ʻಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದರೆ ದೊಡ್ಡ ಸುದ್ದಿ, ನಾನು ರಾಯರ ಮಠದಲ್ಲಿ ಕಸಗುಡಿಸಿದರೆ ಅಣಕʼ- ನಟ ಜಗ್ಗೇಶ್ ಬೇಸರ!
ನಟ ಜಗ್ಗೇಶ್ ಅವರು ಮಂತ್ರಾಲಯದ ರಾಯರ ಮಠದಲ್ಲಿ ಕಸಗುಡಿಸುವ ಸೇವೆ ಮಾಡುವುದನ್ನು ಅಣಕಿಸುವವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಂತಹ ನಟಿಯರು ದೇವಸ್ಥಾನದಲ್ಲಿ ಸೇವೆ ಮಾಡಿದರೆ ದೊಡ್ಡ ಸುದ್ದಿಯಾಗುತ್ತದೆ, ಆದರೆ ತಾವು ಮಾಡಿದರೆ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
-
ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು ಎಷ್ಟೊಂದು ದೈವಭಕ್ತರು ಎಂಬುದು ನಮಗೆಲ್ಲಾ ತಿಳಿದೇ ಇದೆ. ಅದರಲ್ಲೂ ಮಂತ್ರಾಲಯದ ರಾಯರ ದೊಡ್ಡ ಭಕ್ತರು ಅವರು. ದೇವರ ಸೇವೆಯನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಾರೆ. ಈಚೆಗೆ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದು, ಅದರ ಮೂಲಕ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ತಮ್ಮನ್ನು ಅಣಕ ಮಾಡುವವರಿಗೆ ಮಾತಿನ ಛಡಿಯೇಟು ನೀಡಿದ್ದಾರೆ.
ಸೇವಕನಂತೆ ಬಾಳಿದರೆ ದೇವರಿಗೆ ಪ್ರಿಯ
"ಪ್ರಿಯಾಂಕಾ ಚೋಪ್ರಾ ಶ್ರೀಮಂತೆ ನಟಿ, ಆದರೂ ಆಲಯದಲ್ಲಿ ತಟ್ಟೆ ತೊಳೆದಳು ಎಂದಾಗ ದೊಡ್ಡ ಸುದ್ಧಿ ಆಯಿತು. ಜಗ್ಗೇಶ ರಾಯರ ಮಠದಲ್ಲಿ ಕಸಗುಡಿಸಿದ ಎಂದಾಗ, ಜಾಲತಾಣದಲ್ಲಿ ಅಣಕವಾಯಿತು. ವಿಷಯ ಅದಲ್ಲ, ಯಾರೆ ಮನುಷ್ಯನಾಗಲಿ ಸೇವಕನಂತೆ ಬಾಳಿದರೆ ದೇವರಿಗೆ ಪ್ರಿಯವಾಗಿ ಗ್ರಹ ದೋಷ ನಿವೃತ್ತಿಯಾಗುತ್ತದೆ!! ನಮ್ಮ ಅಮ್ಮ ಕಲಿಸಿದ ಈ ಪಾಠ ನಾನು ಇಂದು ಪಾಲಿಸಿ ದೇವರ ಕೃಪೆಯಿಂದ ನನ್ನ ಬದುಕು ಶ್ರೀರಾಮಪುರ ಫುಟ್‌ಪಾತ್‌ನಿಂದ ಶುರುವಾಗಿ ಇಲ್ಲಿಯವರೆಗೂ ತಂದು ನಿಲ್ಲಿಸಿದೆ.. ಧನ್ಯೋಸ್ಮಿ"
ರಾಯರ ಮಠದ ಕಸಗುಡಿಸುವೆ
"ಉದಾಹರಣೆಗೆ, ನನ್ನ ಗ್ರಹಸ್ಥಿತಿ ಈಗ 5ರಲ್ಲಿ ಶನಿ, 8ರಲ್ಲಿ ಗುರು ಗ್ರಹ ಇದೆ. ಜೋತಿಷ್ಯ ಅರಿತವನಾಗಿ ನನಗೆ ಅರಿವಿತ್ತು. ಕಡ್ಡಾಯ ವಾಹನ ಅಪಘಾತ ಆಗುತ್ತದೆ ಅಥವಾ ಅನಾವಷ್ಯಕ ತೊಂದರೆ ಆಗುತ್ತದೆ. ಅದಕ್ಕಾಗಿ ದೋಷ ನಿವೃತ್ತಿಗೆ ಆಲಯ ಗುಡಿಸುವ ಸೇವೆ ಮಾಡಬೇಕೆಂದು. ಇದೇ ಶ್ರೇಷ್ಠ ಪರಿಹಾರ ಎಂದು ರಾಯರ ಮಠದ ಕಸಗುಡಿಸುವ ಸೇವೆ ಮಾಡುವೆ"
ಎರಡು ಬಾರಿ ಕಾರು ಅಪಘಾತ
"ಆಶ್ಚರ್ಯ ಪಡುವಂತೆ ನನಗೆ ಎರಡು ಅಪಘಾತವಾಯಿತು. ಒಂದು ದೆಹಲಿಯಲ್ಲಿ ನಾನು ಚಲಿಸುತ್ತಿದ್ದ ಕಾರಿಗೆ ಮುಂದಿನ ಕಾರು ಏಕಾಏಕಿ ಬ್ರೇಕ್ ಹಾಕಿ ನಮ್ಮ ಕಾರು ಅದಕ್ಕೆ ಗುದ್ದಿ ಹಿಂದಿನ ಕಾರುಗಳು ನಮಗೆ ಗುದ್ದಿ ಘೋರ ಅಪಘಾತವಾಯಿತು. ಒಳಗಿದ್ದ ನನಗೂ, ನನ್ನ PA ಗೂ ಸಣ್ಣ ಗಾಯವು ಇಲ್ಲ, ಗಾಡಿ ಮಾತ್ರ ಜಖಂ! ಎರಡನೇ ಅಪಘಾತ, ನಿಂತ ನನ್ನ ಗಾಡಿಗೆ ಚಾಲಕ ಅಚಾತುರ್ಯಕ್ಕೆ ಮರಕ್ಕೆ ಅಪ್ಪಳಿಸಿ ಲಕ್ಷ ರೂ ಖರ್ಚಾಯಿತು ರಿಪೇರಿಗೆ! ನನಗೆ ಯಾವ ತೊಂದರೆ ಆಗಲಿಲ್ಲಾ, ಈಗ ಹೇಳಿ ಇದು ಕಾಕತಾಳಿನಾ? ದೇವರ ಸೇವೆಯ ಮಹತ್ವ ಆಪತ್ತಿನ ಸಮಯದಲ್ಲಿ ಅರಿಯಬೇಕು"
Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್! ತಾತನನ್ನು ನೆನದು ಭಾವುಕ
ಅಣಕ ಮಾಡಿದವನಿಗೆ ಯಶಸ್ಸು ಕುಂಟಿತ
"ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಅವರ ಕಾರ್ಯ (ವಿಶೇಷವಾಗಿ ಸೆಲಿಬ್ರಿಟಿಗಳ ವೈಯಕ್ತಿಕ ವಿಷಯ) ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿ ಬರುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು! ಅಣಕ, ಅಪಹಾಸ್ಯ, ದೇವರ ಸೇವೆ ಮಾಡುವ ಮನುಷ್ಯನಿಗೆ ಮಾಡಿದಾಗ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂಟಿತವಾಗುತ್ತದೆ (ಭಾಗವತದಲ್ಲಿ ಇದರ ಉಲ್ಲೇಖವಿದೆ)"
ಜಗ್ಗೇಶ್ ಹಂಚಿಕೊಂಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್
ನಮ್ಮ ಜಗ್ಗೇಶ ಅಂತ ನಕ್ಕು ಸುಮ್ಮನಾಗಿ
"ಜಗತ್ತು ಎಷ್ಟೇ ಆಧುನಿಕತೆ ಆದರು ದೇವರ ಕೃಪೆ ಹಾಗು ಗುರು ಹಿರಿಯರ ಆಶೀರ್ವಾದ ಪ್ರತಿ ಮನುಷ್ಯನಿಗೆ ಇಂದು ಮುಂದು ಎಂದೆಂದೂ ಬೇಕೇ ಬೇಕು ಎಂಬುದು ನನ್ನ ಅನುಭವದ ಅನಿಸಿಕೆ. ಸದಾ ನಿಮ್ಮ ಒಳಿತು ಬಯಸುವ ನಿಮ್ಮವನೆ ನಾನು.. ನನಗೆ ತಿಳಿದದ್ದು ನಿಮಗೆ ತಿಳಿಸುವೆ. ಇಷ್ಟಪಟ್ಟವರು ಕೇಳಿ ಇಷ್ಟವಾಗದವರು ಏನೋ ನಮ್ಮ ಜಗ್ಗೇಶ ಬರೆದವನೇ ಎಂದು ನಕ್ಕು ಸುಮ್ಮನಾಗಿ" ಎಂದು ಸುದೀರ್ಘವಾಗಿ ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.