ಗಣೇಶೋತ್ಸವ ಮತ್ತು ವಿಸರ್ಜನೆಯ ಭವ್ಯ ಬೆಳಕಿನ ಹಿನ್ನೆಲೆಯಲ್ಲಿ, ಕೇವಲ ಒಂದೇ ರಾತ್ರಿಯಲ್ಲಿ ತೆರೆದುಕೊಳ್ಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಜನ್ಮೋತ್ಸವ’ (Janmotsava) ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ನಂಬಿಕೆ, ಭಯ ಮತ್ತು ವಿಧಿ ಮುಖಾಮುಖಿಯಾಗುವ ಸಂಕೀರ್ಣ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರವು ಭಕ್ತಿ, ಭಾವನೆ ಹಾಗೂ ಹೈ-ವೋಲ್ಟೇಜ್ ರೋಮಾಂಚನವನ್ನು ಬೆಳ್ಳಿತೆರೆಯ (theatre) ಮೇಲೆ ಕಟ್ಟಿಕೊಡಲು ಸಜ್ಜಾಗಿದೆ.
ಕಥೆ ಕೇವಲ ಒಂದೇ ರಾತ್ರಿಯಲ್ಲಿ ನಡೆಯುವಂಥದ್ದು
ಚಿತ್ರದ ಕಥಾಹಂದರ ಹಾಗೂ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ನಿರ್ದೇಶಕ ರಾಮಾಚಾರಿ, "ನಮ್ಮ ಸಿನಿಮಾದ ಕಥೆ ಕೇವಲ ಒಂದೇ ರಾತ್ರಿಯಲ್ಲಿ ನಡೆಯುವಂಥದ್ದು. ಸಂಜೆ 6 ಗಂಟೆಗೆ ಶುರುವಾಗುವ ಕಥಾನಕ ಮರುದಿನ ಬೆಳಿಗ್ಗೆ 6 ಗಂಟೆಗೆ ಮುಕ್ತಾಯವಾಗುತ್ತದೆ. ರಾಯಚೂರಿನ ಕಡೆ ಚಿತ್ರೀಕರಣ ನಡೆಸುವಾಗ ಹಲವು ಸವಾಲುಗಳು ಎದುರಾದವು. ಬೆಳಕಿನ ವ್ಯವಸ್ಥೆಯ ನಡುವೆ ಮಳೆಯ ದೃಶ್ಯದ ಅನಿವಾರ್ಯತೆ ಇತ್ತು. ಆದರೆ ಆ ಭಾಗದಲ್ಲಿ ಕೃತಕ ಮಳೆ ತರಿಸುವ ಯಂತ್ರಗಳು (ರೇನ್ ಗನ್) ಸುಲಭವಾಗಿ ಸಿಗುವುದಿಲ್ಲ. ಮೊದಲ ದೃಶ್ಯಕ್ಕಾಗಿ ಹೇಗೋ ಪಂಪ್‌ಸೆಟ್ ತಂದು ಕಷ್ಟಪಟ್ಟು ಶೂಟಿಂಗ್ ಮಾಡಿದೆವು" ಎಂದು ಚಿತ್ರೀಕರಣದ ಕಷ್ಟಗಳನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: Bhagya Lakshmi Serial: ಕುಸುಮಾ ಕಾಲಿಗೆ ಬಿತ್ತು ಬಿಸಿ-ಬಿಸಿ ಕುದಿಯುವ ನೀರು: ಭಾಗ್ಯಾಳ ಹೊಸ ಕೆಲಸಕ್ಕೂ ಸಂಕಷ್ಟ
ಮುಂದುವರಿದು ಮಾತನಾಡಿದ ಅವರು, ಸಿನಿಮಾದಲ್ಲಿ ಹಿಂದಿ ಕಲಾವಿದರನ್ನು ಆಯ್ಕೆ ಮಾಡಿಕೊಂಡ ಕಾರಣವನ್ನು ಸ್ಪಷ್ಟಪಡಿಸಿದರು. "ಕಥೆಯಲ್ಲಿ ಬಿಹಾರದಿಂದ ಬಂದಿರುವ ಪಾತ್ರಗಳಿವೆ ಹಾಗೂ ಉತ್ತರ ಭಾರತದಿಂದ ಬಾಲಕಿಯೊಬ್ಬಳನ್ನು ಅಪಹರಿಸಿಕೊಂಡು ಬರುವ ಸನ್ನಿವೇಶವಿದೆ. ಪಾತ್ರಕ್ಕೆ ನೈಜತೆ ತರಲು ಹಿಂದಿ ಭಾಷಿಕ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಬೇಕಾಯಿತು. ಚಿತ್ರದ ತಾಂತ್ರಿಕ ತಂಡದಲ್ಲೂ ಹಲವರು ಸಾಥ್ ನೀಡಿದ್ದಾರೆ. ಛಾಯಾಗ್ರಾಹಕ ವಿಜಯ್ ಮಿಶ್ರಾ ಅವರು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದವರು" ಎಂದು ನಿರ್ದೇಶಕರು ಹೇಳಿದರು.
'ಮಾರುತಿ ಪಿಕ್ಚರ್ಸ್' ಮತ್ತು 'ಲೈಟ್‌ಬಾಯ್ ಫಿಲ್ಮ್ಸ್' ಬ್ಯಾನರ್‌ನಡಿ ಹರಿವರ್ಧನ್, ಪವನ್ ಆಚಾರ್, ವಿಜಯ್ ಮಿಶ್ರಾ ಹಾಗೂ ತ್ರಿಶೂಲ್ ಕುಮಾರ್ ನಾಯಕ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ರಾಮಾಚಾರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಾರ ವೆಂಕಟೇಶ್, ರಮೇಶ್ ಬಾದರದಿನ್ನಿ ಮತ್ತು ರಾಕೇಶ್ ಮಂದಕಲ್ ಸಹ-ನಿರ್ಮಾಪಕರಾಗಿ ಹಾಗೂ ಪ್ರಸನ್ನ, ಉಪೇಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ವಿಜಯ್ ಮಿಶ್ರಾ ಅವರ ಛಾಯಾಗ್ರಹಣ, ಮಂಜುನಾಥ ನಾಗಬಾ ಅವರ ಸಂಕಲನ ಹಾಗೂ ಪ್ರದ್ಯೋತನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಚಿತ್ರದ ತಾರಾಗಣದಲ್ಲಿ ಐಶ್ವರ್ಯ ಹೆಚ್., ಕೃಷ್ಣ ಸಿಂಗ್ ಬಿಷ್ಟ್, ಅನ್ವಿಶಾ ತ್ಯಾಗಿ, ಖ್ಯಾತ ನಟ ಸುನೀಲ್ ಪುರಾಣಿಕ್, ರಕ್ಷಿತ್ ರಾಮಚಂದ್ರ ಶೆಟ್ಟಿ, ಮಂತು ಮಡ್ಲಿ, ಮಹಾಂತೇಶ್ ಹಿರೇಮಠ, ವಿಕೀಶ ರಾವ್, ಅನ್ಮೋಲ್ ಭಟ್ಕಳ್, ಸಲ್ಮಾನ್ ಅಹಮದ್, ಮಂಜುನಾಥ್ ನಾಗಬ, ಡಿಂಗ್ರಿ ನರೇಶ್, ರಿತಿಕಾ, ಶಶಿ ಪಾಟೀಲ್ ಹಾಗೂ ಕೋಟೆ ರಾಜ ಮುಂತಾದ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.
ಇದನ್ನೂ ಓದಿ: Bigg Boss kannada 13: ತಾಂಡವ್ ಲವ್ ಟ್ರ್ಯಾಕ್; ಎಲ್ಲವೂ 'ಕಾವ್ಯ'ಮಯ!
ಈಗಾಗಲೇ ಟ್ರೇಲರ್ ಮೂಲಕ ಗಮನಸೆಳೆದಿರುವ ಈ ಥ್ರಿಲ್ಲರ್ ಚಿತ್ರವು ಶೀಘ್ರದಲ್ಲೇ ರಾಜ್ಯಾದ್ಯಂತ ತೆರೆಕಾಣಲಿದೆ.