ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಬೇಡ ಎಂದರೂ ಜ್ಞಾನಪೀಠ ಪ್ರಶಸ್ತಿ ಚರ್ಚೆ": ಪ್ರೇಮ್ ಅಭಿಯಾನಕ್ಕೆ ಫುಲ್‌ ಸ್ಟಾಪ್‌ ಇಟ್ಟ ಹಂಸಲೇಖ, ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಟ್ರೋಲ್‌

Hamsalekha: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಕೆಲ ಅಭಿಮಾನಿಗಳು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಸಾರ್ವಜನಿಕ ಅಭಿಯಾನವನ್ನೇ ಪ್ರಾರಂಭಿಸಿದ್ದರು. ಇದೀಗ ಸ್ವತಃ ಹಂಸಲೇಖ ಅವರೇ ಈ ಅಭಿಯಾನವನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಪ್ರೇಮ್ ಅಭಿಯಾನಕ್ಕೆ ಫುಲ್‌ ಸ್ಟಾಪ್‌ ಇಟ್ಟ ಹಂಸಲೇಖ! ಏನಿದು ಘಟನೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 23, 2026 1:35 PM

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, (Hamsalekha) ನಾದಬ್ರಹ್ಮ ಹಂಸಲೇಖ ಅವರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಕೆಲ ಅಭಿಮಾನಿಗಳು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ (Actor Prem) ಸಾರ್ವಜನಿಕ ಅಭಿಯಾನವನ್ನೇ ಪ್ರಾರಂಭಿಸಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದ ಪ್ರೇಮ್‌, ನಿಮ್ಮ ಸಹಕಾರವಿರಲಿ ಎಂದು ಮನವಿ ಮಾಡಿದ್ದರು.

ನಾದ ಬ್ರಹ್ಮ ಹಂಸಲೇಖಾರವರಿಗೆ ಪದ್ಮ ಪುರಸ್ಕಾರ ಸಲ್ಲಬೇಕು ಎಂಬುದರ ಕುರಿತಾಗಿ ಅಭಿಯಾನ ಶುರು ಮಾಡಲಿದ್ದೇನೆ , ಹಂಸಲೇಖ ಅವರ ಸಾಧನೆ ಕೇವಲ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಬೇಕಾಗಿದೆ ಎಂದು ಪ್ರೇಮ್‌ ಹೇಳಿದ್ದಾರೆ. ಹೀಗಾಗಿ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠದಂತಹ ಅತ್ಯುನ್ನತ ಗೌರವ ಲಭಿಸಬೇಕು ಎಂಬುದು ಕನ್ನಡಿಗರ ಒಗ್ಗಟ್ಟಿನ ಬೇಡಿಕೆಯಾಗಬೇಕು ಎಂದು ಹೇಳಿದ್ದರು. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇ ಬೇಕಾದ ಗೌರವ ಎಂದು ಬರೆದು ಕೊಂಡಿದ್ದರು.

ಪ್ಲೀಸ್‌ ಇದನ್ನು ನಿಲ್ಲಿಸಿ

ಪ್ರೇಮ್‌ ಶುರು ಮಾಡಿದ್ದ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಖುದ್ದು ಹಂಸಲೇಖ ಅವರು ಸಾಕು ಈ ಅಭಿಯಾನ ನಿಲ್ಲಿಸಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿಯೇ ನನಗೆ ಇದೆಲ್ಲ ಇಷ್ಟವಿಲ್ಲ ಎಂದು ಸ್ಪಷ್ಟ ಸಂದೇಶವನ್ನು ನೀಡಿರುವ ಅವರು, 'ಕನ್ನಡದಾಣೆ.. ಈ ಅಭಿಯಾನಕ್ಕೆ ನನ್ನ ಒಪ್ಪಿಗೆಯಿಲ್ಲ. ಇದೊಂದು ಅನಗತ್ಯವಾದ ಅಭಿಮಾನದ ದುಡುಕು ; ಮತ್ತು ಪ್ರೀತಿಯ ತೊಂದರೆ, ಸೀನ್ ಗೂ : ಟ್ಯೂನ್ಯೂ ; ಲಿರಿಕ್ಸ್‌ಗೂ ಹೊಂದಾಣಿಕೆಯೇ ಇಲ್ಲದ ಫ್ಲಾಪ್ ಸಾಂಗಿದು...! ದಯವಿಟ್ಟು ನಿಲ್ಲಿಸಿ. ನೆನಪಿರಲಿ, ಪ್ರೀತಿಯ ಪ್ರೇಮ್' ಎಂದು ಬರೆದುಕೊಂಡಿದ್ದಾರೆ. 'ಕನ್ನಡ ನಮ್ಮ ಹಕ್ಕಿನ ಭಾಷೆ. ಈ ಸತ್ಯವನ್ನು ಪ್ರತಿದಿನವೂ ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ…ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು...' ಎಂದು ಮನವಿ ಮಾಡಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೋಲ್‌!

ಹಂಸಲೇಖ ಅವರಿಗೆ ಜ್ಞಾನಪೀಠ ಅಥವಾ ಪದ್ಮಶ್ರೀ ನೀಡಬೇಕೆಂದು ನಟ ಪ್ರೇಮ್‌ ನಡೆಸಿದ್ದ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದ್ದು, ಹಲವರು ಕಮೆಂಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತ್ರಕ್ಕೆ ಅವರು ಸಂಗೀತ ಪಿತಾಮಹ ಎಂದು ಎನಿಸಿಕೊಳ್ಳುವುದಿಲ್ಲ ಜ್ಞಾನಪೀಠ ಪ್ರಶಸ್ತಿಯ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಹಲವು ವಿವಾದಲ್ಲಿ ಹಂಸಲೇಖ

ಹಂಸಲೇಖ ಅವರು ಈ ಹಿಂದೆ ತಮ್ಮ ಕೆಲ ಹೇಳಿಕೆಗಳಿಂದ ಸಾರ್ವಜನಿಕ ಚರ್ಚೆ ಮತ್ತು ವಿವಾದಗಳಿಗೆ ಗುರಿಯಾಗಿದ್ದರು. 2021 ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದಿವಂಗತ ಪೇಜಾವರ ಶ್ರೀಗಳು ದಲಿತರ ಕೇರಿಗೆ ಭೇಟಿ ನೀಡುತ್ತಿದ್ದ ಕ್ರಮದ ಬಗ್ಗೆ ಹಂಸಲೇಖ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಬಳಿಕ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದರು.

ಅಂದು ಸೀರಿಯಲ್‌ನಲ್ಲಿ ‌ʻಸ್ಟಾರ್‌ʼ ಆಗಿದ್ದ ದಿಲೀಪ್‌ ರಾಜ್‌ಗೆ ʻಬಾಯ್‌ಫ್ರೆಂಡ್‌ʼ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕಿದ್ದೇಗೆ? ದರ್ಶನ್‌‌, ಪ್ರೇಮ್‌ಗೂ ಹೋಗಿತ್ತು ಈ ಚಿತ್ರದ ಆಫರ್!‌

ಇದಾದ ಬಳಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಧರ್ಮ ಮತ್ತು ಆಹಾರ ಪದ್ಧತಿಗಳ ಕುರಿತು ನೀಡಿದ ಹೇಳಿಕೆಯು ಜೈನ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಕುರಿತು ವಿವಾದ ಉಲ್ಬಣಗೊಂಡಾಗ, ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಮನ್ನಿಸುವಂತೆ ಪತ್ರದ ಮೂಲಕ ಕ್ಷಮೆ ಕೋರಿದ್ದರು. ಇತ್ತೀಚೆಗೆ ಟ್ಯೂನ್ ನಕಲು ಮಾಡಿದ ಆರೋಪ ಹಂಸಲೇಖ ಅವರ ಮೇಲೆ ಕೇಳಿ ಬಂದಿತ್ತು. ಹಂಸಲೇಖ ಅವರು ಕೆಲವು ಪಾಶ್ಚಿಮಾತ್ಯ (ಇಂಗ್ಲಿಷ್), ಜಪಾನೀಸ್ ಅಥವಾ ರಷ್ಯನ್ ಭಾಷೆಯ ಜನಪ್ರಿಯ ಟ್ಯೂನ್‌ಗಳನ್ನು ಪ್ರೇರಣೆಯಾಗಿ ಪಡೆದು ಅಥವಾ ಅವುಗಳನ್ನು ನಕಲು ಮಾಡಿ ಕನ್ನಡದ ಸೂಪರ್ ಹಿಟ್ ಹಾಡುಗಳಾಗಿ ಮರುಸೃಷ್ಟಿಸಿದ್ದಾರೆ ಎಂಬ ಆಪಾದನೆಗಳು ಅವರ ಮೇಲಿದೆ.