Actor Yash: ʼಟಾಕ್ಸಿಕ್ʼ, ʼರಾಮಾಯಣʼದ ಬಳಿಕ ತಮಿಳು ನಿರ್ದೇಶಕನ ಚಿತ್ರದಲ್ಲಿ ಯಶ್? ಯಾರು ಆ ಡೈರಕ್ಟರ್?
ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ದೇಶಾದ್ಯಂತ ಸಂಚಲನ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಸದ್ಯ ʼಟಾಕ್ಸಿಕ್ʼ ಮತ್ತು ʼರಾಮಾಯಣʼ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ʼಕೆಜಿಎಫ್ 3ʼ ಸಿನಿಮಾ ಆರಂಭವಾಗಲಿದೆ ಎನ್ನಲಾಗುತ್ತದೆ. ಮಾತ್ರವಲ್ಲ ಅವರು ಕಾಲಿವುಡ್ ನಿರ್ದೇಶಕರ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಶ್.

ಚೆನ್ನೈ: ರಾಕಿಂಗ್ ಸ್ಟಾರ್ ಯಶ್ (Actor Yash) ಹವಾ ಸದ್ಯ ದೇಶಾದ್ಯಂತ ಹಬ್ಬಿದೆ. ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನೂ ಮೀರಿದ ಜನಪ್ರಿಯತೆ ಈ ಸ್ಯಾಂಡಲ್‌ವುಡ್ ನಟನಿಗೆ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ, ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿದ ಕೆಜಿಎಫ್ (KFG) ಸರಣಿ ಚಿತ್ರಗಳ ಮೂಲಕ ದೇಶ, ಭಾಷೆಯ ಗಡಿ ಮೀರಿ ಬೆಳೆದ ಯಶ್ ಕಾಲ್‌ಶೀಟ್‌ಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಇಡೀ ವಿಶ್ವವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಅವರ ಮುಂದಿನ ಚಿತ್ರಕ್ಕಾಗಿ ಫ್ಯಾನ್ಸ್ ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಸದ್ಯ ʼಟಾಕ್ಸಿಕ್ʼ (Toxic) ಮತ್ತು 'ರಾಮಾಯಣ' (Ramayana) ಚಿತ್ರಗಳನ್ನು ಒಪ್ಪಿಕೊಂಡಿರುವ ಅವರು ಇದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮತ್ತೊಂದು ಚಿತ್ರದಲ್ಲಿ ಅವರ ಹೆಸರು ಕೇಳಿ ಬರುತ್ತಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹಾಗಾದರೆ ಯಾವ ಸಿನಿಮಾ? ನಿರ್ದೇಶಕ ಯಾರು? ಇಲ್ಲಿದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಹೇಳುತ್ತಿರುವ ʼಟಾಕ್ಸಿಕ್ʼ ಚಿತ್ರದ ಕಥೆ ಡ್ರಗ್ಸ್ ಮಾಫಿಯಾದ ಸುತ್ತ ಸುತ್ತುತ್ತದೆ. ಇತ್ತ ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ʼರಾಮಾಯಣʼ ಪುರಾಣದ ಕಥೆ ಹೇಳುತ್ತದೆ. ಹೀಗೆ ಏಕಕಾಲಕ್ಕೆ ಯಶ್ 2 ವಿಭಿನ್ನ ಕಥಾಹಂದರದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ʼರಾಮಾಯಣʼದ ಮೂಕ ಬಾಲಿವುಡ್‌ಗೆ ಕಾಲಿಡುತ್ತಿರುವ ಯಶ್ ಮೊದಲ ಚಿತ್ರದಲ್ಲೇ ಪವರ್‌ಫುಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ರಾವಣನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಚಿತ್ರಗಳಾದ ಬಳಿಕ ಅವರು ತಮಿಳು ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
UNLEASHED !! https://t.co/j5f54y4TNa pic.twitter.com/ohE4K8fVa7
— Yash (@TheNameIsYash) January 8, 2025
ಯಾರು ಆ ನಿರ್ದೇಶಕ?
ತಮಿಳಿನ ಖ್ಯಾತ ನಿರ್ದೇಶಕ ಪಿ.ಎಸ್.ಮಿತ್ರನ್ (P.S.Mithran) ಅವರ ಮುಂಬರುವ ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2018ರಲ್ಲಿ ತೆರೆಕಂಡ ʼಇರುಂಬು ಥಿರೈʼ ಕಾಲಿವುಡ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಿತ್ರನ್ ಅದಾದ ಬಳಿಕ ʼಹೀರೋʼ, ʼಸರ್ದಾರ್ʼ ಮುಂತಾದ ತಮಿಳು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಅವರು ಕಾರ್ತಿ, ಎಸ್.ಜೆ.ಸೂರ್ಯ ಮತ್ತು ಆಶಿಕಾ ರಂಗನಾಥ್ ನಟನೆಯ ʼಸರ್ದಾರ್ 2ʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಮಿತ್ರನ್ ಅವರ ಕಥೆ ಕೇಳಿ ಇಂಪ್ರೆಸ್ ಆಗಿರುವ ಯಶ್ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಬಹು ಕೋಟಿ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆಯಂತೆ. ಅದಾಗ್ಯೂ ಈ ಸುದ್ದಿ ಇನ್ನೂ ಖಚಿತವಾಗಿಲ್ಲ. ಒಂದುವೇಳೆ ಈ ಸುದ್ದಿ ನಿಜವಾಗಿದ್ದರೂ ಸದ್ಯಕ್ಕಂತೂ ಆರಂಭವಾಗುವ ಲಕ್ಷಣಗಳಿಲ್ಲ. ಈ ಹಿಂದೆಯೂ ಮಿತ್ರನ್ ಅವರ ಚಿತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಮತ್ತೆ ಈ ಸುದ್ದಿಗೆ ಜೀವ ಬಂದಿದೆ.
ಈ ಸುದ್ದಿಯನ್ನೂ ಓದಿ: Actor Yash: ʼರಾಮಾಯಣʼ ಅಖಾಡಕ್ಕೆ ರಾಕಿ ಭಾಯ್ ಎಂಟ್ರಿ; ಮುಂಬೈಯಲ್ಲಿ ಶೂಟಿಂಗ್ ಆರಂಭಿಸಿದ ಯಶ್
ಯಶ್ ʼಟಾಕ್ಸಿಕ್ʼ ಮತ್ತು ʼರಾಮಾಯಣʼ ಚಿತ್ರಗಳನ್ನು ಮುಗಿಸಿದ ಬಳಿಕವಷ್ಟೇ ಮುಂದಿನ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದರ ಜತೆಗೆ ʼಕೆಜಿಎಫ್ 3ʼ ಕೂಡ ಆರಂಭವಾಗಲಿದೆ ಎನ್ನಲಾಗಿದೆ. ʼಟಾಕ್ಸಿಕ್ʼ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಬಳಿಕ ವಿವಿಧ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಈ ವರ್ಷಾಂತ್ಯದ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು ʼರಾಮಾಯಣʼ 2 ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು 2ನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.