಿತ್ರತಂಡದ ಮೇಲೆ ಕ್ರಮ ಜರುಗಿಸುವಂತೆ ಸಚಿವರು ಸೂಚನೆ ಕೊಟ್ಟಿದ್ದರು. ಈ ಸ್ಥಳ ಎಚ್‌ಎಂಟಿಗೆ ಸಂಬಂಧಿಸಿದ್ದು ಎನ್ನಲಾಗಿತ್ತಾದರೂ, ಬಳಿಕ ಈ ಜಾಗ ನಮ್ಮದಲ್ಲ ಎಂದು ಎಚ್‌ಎಂಟಿ ಸ್ಪಷ್ಟನೆ ನೀಡಿತ್ತು.ಆದರೆ ಮೈದಾನದಲ್ಲಿದ್ದ ಮರಗಳನ್ನು ಅನುಮತಿ ಇಲ್ಲದೆ ತೆರವು ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಆರೋಪಿಸಿತ್ತು. ವಕೀಲರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಟಾಕ್ಸಿಕ್ ಸಿನಿಮಾ ಸೆಟ್ ಆಗುವ ಮುಂಚಿನ ಸ್ಯಾಟಲೈಟ್ ಚಿತ್ರಗಳು ಮತ್ತು ಸೆಟ್ ಹಾಕಿದ ಬಳಿಕ ಮೈದಾನದ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ಇದರ ಆಧಾರದ ಮೇಲೆ ಮರಕಡಿಯಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಮೈದಾನದಲ್ಲಿ ಯಾವುದೇ ಮರಗಳು ಇರಲಿಲ್ಲ, ಸಣ್ಣ ಪುಟ್ಟ ಗಿಡಗಳು ಮಾತ್ರ ಇದ್ದವು, ಅದನ್ನು ಮಾತ್ರ ತೆಗೆಯಲಾಗಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಸಿನಿಮಾ ನಿರ್ಮಾಪಕರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ನಿರ್ಮಾಪಕರ ಪರವಾಗಿ ವಕೀಲ ಬಿಪಿನ್ ಹೆಗ್ಡೆ ವಾದ ಮಂಡಿಸಿದರು. 400 ಎಕರೆ ಜಮೀನಿನಲ್ಲಿ ಎಚ್‌ಎಂಟಿ ಸಂಸ್ಥೆ 18 ಎಕರೆ ಜಮೀನನ್ನು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿದ್ದು, ಕೆನರಾ ಬ್ಯಾಂಕ್‌ಗೆ ಸೇರಿದ ಜಾಗದಲ್ಲಿ 30 ಕೋಟಿ ರೂಪಾಯಿ ಖರ್ಚು ಮಾಡಿ ಸೆಟ್ ಹಾಕಲಾಗಿದೆ ಎಂದರು. ಸೆಟ್ ನಿರ್ಮಾಣ ಮಾಡಿರುವ ಸ್ಥಳ ಅರಣ್ಯ ಭೂಮಿಯಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ. ಶೂಟಿಂಗ್ ಸೆಟ್ ಹಾಕಲು ಚಿತ್ರ ತಂಡ ಯಾವುದೇ ಮರಗಳನ್ನು ಕೂಡ ಕಡಿದಿಲ್ಲ ಎಂದು ವಾದಿಸಿದರು. ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಎಫ್‌ಐಆರ್ ಗೆ ಮಧ್ಯಂತರ ತಡೆ ಆದೇಶ ನೀಡಿದ್ದಾರೆ.