ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shiva Rajkumar: ಮತ್ತೆ ಅಖಾಡಕ್ಕೆ ಇಳಿದ ಶಿವಣ್ಣ; ರಾಮ್‌ ಚರಣ್‌ ಜತೆಗಿನ ತೆಲುಗು ಚಿತ್ರದ ಲುಕ್‌ ಟೆಸ್ಟ್‌ ಪೂರ್ಣ

ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಸರ್ಜರಿ ಮಾಡಿಸಿಕೊಂಡು ಗುಣಮುಖರಾಗಿ ಬೆಂಗಳೂರಿಗೆ ಮರಳಿರುವ ಡಾ.ಶಿವ ರಾಜ್‌ಕುಮಾರ್‌ ಇದೀಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಅವರು ರಾಮ್‌ ಚರಣ್‌ ಜತೆ ನಟಿಸುತ್ತಿರುವ ತೆಲುಗು ಚಿತ್ರದ ಲುಕ್‌ ಟೆಸ್ಟ್‌ ಪೂರ್ಣಗೊಳಿಸಿದ್ದಾರೆ.

ರಾಮ್‌ ಚರಣ್‌ ಜತೆಗಿನ ತೆಲುಗು ಚಿತ್ರದ ಶಿವಣ್ಣ ಲುಕ್‌ ಟೆಸ್ಟ್‌ ಪೂರ್ಣ

Profile Ramesh B Mar 5, 2025 5:20 PM

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವ ರಾಜ್​ಕುಮಾರ್ (Shiva Rajkumar) ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಸರ್ಜರಿ ಮಾಡಿಸಿಕೊಂಡು ಗುಣಮುಖರಾಗಿ ಬೆಂಗಳೂರಿಗೆ ಮರಳಿದ್ದು, ಕೆಲವು ದಿನಗಳ ವಿಶ್ರಾಂತಿ ಬಳಿಕ ಇದೀಗ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಶಿವಣ್ಣ ನಟಿಸುತ್ತಿರುವ ʼ131ʼ ಹೆಸರಿನ ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದೆ. ಅದರೊಂದಿಗೆ ಟಾಲಿವುಡ್‌ ಸೂಪರ್‌ ಸ್ಟಾರ್‌ ರಾಮ್‌ ಚರಣ್‌ (Ram Charan) ಅವರ ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಶಿವ ರಾಜ್‌ಕುಮಾರ್‌ ಲುಕ್‌ ಟೆಸ್ಟ್‌ ಪೂರ್ಣಗೊಳಿಸಿದ್ದಾರೆ. 2021ರಲ್ಲಿ ತೆರೆಕಂಡ ತೆಲುಗಿನ ʼಉಪ್ಪೇನಾʼ ಚಿತ್ರದ ಮೂಲಕ ಟಾಲಿವುಡ್‌ನ ಗಮನ ಸೆಳೆದ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ ʼಆರ್‌ಸಿʼ 16 (RC 16) ಎನ್ನುವ ಟೈಟಲ್‌ ಇಡಲಾಗಿದೆ.

ಇತ್ತೀಚೆಗೆ ʼಆರ್‌ಸಿ 16ʼ ಚಿತ್ರತಂಡ ಶಿವಣ್ಣ ಅವರ ಲುಕ್‌ ಟೆಸ್ಟ್‌ ಅನ್ನು ಮುಗಿಸಿದ್ದು, ಅವರು ಶೀಘ್ರದಲ್ಲಿಯೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಬಾರಿಗೆ ರಾಮ್‌ ಚರಣ್‌ ಮತ್ತು ಶಿವಣ್ಣ ತೆರೆ ಹಂಚಿಕೊಳ್ಳುತ್ತಿರುವ ಕಾರಣದಿಂದಲೇ ಈಗಾಗಲೇ ಸಿನಿಮಾ ಕುತೂಹಲ ಕೆರಳಿಸಿದೆ. ಕಥೆಗೆ ತಿರುವು ನೀಡುವ ಬಹುಮುಖ್ಯ ಪಾತ್ರದಲ್ಲಿ ಶಿವ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ಕೇಳಿ ಇಂಪ್ರೆಸ್‌ ಆದ ಅವರು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.



ವಿಭಿನ್ನ ಪಾತ್ರದಲ್ಲಿ ಶಿವಣ್ಣ- ರಾಮ್‌ ಚರಣ್‌

ಇದುವರೆಗೆ ಮಾಡಿರದಂತಹ ಪಾತ್ರದಲ್ಲಿ ಶಿವಣ್ಣ ಮತ್ತು ರಾಮ್‌ ಚರಣ್‌ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರ 2024ರಲ್ಲಿಯೇ ಸೆಟ್ಟೇರಿತ್ತು. ಈ ಪಾತ್ರಕ್ಕಾಗಿ ರಾಮ್‌ ಚರಣ್‌ ಸುಮಾರು 2 ತಿಂಗಳು ಸಿದ್ಧತೆ ನಡೆಸಿದ್ದರು. ಜನಪ್ರಿಯ ಜಿಮ್‌ ಟ್ರೈನರ್‌ ಶಿವೋಮ್‌ ಅವರ ಮಾರ್ಗದರ್ಶನದಲ್ಲಿ ಅವರು ವರ್ಕೌಟ್‌ ನಡೆಸಿದ್ದರು. ಈ ಸಿನಿಮಾದ ಕಥೆ ಉತ್ತರಾಂಧ್ರದ ಹಿನ್ನೆಲೆಯನ್ನು ಹೊಂದಿದೆ. ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ಅನೇಕ ಭಾವನಾತ್ಮಕ ದೃಶ್ಯಗಳಿವೆ. ಮೊದಲ ಹಂತದ ಚಿತ್ರೀಕರಣ 2024ರ ನವೆಂಬರ್‌ನಲ್ಲಿ ಮೈಸೂರಿನಲ್ಲಿ ಆರಂಭವಾಗಿದ್ದು, ಇತ್ತೀಚೆಗೆ ಹೈದರಬಾದ್‌ನ ಶೆಡ್ಯೂಲ್‌ ಕೂಡ ಮುಕ್ತಾಯಗೊಂಡಿದೆ.

ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್‌ನ ಜಾಹ್ನವಿ ಕಪೂರ್‌ ನಟಿಸುತ್ತಿದ್ದಾರೆ. ಇದು ಇವರ 2ನೇ ತೆಲುಗು ಚಿತ್ರ. ಇವರೊಂದಿಗೆ ಜಗಪತಿ ಬಾಬು, ದಿವ್ಯೇಂದು ಮತ್ತಿರರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ ಮ್ಯೂಸಿಕ್‌ ನೀಡುತ್ತಿದ್ದಾರೆ.

ಶಿವಣ್ಣ ಈ ಹಿಂದೆ 2017ರಲ್ಲಿ ತೆರೆಕಂಡ ತೆಲುಗಿನ ʼಗೌತಮಿಪುತ್ರ ಶಾತಕರ್ಣಿʼ ಸಿನಿಮಾದಲ್ಲಿ ನಟಿಸಿದ್ದರು. ನಂದಮೂರಿ ಬಾಲಕೃಷ್ಣ, ಹೇಮಾ ಮಾಲಿನಿ, ಶ್ರೀಯಾ ಶರಣ್‌ ಅಭಿನಯದ ಈ ಚಿತ್ರದಲ್ಲಿ ಶಿವಣ್ಣ ಕಾಲಹಸ್ತೀಶ್ವರನಾಗಿ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದರು. ಇದೀಗ ಮುಖ್ಯ ಪಾತ್ರದ ಮೂಲಕ ಮತ್ತೆ ತೆಲುಗು ಸಿನಿಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ. ಇದರೊಂದಿಗೆ ಶಿವಣ್ಣ ಕನ್ನಡದ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ರಜನಿಕಾಂತ್‌ ಜತೆಗೆ ʼಜೈಲರ್‌ 2ʼ ಚಿತ್ರವನ್ನೂ ಮಾಡಲಿದ್ದಾರೆ ಎನ್ನಲಾಗಿದೆ.