ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸನ್ ಟಿವಿ ಉದ್ಯೋಗಿಗಳಿಗೆ ಭರ್ಜರಿ ಬಾಡೂಟದ ಔತಣಕೂಟ ಆಯೋಜಿಸಿದ ಕಾವ್ಯಾ ಮಾರನ್-ಅನಿರುದ್ಧ್ ದಂಪತಿ; ಮೆನುವಿನಲ್ಲಿ ಏನೆಲ್ಲಾ ಇತ್ತು ಗೊತ್ತಾ?

Kavya Maran - Anirudh Wedding: ಗ್ರೀಸ್‌ನಲ್ಲಿ ಇತ್ತೀಚೆಗೆ ವಿವಾಹವಾದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಉದ್ಯಮಿ ಕಾವ್ಯಾ ಮಾರನ್ ಜೋಡಿ, ತಮ್ಮ ಸನ್ ಗ್ರೂಪ್ ಉದ್ಯೋಗಿಗಳಿಗಾಗಿ ಭರ್ಜರಿ ಬಾಳೆಎಲೆ ಬಾಡೂಟದ ಔತಣಕೂಟ ಏರ್ಪಡಿಸಿದ್ದರು.

ಸನ್‌ ಟಿವಿ ಉದ್ಯೋಗಿಗಳಿಗೆ ಬಾಡೂಟ ಹಾಕಿಸಿದ ಕಾವ್ಯಾ ಮಾರನ್-ಅನಿರುದ್ಧ್‌ ಜೋಡಿ

-

Avinash GR
Avinash GR Nov 26, 2026 5:59 PM

ಇತ್ತೀಚೆಗಷ್ಟೇ ಗ್ರೀಸ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಉದ್ಯಮಿ ಕಾವ್ಯಾ ಮಾರನ್ ನವದಂಪತಿ, ಇದೀಗ 'ಸನ್ ಗ್ರೂಪ್' ಉದ್ಯೋಗಿಗಳಿಗಾಗಿ ಭರ್ಜರಿ ಭೋಜನಕೂಟವನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಮದುವೆಯ ಸಂಭ್ರಮವನ್ನು ಕೇವಲ ಗಣ್ಯರಿಗಷ್ಟೇ ಸೀಮಿತಗೊಳಿಸದೆ, ಸಂಸ್ಥೆಯ ಏಳಿಗೆಗಾಗಿ ದುಡಿಯುವ ಉದ್ಯೋಗಿಗಳೊಂದಿಗೂ ಹಂಚಿಕೊಂಡಿರುವ ಕಾವ್ಯಾ ಮಾರನ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಔತಣಕೂಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಉದ್ಯೋಗಿಗಳು ಬಾಳೆಎಲೆಯಲ್ಲಿ ಭೋಜನವನ್ನು ಸವಿಯುತ್ತಿರುವಾಗ ನವಜೋಡಿ ಅವರ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿಸುತ್ತಿರುವ ದೃಶ್ಯಗಳು ಎಲ್ಲರ ಗಮನಸೆಳೆದಿವೆ.

ಊಟದ ಮೆನುವಿನಲ್ಲಿ ಏನೇನ್‌ ಇತ್ತು?

ಈ ವಿಶೇಷ ಭೋಜನಕೂಟದಲ್ಲಿ ಉದ್ಯೋಗಿಗಳಿಗಾಗಿ ಬಾಡೂಟವನ್ನೇ ಸಿದ್ಧಪಡಿಸಲಾಗಿತ್ತು. ಬಾಳೆಎಲೆಯ ಭೋಜನದಲ್ಲಿ ಘಮಘಮಿಸುವ ಬಿರಿಯಾನಿ, ಫ್ರೈಡ್ ಚಿಕನ್, ಮಟನ್ ಸುಕ್ಕಾ, ಪ್ರಾನ್ಸ್, ಬಾಯಲ್ಡ್‌ ಎಗ್‌ , ರಾಯಿತ, ಬದನೆಕಾಯಿ ಗೊಜ್ಜು ಹಾಗೂ ನುಗ್ಗೆಕಾಯಿ ಪಲ್ಯವನ್ನು ಬಡಿಸಲಾಯಿತು. ಇದರೊಂದಿಗೆ ಸಿಹಿಪ್ರಿಯರಿಗಾಗಿ ಗುಲಾಬ್ ಜಾಮೂನ್, ಐಸ್ ಕ್ರೀಮ್ ಹಾಗೂ ಇತರ ಬಗೆಬಗೆಯ ಸಿಹಿತಿಂಡಿಗಳನ್ನು ನೀಡಲಾಯಿತು. ಔತಣಕೂಟದ ಉದ್ದಕ್ಕೂ ಅನಿರುದ್ಧ್ ಮತ್ತು ಕಾವ್ಯಾ ಅತಿಥಿಗಳನ್ನು ಖುದ್ದಾಗಿ ಭೇಟಿಯಾಗಿ, ಕೈಜೋಡಿಸಿ ನಮಸ್ಕರಿಸುತ್ತಾ ಅವರೊಂದಿಗೆ ಸಮಯ ಕಳೆದರು. ಈ ಸಂದರ್ಭದಲ್ಲಿ ಅನಿರುದ್ಧ್ ಬೂದು ಬಣ್ಣದ ಕುರ್ತಾ-ಪೈಜಾಮಾ ಧರಿಸಿ ಸರಳವಾಗಿ ಕಾಣಿಸಿಕೊಂಡರೆ, ಕಾವ್ಯಾ ಕೆಂಪು ಬಣ್ಣದ ಅನಾರ್ಕಲಿ ಸೂಟ್‌ನಲ್ಲಿ ಮಿಂಚಿದ್ದಾರೆ.

ಉದ್ಯೋಗಿಗಳ ಹೊಟ್ಟೆ ತುಂಬಿಸುವ ಸನ್‌ ಗ್ರೂಪ್

ಕಾವ್ಯ-ಅನಿರುದ್ಧ್‌ ಜೋಡಿಯ ಈ ಸರಳತೆ ಮತ್ತು ಉದ್ಯೋಗಿಗಳ ಮೇಲಿನ ಕಾಳಜಿಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, "ಅನಿರುದ್ಧ್-ಕಾವ್ಯಾ ಮದುವೆಯಲ್ಲಿ ಸನ್ ಟಿವಿ ಉದ್ಯೋಗಿಗಳಿಗೆ ಎಂತಹ ಭರ್ಜರಿ ಔತಣ ಸಿಕ್ಕಿದೆಯೆಂದರೆ, ಒಂದು ವೇಳೆ ಅವರಿಗೆ ಕೆಲಸ ಬಿಡಬೇಕೆಂಬ ಯೋಚನೆ ಬಂದರೂ ಮೊದಲು ಈ ಬಿರಿಯಾನಿಯೇ ನೆನಪಾಗುತ್ತದೆ! ಮಟನ್ ಬಿರಿಯಾನಿ, ಮಟನ್ ಸುಕ್ಕಾ, ಚಿಕನ್, ಸೀಗಡಿ ಮತ್ತು ಸಿಹಿತಿಂಡಿಗಳು... ಕೆಲವು ಮಾಲೀಕರು ತಮ್ಮ ಉದ್ಯೋಗಿಗಳಿಂದ ಓವರ್‌ಟೈಮ್ ಕೆಲಸ ಮಾಡಿಸಿದರೆ, ಇಲ್ಲಿ ಮದುವೆಗಳಲ್ಲಿ ಉದ್ಯೋಗಿಗಳ ಹೊಟ್ಟೆ ತುಂಬಿಸಲಾಗುತ್ತಿದೆ! ಕಾವ್ಯಾ ಮಾರನ್ ಅವರದ್ದು ನಿಜಕ್ಕೂ ಶ್ರೀಮಂತ ಹೃದಯ" ಎಂದು ಶ್ಲಾಘಿಸಿದ್ದಾರೆ.

Photos: ಅದ್ಧೂರಿಯಾಗಿ ನಡೆದ ಕಾವ್ಯಾ ಮಾರನ್-ಅನಿರುದ್ಧ್‌ ಮದುವೆ ಆರತಕ್ಷತೆ; ಎಲ್ಲರ ಗಮಸೆಳೆದ ಸಿಎಂ ವಿಜಯ್‌ ಫ್ಯಾಮಿಲಿ

ಯಶಸ್ವಿ ಉದ್ಯಮಿಯಾಗಿರುವ ಕಾವ್ಯಾ

ಕಾವ್ಯಾ ಮಾರನ್ ಅವರು ಭಾರತದ ಅತಿದೊಡ್ಡ ಮಾಧ್ಯಮ ಸಮೂಹಗಳಲ್ಲಿ ಒಂದಾದ 'ಸನ್ ಗ್ರೂಪ್'ನ ಸಂಸ್ಥಾಪಕ ಮತ್ತು ಅಧ್ಯಕ್ಷ ಕಲಾನಿಧಿ ಮಾರನ್ ಅವರ ಏಕೈಕ ಪುತ್ರಿ. ಪ್ರಸ್ತುತ ಕಾವ್ಯಾ ಅವರು ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಹಾಗೂ ಐಪಿಎಲ್ ಫ್ರಾಂಚೈಸಿ 'ಸನ್‌ರೈಸರ್ಸ್ ಹೈದರಾಬಾದ್' ತಂಡದ ಸಿಇಒ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ವರ ಅನಿರುದ್ಧ್ ರವಿಚಂದರ್ ಭಾರತೀಯ ಚಿತ್ರರಂಗದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದು, 'ಸೂಪರ್ ಸ್ಟಾರ್' ರಜನಿಕಾಂತ್ ಅವರ ಸೋದರಳಿಯ ಕೂಡ ಹೌದು!‌

ವೈರಲ್‌ ಆಗುತ್ತಿರುವ ವಿಡಿಯೋ



ನವೆಂಬರ್‌ 11ರಂದು ನಡೆದಿದ್ದ ಮದುವೆ

ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಅವರು ಕಳೆದ ನವೆಂಬರ್ 11ರಂದು ಗ್ರೀಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿದೇಶದಲ್ಲಿ ಸರಳವಾಗಿ ಈ ವಿವಾಹ ಸಮಾರಂಭ ನೆರವೇರಿತ್ತು. ಇದಾದ ಬಳಿಕ ನವೆಂಬರ್ 21ರಂದು ಚೆನ್ನೈನಲ್ಲಿ ಎರಡು ದಿನಗಳ ಕಾಲ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟರು, ನಿರ್ದೇಶಕರು, ರಾಜಕೀಯ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದರು. ಅದರ ಬೆನ್ನಲ್ಲೇ ಇದೀಗ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೂ ಭರ್ಜರಿ ಔತಣ ನೀಡುವ ಮೂಲಕ ದಂಪತಿ ಎಲ್ಲರ ಮನಗೆದ್ದಿದ್ದಾರೆ.