ಛೇ! ಕಂಗನಾ ರಣಾವತ್ ಚಿತ್ರಕ್ಕೆ ಇಂಥ ಸ್ಥಿತಿಯೇ? ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ 'ಭಾರತ್ ಭಾಗ್ಯ ವಿಧಾತ' ಸಿನಿಮಾ!
26/11 ಮುಂಬೈ ದಾಳಿಯ ನೈಜ ಘಟನೆಗಳ ಆಧಾರಿತ, ನಟಿ, ಸಂಸದೆ ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಚಿತ್ರಕ್ಕೆ ನೀರಸ ಆರಂಭ ಸಿಕ್ಕಿದೆ. ದೇಶಾದ್ಯಂತ 2,181 ಶೋಗಳನ್ನು ಹೊಂದಿದ್ದರೂ ಶೇ.11 ರಷ್ಟು ಮಾತ್ರ ಆಕ್ಯುಪೆನ್ಸಿ ದಾಖಲಾಗಿದೆ. ಕಂಗನಾ ಅವರ ಸೋಲಿನ ಸರಣಿ ಮುಂದುವರಿದಿದೆ.
-
ನಟಿ, ಸಂಸದೆ ಕಂಗನಾ ರಣಾವತ್ ಅವರ ಬಹುನಿರೀಕ್ಷಿತ 'ಭಾರತ್ ಭಾಗ್ಯ ವಿಧಾತ' ಚಿತ್ರಕ್ಕೆ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಕುರಿತು ಸಾರ್ವಜನಿಕ ವಲಯದಲ್ಲಿ ಪಾಸಿಟಿವ್ ವಿಮರ್ಶೆಗಳು ಕೇಳಿಬಂದಿದ್ದರೂ, ಮೊದಲ ದಿನ ಕೇವಲ 1 ಕೋಟಿ ರೂಪಾಯಿ ಗಳಿಸುವಲ್ಲಿ 'ಭಾರತ್ ಭಾಗ್ಯ ವಿಧಾತ' ಸಿನಿಮಾ ಸುಸ್ತು ಹೊಡೆದಿದೆ.
ದೇಶಾದ್ಯಂತ 2,181 ಶೋಗಳು
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಮನೋಜ್ ತಪಾಡಿಯಾ ನಿರ್ದೇಶನದ ಈ ಚಿತ್ರಕ್ಕೆ ದೇಶಾದ್ಯಂತ ಒಟ್ಟು 2,181 ಶೋಗಳನ್ನು ನೀಡಲಾಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ಕೇವಲ 11% ರಷ್ಟು ಮಾತ್ರ ಆಸನಗಳು ಭರ್ತಿಯಾಗಿದ್ದವು. ದೆಹಲಿ-ಎನ್‌ಸಿಆರ್ ವಲಯದಲ್ಲಿ 301 ಶೋಗಳು ಮತ್ತು ಮುಂಬೈನಲ್ಲಿ 171 ಶೋಗಳು ಈ ಚಿತ್ರಕ್ಕೆ ಲಭಿಸಿದ್ದವು.
ಕಂಗನಾ ಜೊತೆಗೆ ಗಿರಿಜಾ ಓಕ್, ಸ್ಮಿತಾ ತಾಂಬೆ ಮತ್ತು ಈಶಾ ಡೇ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, 26/11 ರ ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಕಾಮಾ ಆಸ್ಪತ್ರೆಯಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾಗಿ ಮೂಡಿಬಂದಿದೆ. ಇದನ್ನು ಮಣಿಕರ್ಣಿಕಾ ಫಿಲ್ಮ್ಸ್ ಮತ್ತು ಪೆನ್ ಮೂವೀಸ್ ಜಂಟಿಯಾಗಿ ನಿರ್ಮಿಸಿವೆ.
ನಟಿ ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಬಾಲಿವುಡ್ ನಟ ಜಾನ್ ಅಬ್ರಹಾಂ; ಎಲ್ಲರೆದುರು ಕೊಂಡಾಡಿದ ಸಂಸದೆ
ಮಾರ್ಕೆಟ್‌ನಲ್ಲಿ ಹಿಂದಿ ಸಿನಿಮಾಗಳು ಡಲ್
'ಭಾರತ್ ಭಾಗ್ಯ ವಿಧಾತ' ಚಿತ್ರದೊಂದಿಗೇ ಬಿಡುಗಡೆಯಾದ ಉಳಿದೆರಡು ಸಿನಿಮಾಗಳು ಕೂಡ ಇದೇ ರೀತಿಯ ಗಳಿಕೆಯನ್ನು ಕಂಡಿವೆ. ಇಮ್ತಿಯಾಜ್ ಅಲಿ ನಿರ್ದೇಶನದ, ದಿಲ್ಜಿತ್ ದೋಸಾಂಜ್ ನಟನೆಯ 'ಮೈನ್ ವಾಪಸ್ ಆವುಂಗಾ' ಚಿತ್ರ 2,302 ಶೋಗಳಿಂದ 11% ಪ್ರೇಕ್ಷಕರ ಆಕ್ಯುಪೆನ್ಸಿಯೊಂದಿಗೆ 1.15 ಕೋಟಿ ರೂಪಾಯಿ ಗಳಿಸಿದೆ. ಮತ್ತೊಂದೆಡೆ, ಚಿನ್ಮಯ್ ಡಿ ಮಾಂಡ್ಲೇಕರ್ ನಿರ್ದೇಶನದ, ಮನೋಜ್ ಬಾಜಪೇಯಿ ನಟನೆಯ 'ಗವರ್ನರ್' ಚಿತ್ರ 1,427 ಶೋಗಳಿಂದ 15% ರಷ್ಟು ಪ್ರೇಕ್ಷಕರ ಆಕ್ಯುಪೆನ್ಸಿಯೊಂದಿಗೆ 90 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.
ಕಂಗನಾಗೆ ಬಾಕ್ಸ್ ಆಫೀಸ್‌ನಲ್ಲಿ ಪದೇಪದೇ ಸೋಲು
2015 ರ ಸೂಪರ್ ಹಿಟ್ 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ನಂತರ ಕಂಗನಾ ರಣಾವತ್ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಸಿಕ್ಕಿಲ್ಲ. ಕಳೆದ 11 ವರ್ಷಗಳಲ್ಲಿ ಅವರು ನಟಿಸಿದ 12 ಚಿತ್ರಗಳು ಕಮರ್ಷಿಯಲ್ ಆಗಿ ಹಿನ್ನಡೆ ಅನುಭವಿಸಿವೆ. 'ಸಿಮ್ರಾನ್' ಮತ್ತು 'ರಂಗೂನ್' ನಂತಹ ಚಿತ್ರಗಳು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅವರ ರಾಜಕೀಯ ಡ್ರಾಮಾ 'ಎಮರ್ಜೆನ್ಸಿ' ಮೊದಲ ದಿನ 2.50 ಕೋಟಿ ರೂ. ಗಳಿಸಿತ್ತು. ಆ ಸಿನಿಮಾದ ಅಂತಿಮ ಗಳಿಕೆ 25 ಕೋಟಿ ರೂ. ಕೂಡ ದಾಟಿರಲಿಲ್ಲ. ಸದ್ಯ ತೆರೆಕಂಡಿರುವ 'ಭಾರತ್ ಭಾಗ್ಯ ವಿಧಾತ' ಚಿತ್ರವು ವಾರಾಂತ್ಯದ ದಿನಗಳಲ್ಲಿ ಚೇತರಿಸಿಕೊಂಡು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.