21ನೇ ಬಾರಿಗೆ ಒಂದಾದ ಹಂಸಲೇಖ - ಎಸ್. ಮಹೇಂದರ್; ಶ್ರೀಗುರುರಾಯರು ಬ್ಯಾನರ್‌ನಲ್ಲಿ ಹೊಸ ಘೋಷಣೆ
Hamsalekha - S Mahendar New Movie: ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲೊಂದಾದ ನಿರ್ದೇಶಕ ಎಸ್. ಮಹೇಂದರ್ ಮತ್ತು ನಾದಬ್ರಹ್ಮ ಹಂಸಲೇಖ 21ನೇ ಬಾರಿಗೆ ಹೊಸ ಸಿನಿಮಾಕ್ಕಾಗಿ ಕೈಜೋಡಿಸಿದ್ದಾರೆ. ಕಳೆದ 33 ವರ್ಷಗಳಿಂದ 20 ಸಿನಿಮಾಗಳಲ್ಲಿ ಸತತ ಗೆಲುವು ಕಂಡಿರುವ ಈ ಜೋಡಿ, ಈಗ 'ಶ್ರೀಗುರುರಾಯರು' ಬ್ಯಾನರ್ ಅಡಿಯಲ್ಲಿ ಹೊಸ ಚಿತ್ರಕ್ಕೆ ಸಜ್ಜಾಗಿದೆ.
-
ಮಣ್ಣಿನ ಸೊಗಡಿನ ಸಿನಿಮಾಗಳನ್ನು ಮಾಡುವುದರಲ್ಲಿ ನಿರ್ದೇಶಕ ಎಸ್ ಮಹೇಂದರ್ (S Mahendar) ಎತ್ತಿದ ಕೈ. ಅದೇ ರೀತಿ ದೇಸಿ ಎಂದು ಫೇಮಸ್ ಆದವರು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ (Hamsalekha) ಅವರು. ಈ ಜೋಡಿ ಕನ್ನಡ ಚಿತ್ರದಲ್ಲಿ ಕಳೆದ 33 ವರ್ಷಗಳಿಂದ ಜೊತೆಯಾಗಿ ಅನೇಕ ಸಿನಿಮಾಗಳಿಗೆ ಕೆಲಸ ಮಾಡಿದೆ. ಅದು ಒಂದೆರಡು ಸಿನಿಮಾಗಳಲ್ಲ, ಬರೋಬ್ಬರಿ 20 ಸಿನಿಮಾಗಳಿಗೆ.
21ನೇ ಸಿನಿಮಾ ಘೋಷಣೆ
ಹೌದು, ನಿರ್ದೇಶಕ ಎಸ್. ಮಹೇಂದರ್ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ಒಟ್ಟು 20 ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿದ್ದು, ಇದೀಗ 21 ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಮಹೇಂದರ್ ಮತ್ತು ಹಂಸಲೇಖ ಕಾಂಬಿನೇಷನ್‌ನಲ್ಲಿ ಬಂದಿರುವ ಬಹುತೇಕ ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆಗಿವೆ. ಸ್ಯಾಂಡಲ್‌ವುಡ್‌ನಲ್ಲಿ ಅಷ್ಟೊಂದು ಫೇಮಸ್ ಈ ಕಾಂಬಿನೇಷನ್.
Hamsalekha: ಓಂ ಪ್ರಕಾಶ್ ರಾವ್ ನಿರ್ದೇಶನದ ʼಫೀನಿಕ್ಸ್ʼ, ʼಗೆರಿಲ್ಲಾ ವಾರ್ʼ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ
ಶ್ರೀಗುರುರಾಯರು ಬ್ಯಾನರ್‌ನ ಸಿನಿಮಾ
ಎಸ್ ಮಹೇಂದರ್ ಅವರ ಮುಂದಿನ ಸಿನಿಮಾವು ಶ್ರೀಗುರುರಾಯರು ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ, ಹೊಸ ತಲೆಮಾರಿನ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಕಂಪನ್ನು ಸೂಸುತ್ತಿವೆ. ಆದರೆ 3 ದಶಕಗಳ ಹಿಂದೆಯೇ ಹಲವು ದಾಖಲೆಗಳನ್ನ ಬರೆದು, ಹೊಸ ಅಲೆಯ ಸಿನಿಮಾಗಳಿಗೆ ಮುನ್ನುಡಿ ಬರೆದ ಹಂಸಲೇಖ ಮತ್ತು ಮಹೇಂದರ್ ಅವರು ಅದೇ ಉತ್ಸಾಹ, ಅದೇ ಹುಮ್ಮಸ್ಸು, ಅದೇ ಸಿನಿಮಾ ಶಿಸ್ತಿನಲ್ಲಿ ಈ ತಲೆಮಾರಿಗೊಂದು ನವ್ಯ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. ಜನವರಿ 16ರಂದು ಈ ಚಿತ್ರದ ಶೀರ್ಷಿಕೆ ಮತ್ತು ಚಿತ್ರತಂಡದ ಅಧಿಕೃತ ಪರಿಚಯ ಮಾಡಲು ಚಿತ್ರತಂಡ ರೆಡಿಯಾಗಿದೆ.
ಸುಮಾರು 20 ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿ, ಸತತ ಗೆಲುವುಗಳನ್ನ ನೀಡಿ ಸಂಭ್ರಮಿಸಿದ್ದ ಈ ಜೋಡಿ ಈಗ ಮತ್ತೊಂದು ಹೊಸ ದೃಶ್ಯಕಾವ್ಯಕ್ಕೆ ಕೈ ಜೋಡಿಸಿದೆ. ಈ ಸಿನಿಮಾಗೆ, ಸುಮಾರು ಮೂರು ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿದ್ದಂತಹ, ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ. ಸಿ. ವಿಜಯ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ನಾಡಗೀತೆಯ ದೃಶ್ಯಕಾವ್ಯಕ್ಕೆ ; ಹಂಸಲೇಖರ ಹಸ್ತ ಬೇಕಿದೆ !
ಅಂದಹಾಗೆ, ಎಸ್ ಮಹೇಂದರ್ ಮತ್ತು ಹಂಸಲೇಖ ಕಾಂಬಿನೇಷನ್‌ನಲ್ಲಿ ʻಶೃಂಗಾರ ಕಾವ್ಯʼ, ‘ಸ್ನೇಹಲೋಕ’, ‘ಗಟ್ಟಿಮೇಳ’, ‘ಗೌಡ್ರು’, ‘ಕರ್ಪೂರದ ಗೊಂಬೆ’, ‘ಕೊಡಗಿನ ಕಾವೇರಿ’, ‘ತಾಯಿ ಇಲ್ಲದ ತವರು’, ʻಕೌರವʼ, ʻಹೆತ್ತವರುʼ, ʻಚಂದ್ರೋದಯʼ ಮುಂತಾದ ಸೂಪರ್ ಹಿಟ್ ಸಿನಿಮಾಗಳು ತೆರೆಕಂಡಿದ್ದು, ಇದೀಗ ಈ ಜೋಡಿಯ ಹೊಸ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.