ಬೆಂಗಳೂರು, ಅ. 21: ವಿಜಯ್ ಕಿರಗಂದೂರು (Vijay Kiragandur) ನೇತೃತ್ವದ ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ. ಜತೆಗೆ ಮತ್ತೊಂದು ಅಪರೂಪದ ದಾಖಲೆಯ ಹೊಸ್ತಿಲಿನಲ್ಲಿದೆ. ಅಕ್ಟೋಬರ್ 2ರಂದು ಅದ್ಧೂರಿಯಾಗಿ ತೆರೆಗೆ ಬಂದ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ʼಕಾಂತಾರ ಚಾಪ್ಟರ್ 1' (Kantara Chapter 1) 20 ದಿನಗಳ ಓಟ ಮುಗಿಸಿದ್ದು, ನಿರೀಕ್ಷೆಯಂತೆಯೇ ದಾಖಲೆಯ ಕಲೆಕ್ಷನ್ ಮಾಡಿದೆ. ವೀಕ್‌ಡೇಸ್‌ಗಳಲ್ಲಿ ಕಡಿಮೆಯಾಗಿದ್ದ ಗಳಿಕೆ ದೀಪಾವಳಿ ಬರುತ್ತಿದ್ದಂತೆ ಮತ್ತೆ ಜಿಗಿತುಕೊಂಡಿದ್ದು, 1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಧಾವಂತದಲ್ಲಿದೆ.
ಅಕ್ಟೋಬರ್ 20ರಂದು ಚಿತ್ರ ತೆರೆಕಂಡ 19 ದಿನ ಆಗಿದ್ದು, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ 750 ಕೋಟಿ ರೂ. ದಾಟಿದೆ. ಇನ್ನು ಭಾರತವೊಂದರಲ್ಲೇ 535 ಕೋಟಿ ರೂ. ಗಳಿಸಿದ್ದು, ಕರ್ನಾಟಕದಲ್ಲಿ 200 ಕೋಟಿ ರೂ. ಕ್ಲಬ್ ಸೇರಿದೆ.
ಹೊಂಬಾಳೆ ಫಿಲ್ಮ್ಸ್ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Kantara: Chapter -1: ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ ಕಾಂತಾರ ಚಾಪ್ಟರ್ -1 ಸಿನಿಮಾ- ಈವರೆಗಿನ ಕಲೆಕ್ಷನ್ ಎಷ್ಟು?
ಈಗಾಗಲೇ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಮತ್ತು ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ʼಕಾಂತಾರ ಚಾಪ್ಟರ್ 1' ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸದ್ಯ ಇದರ ಮುಂದಿರುವುದು ಹಿಂದಿಯ ʼಛಾವಾʼವೊಂದೆ. ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೋಡಿಯ ʼಛಾವಾʼ 807 ಕೋಟಿ ರೂ. ಬಾಚಿಕೊಂಡಿದೆ. ದೀಪಾವಳಿ ಮುಗಿಯುವ ವೇಳೆ ರಿಷಬ್ ಶೆಟ್ಟಿ ಚಿತ್ರ ಈ ಗಳಿಕೆಯನ್ನು ಹಿಂದಿಕ್ಕಲಿದೆ ಎನ್ನುವ ಲೆಕ್ಕಾಚಾರವಿದೆ.
1 ಸಾವಿರ ಕೋಟಿ ರೂ. ಕ್ಲಬ್ ಸೇರುತ್ತಾ?
ಸದ್ಯ ದೇಶಾದ್ಯಂತ ಹೀಗೊಂದು ಚರ್ಚೆ ಆರಂಭವಾಗಿದೆ. ಇದುವರೆಗೆ ಈ ಮೈಲಿಗಲ್ಲನ್ನು ಕೆಲವೇ ಕೆಲವು ಭಾರತೀಯ ಚಿತ್ರಗಳು, 1 ಕನ್ನಡ ಸಿನಿಮಾ ದಾಟಿವೆ. 2022ರಲ್ಲಿ ರಿಲೀಸ್ ಆದ ಹೊಂಬಾಳೆ ಫಿಲ್ಮ್ಸ್-ಯಶ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ʼಕೆಜಿಎಫ್ 2' ಸಿನಿಮಾ 1,200 ಕೋಟಿ ರೂ.ಗಿಂತ ಅಧಿಕ ಗಳಿಸಿ ಸ್ಯಾಂಡಲ್‌ವುಡ್‌ನ ಛಾಪನ್ನು ಈಗಾಗಲೇ ಮೂಡಿಸಿದೆ. ಸದ್ಯ ಅಂತಹದ್ದೊಂದು ಅವಕಾಶ ʼಕಾಂತಾರ ಚಾಪ್ಟರ್ 1' ಪಾಲಿಗಿದೆ. ಈ ಅಪರೂಪದ ಸಾಧನೆಯನ್ನು ಮಾಡುತ್ತ ಎನ್ನುವ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ಕೇರಳದಲ್ಲೂ ಮಿಂಚಿದ ʼಕಾಂತಾರʼ
ಸದ್ಯ ಕರ್ನಾಟಕದಲ್ಲಿ 200 ಕೋಟಿ ರೂ. ಗಳಿಸಿದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ʼಕಾಂತಾರ ಚಾಪ್ಟರ್ 1' ಪಾತ್ರವಾಗಿದ್ದು, ಹಿಂದಿ ಆವೃತ್ತಿಯ ಕಲೆಕ್ಷನ್ 175 ಕೋಟಿ ರೂ. ದಾಟಿದೆ. ಇನ್ನು ತೆಲುಗು ರಾಜ್ಯಗಳಲ್ಲೂ 100 ಕೋಟಿ ರೂ. ಗಳಿಸಿದೆ. ವಿಶೇಷ ಎಂದರೆ ಕೇರಳದಲ್ಲಿ 50 ಕೋಟಿ ರೂ.ಗಿಂತ ಹೆಚ್ಚು ಬಾಚಿಕೊಂಡಿದೆ. ಮಲಯಾಳಂ ಆವೃತ್ತಿಯಿಂದ 55 ಕೋಟಿ ರೂ. ಹರಿದುಬಂದಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ತಮಿಳಿನಲ್ಲಿ 62 ಕೋಟಿ ರೂ. ಕಲೆಕ್ಷನ್ ಆಗಿದೆ.