'ಕಾಂತಾರ' ಬಳಿಕ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ಆರ್ಭಟ; ಮೊದಲ ಹಾಡು ರಿಲೀಸ್
Koragajja Movie Song: 'ಕಾಂತಾರ' ಸಿನಿಮಾದ ನಂತರ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ದೈವದ ಬಗ್ಗೆ ಹೇಳಲಾಗಿದೆ. ಸದ್ಯ ಈ ಪಂಜುರ್ಲಿ ಗುಳಿಗ ದೈವದ ಮೇಲೆ ಬರೆದ ಹಾಡೊಂದನ್ನು ಬಾಲಿವುಡ್ ಹೆಸರಾಂತ ಗಾಯಕ ಜಾವೇದ್ ಆಲಿ ಅವರು ಹಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಈ ಹಾಡು ಈಗ ರಿಲೀಸ್ ಆಗಿದೆ.
-
ʻಕಾಂತಾರʼ ಸರಣಿಯ ಸಿನಿಮಾಗಳಲ್ಲಿ ಗುಳಿಗ ದೈವದ ದೃಶ್ಯಗಳನ್ನು ಕಂಡಿದ್ದೇವೆ. ಇದೀಗ ʻಕೊರಗಜ್ಜʼ ಸಿನಿಮಾದಲ್ಲೂ ಗುಳಿಗ ಬಗ್ಗೆ ಹೇಳಲಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ʻಗುಳಿಗ...ಗುಳಿಗ...ಘೋರ ಗುಳಿಗʼ ಎಂದು ಹಾಡನ್ನೇ ಬರೆಯಲಾಗಿದೆ. ಇದೀಗ ಈ ಹಾಡು ರಿಲೀಸ್ ಆಗಿದ್ದು, ಕೇಳುಗರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ್ದು, ಬಾಲಿವುಡ್‌ನ ಖ್ಯಾತ ಗಾಯಕ ಜಾವೆದ್ ಆಲಿ ಜೊತೆ ನಿರ್ದೇಶಕ ಸುಧೀರ್ ಅತ್ತಾವರ್ ಕೂಡ ಈ ಹಾಡಿಗೆ ಧ್ವನಿಯಾಗಿದ್ದಾರೆ. ಕೆಲವು ಭಾಗಗಳಲ್ಲಿ ಗೋಪಿ ಸುಂದರ್ ಕೂಡ ಹಾಡಿಗೆ ಧ್ವನಿ ನೀಡಿದ್ದಾರೆ.
Koragajja Movie: 'ಕಾಂತಾರ ಚಾಪ್ಟರ್ 1' ಚಿತ್ರದ ಬಳಿಕ 'ಕೊರಗಜ್ಜ' ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆ!
"ನೆಲವುಲ್ಲ ಸಂಕೆಯ 24 ನೆಯ ಮಗನಾಗಿ ಹುಟ್ಟಿದ "ಗುಳಿಗ" ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣ ದೇವರ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ ಎನ್ನುವ ಜನಪದ ಕಥೆ ಗುಳಿಗನ ಹುಟ್ಟಿನ ಕುರಿತಾಗಿ ಇದೆ. ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂತ ಆಚರಿಸಲ್ಪಡುತ್ತಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
"ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದೆಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದ್ರಶ್ಯವಂತೂ ಮೈ ಝುಂ ಎನಿಸುತ್ತದೆ. ರುದ್ರ ಭಯಂಕರ ಗುಳಿಗ ದೈವ ಪಂಜುರ್ಲಿ ಜೊತೆ ಸೇರಿ "ಕೊರಗಜ್ಜ" ನನ್ನು ಭೇಟಿಯಾಗುವ ಸನ್ನಿವೇಶವು ಚಿತ್ರದಲ್ಲಿ ಮೂಡಿಬರಲಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
ಗುಳಿಗ ಕುರಿತ ಈ ಹಾಡಿಗೆ ಹಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನೃತ್ಯ ನಿರ್ದೇಶನ ಮಾಡಿದ್ದು, ಪಂಜುರ್ಲಿಯ ರೂಪದಲ್ಲಿ ನಟ ಸರ್ದಾರ್ ಸತ್ಯ ಅವರು ಕಾಣಿಸಿಕೊಂಡಿರುವುದು ವಿಶೇಷ. ಈ ಹಾಡಿನ ಸನ್ನಿವೇಶವನ್ನು ಮಂಗಳೂರಿನ ಸೋಮೇಶ್ವರ ಕಡಲ ತೀರದಲ್ಲಿ ಬೃಹತ್ ಕ್ರೇನ್‌ಗಳ ಸಹಾಯದಿಂದ ಐದು ಕ್ಯಾಮರಾಗಳ ಮುಖಾಂತರ ಚಿತ್ರೀಕರಿಸಲಾಗಿತ್ತು. ಆದರೆ ಈ ವೇಳೆ ಅಲ್ಲಿನ ಕೆಲವರು ದಾಳಿ ಮಾಡಿದ್ದರಿಂದ ಚಿತ್ರತಂಡಕ್ಕೆ ಅಪಾರ ನಷ್ಟ ಉಂಟಾಗಿತ್ತಂತೆ!
ಆದರೆ ನಂತರ ಮಾರನೇ ದಿನ ನಿರ್ಮಾಪಕ ತ್ರಿವಿಕ್ರಮ್ ಅವರು ಸುಮಾರು 25 ಜನ ಬೌನ್ಸರ್‌ಗಳನ್ನು ನೇಮಿಸಿದ್ದರಂತೆ. ಆದರೂ ಶೂಟಿಂಗ್ ನಡೆದಿರಲಿಲ್ಲ. ಕೊನೆಗೆ ಪೊಲೀಸರ ಸರ್ಪಗಾವಲಿನಲ್ಲಿ ಸೋಮೇಶ್ವರ ಕಡಲ ತೀರದಲ್ಲಿಯೇ ಗುಳಿಗ ಹಾಡಿನ ಚಿತ್ರೀಕರಣ ಮಾಡಲಾಯಿತು ಎಂದು ಚಿತ್ರತಂಡ ಹೇಳಿಕೊಂಡಿದೆ.
ತುಳುನಾಡಿನ ದೈವದ ಮಹಿಮೆಯನ್ನು ಆಧರಿಸಿದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ "ಕೊರಗಜ್ಜ"ದಲ್ಲಿ ತುಳುನಾಡಿನ ಪ್ರಾಚೀನ ಸಂಸ್ಕೃತಿ ಮತ್ತು ಆಚರಣೆಗಳನ್ನು ತೋರಿಸಲಾಗಿದೆಯಂತೆ. ಶ್ರುತಿ, ಭವ್ಯಾ, ಹಿರಿಯ ನಟ ಕಬೀರ್ ಬೇಡಿ ಮುಂತಾದವರು ನಟಿಸಿದ್ದಾರೆ. ʻಕಾಂತಾರʼ ಸರಣಿಗಳ ಯಶಸ್ಸಿನ ನಂತರ ತುಳುನಾಡಿನ ದೈವ ಸಂಸ್ಕೃತಿಯ ಬಗ್ಗೆ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆಯೂ ಹೆಚ್ಚಿನ ನಿರೀಕ್ಷೆ ಇದೆ.