ʼಕಾಂತಾರʼ ಕಥೆ ಮುಂದುವರಿಯಲಿದೆ; ಪ್ರೀಕ್ವೆಲ್ ಬಳಿಕ ಸೀಕ್ವೆಲ್ ಕೂಡ ಬರಲಿದೆ: ರಿಷಬ್ ಶೆಟ್ಟಿ ಫ್ಯಾನ್ಸ್‌ಗೆ ಸಿಕ್ತು ಗುಡ್‌ನ್ಯೂಸ್
Kantara Sequel: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್ 1' ಚಿತ್ರ ತೆರೆಗೆ ಬಂದಿದೆ. ಭಾರಿ ಕುತೂಹಲ ಮೂಡಿಸಿದ್ದ ಈ ಚಿತ್ರ ನಿರೀಕ್ಷೆಗೆ ತಕ್ಕ ಮೂಡಿ ಬಂದಿದ್ದು, ಭರಪೂರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 4-5 ಶತಮಾನದ ಕರಾವಳಿಯ ಜನ ಜೀವನವನ್ನು ರಿಷಬ್ ಶೆಟ್ಟಿ ತೆರೆಮೇಲೆ ತಂದಿದ್ದು, ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆದಿದೆ.

-

ಬೆಂಗಳೂರು: ಬಹುದಿನಗಳ, ಬರೋಬ್ಬರಿ 3 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯವಾಗಿದ್ದು, ʼಕಾಂತಾರ: ಚಾಪ್ಟರ್ 1' (Kantara Chapter 1) ರಿಲೀಸ್ ಆಗಿದೆ. 2022ರಲ್ಲಿ ತೆರೆಕಂಡ ʼಕಾಂತಾರʼದ (Kantara) ಪ್ರೀಕ್ವೆಲ್ ಇದಾಗಿದ್ದು, ರಿಷಬ್ ಶೆಟ್ಟಿ (Rishab Shetty) ಮತ್ತೊಮ್ಮೆ ತೆರೆಮೇಲೆ ದೈವ ದರ್ಶನ ಮಾಡಿಸಿದ್ದಾರೆ. ಕದಂಬ ರಾಜಾಡಳಿತ ಕಾಲದ ಕರಾವಳಿಯ ಜನ ಜೀವನವನ್ನು ರಿಷಬ್ ಶೆಟ್ಟಿ ತೆರೆಮೇಲೆ ತಂದಿದ್ದು, ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆದಿದೆ. ಕನ್ನಡ ಜತೆಗೆ 7 ಭಾಷೆಗಳಲ್ಲಿ, 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಚಿತ್ರದ ಕೊನೆಯಲ್ಲಿ ಮತ್ತೊಂದು ಸರ್‌ಪ್ರೈಸ್ ಸಿಕ್ಕಿದೆ. ಹೌದು, ʼಕಾಂತಾರʼದ ಮತ್ತೊಂದು ಭಾಗ ಬರಲಿದೆ (Kantara Sequel). ಅಲ್ಲಿಗೆ ಕಾಂತಾರದ ಕಥೆ ಮುಂದುವರಿಯುವುದು ಪಕ್ಕಾ ಆದರಂತಾಗಿದೆ.
ಮತ್ತೊಂದು ದಂತಕಥೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದ್ದು, ಆ ಮೂಲಕ ರಿಷಬ್ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಾಂತಾರ ಎಂದರೆ ನಿಗೂಢತೆ ತುಂಬಿರುವ ಕಾಡು. ಈ ಕಾಡಿನ ಮೂಲ ನಿವಾಸಿಗಳು, ಬುಡಕಟ್ಟು ಬದುಕಿನ ಕಥೆಯನ್ನು 2 ಭಾಗಗಳಲ್ಲಿ ಹೇಳಲಾಗಿದ್ದು, ಮುಂದಿನ ಕಥೆ ಏನಿರಲಿದೆ ಎನ್ನುವ ರ್ಚೆ ಈಗಾಗಲೇ ಆರಂಭವಾಗಿದೆ. 2022ರಲ್ಲಿ ತೆರೆಕಂಡ ʼಕಾಂತಾರʼದಲ್ಲಿ ಹೇಳಲಾದ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ಇದೀಗ ರಿಲೀಸ್ ಆಗಿರುವ ʼಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ತಿಳಿಸಲಾಗಿದೆ. ʼಕಾಂತಾರ ಚಾಪ್ಟರ್ 2ʼ ಸೀಕ್ವೆಲ್ ಆಗಿರಲಿದ್ದು, ಕಾಂತಾರದ ಬಳಿಕದ ಕಥೆ ಮುಂದುವರಿಯುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Kantara Chapter 1: ತೆರೆಮೇಲೆ ಮತ್ತೊಮ್ಮೆ ದೈವ ದರ್ಶನ ಮಾಡಿಸಿದ ರಿಷಬ್ ಶೆಟ್ಟಿ; ʼಕಾಂತಾರ: ಚಾಪ್ಟರ್ 1' ನೋಡಿದವರು ಏನಂದ್ರು?
ʼಕಾಂತಾರʼದಲ್ಲಿ ರಿಷಬ್ ಶೆಟ್ಟಿ ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ತೆರೆಮೇಲೆ ತಂದಿದ್ದರು. ಜತೆಗೆ ಕರಾವಳಿಯ ವಿಶಿಷ್ಟ ಭೂತಾರಾಧನೆ ಹೇಗೆ ಜನ ಜೀವನದೊಂದಿಗೆ ಬೆರೆತುಕೊಂಡಿದೆ ಎನ್ನುವುದನ್ನು ಮನೋಜ್ಞವಾಗಿ ತಿಳಿಸಿದ್ದರು. ಯಾವುದೇ ನಿರೀಕ್ಷೆ ಇಲ್ಲದೆ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇದು ಯಶಸ್ಸಾದ ಬೆನ್ನಲ್ಲೇ ಅವರು ಪ್ರೀಕ್ವೆಲ್ ಘೋಷಿಸಿದ್ದರು.
ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಸುಮಾರು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ʼಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿ ಮತ್ತೊಮ್ಮೆ ರಿಷಬ್ ಶೆಟ್ಟಿ ಮಿಂಚಿದ್ದಾರೆ. ನಟನೆ, ನಿರ್ದೇಶನ ಎರಡರಲ್ಲೂ ಪೂರ್ಣಾಂಕ ಗಿಟ್ಟಿಸಿಕೊಂಡಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಸಹಜ ಅಭಿನಯದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ರಾಜಕುಮಾರಿ ಕನಕವತಿ ಪಾತ್ರದ ಮೂಲಕ ಅವರು ಚಿತ್ರಕ್ಕೆ ಮತ್ತಷ್ಟು ಕಳೆ ತುಂಬಿದ್ದು, ವೃತ್ತಿ ಜೀವನದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಬಾರಿಗೆ ರಿಷಬ್ ಶೆಟ್ಟಿಗೆ ಅವರು ತೆರೆಮೇಲೆ ಜೋಡಿಯಾಗಿದ್ದು, ಪೈಪೋಟಿಯ ಅಭಿನಯ ನೀಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿಗೆ ಈ ಚಿತ್ರದ ಮೂಲಕ ಮತ್ತೊಂದು ರಾಷ್ಟ್ರ ಪ್ರಶಸ್ತಿ ದೊರೆಯುವ ಸಾಧ್ಯತೆ ಇದೆ ಎಂದು ಪ್ರೇಕ್ಷಕರು ಭವಿಷ್ಯ ನುಡಿದಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರವಾಗಬೇಕಾದರೆ ಮಸಾಲೆ, ಗ್ಲಾಮರ್ ಅಂಶ ಇರಬೇಕು, ಸ್ಟಾರ್ ಕಲಾವಿದರು ಅಭಿನಯಿಸಬೇಕು, ಭರಪೂರ್ ಆ್ಯಕ್ಷನ್ ದೃಶ್ಯಗಳಿರಬೇಕು ಎನ್ನುವ ಅಲಿಖಿತ ನಿಯಮವನ್ನು ಬದಲಾಯಿಸಿದ್ದು ʼಕಾಂತಾರʼ. ಗಟ್ಟಿಕಥೆ, ಮೈನವಿರೇಳಿಸುವ ಚಿತ್ರಕಥೆಯ ಕಾರಣದಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ ಈ ಚಿತ್ರದ ಪ್ರೀಕ್ವೆಲ್ ಕೂಡ ಇದೀಗ ಮತ್ತೊಮ್ಮೆ ಮ್ಯಾಜಿಕ್ ಮಾಡುತ್ತಿದೆ. ಇದು ಎಷ್ಟು ಕಲೆಕ್ಷನ್ ಮಾಡಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ.