ಕನ್ನಡದಲ್ಲಿ ಕೊರಿಯನ್ ಸಂಸ್ಕೃತಿಯನ್ನು ಬಿಂಬಿಸುವ ʻಕೆ-ಪಾಪ್ʼ ಸಿನಿಮಾ; ಇದರಲ್ಲಿದೆ ಫ್ಯಾಂಟಸಿ ಕಥೆ
ವಿಶ್ವದಾದ್ಯಂತ ಕ್ರೇಜ್ ಸೃಷ್ಟಿಸಿರುವ ಕೊರಿಯನ್ ಸಂಗೀತ ಮತ್ತು ಸಂಸ್ಕೃತಿಯ ಪ್ರಭಾವವನ್ನು ಆಧರಿಸಿ ನಿರ್ದೇಶಕ ಕೆವಿನ್ ಲೂಕ್ ಅವರು 'ಕೆ-ಪಾಪ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಕೇವಲ ಸಂಗೀತದ ಚಿತ್ರವಲ್ಲ, ಬದಲಿಗೆ ಶನಿ ಮಹಾತ್ಮ ಮತ್ತು ಯಮಧರ್ಮರಂತಹ ಪೌರಾಣಿಕ ಪಾತ್ರಗಳು ಬಂದು ಹೋಗುವ ಫ್ಯಾಂಟಸಿ ಕಥಾಹಂದರವನ್ನು ಹೊಂದಿದೆ.
-
ಕೆ ಪಾಪ್ ಸಂಸ್ಕೃತಿ ಇಂದು ಭಾರತ ಸೇರಿದಂತೆ ಜಗತ್ತಿನ ವಿವಿದ ದೇಶಗಳಲ್ಲಿ ಪ್ರಭಾವ ಬೀರಿದೆ. ಇದೀಗ ಕೊರಿಯನ್ ಪಾಪ್ ಸಂಸ್ಕೃತಿ ಹೇಗೆಲ್ಲಾ ಪ್ರಭಾವ ಬೀರಿದೆ ಎನ್ನುವುದನ್ನು ತಿಳಿಸುವ ಪ್ರಯತ್ನವಾಗಿ ʻಕೆ ಪಾಪ್ʼ ಎಂಬ ಸಿನಿಮಾ ಮೂಡಿಬರುತ್ತಿದೆ. ಇಂತಹದೊಂದು ವಿಷಯವನ್ನು ಮುಂದಿಟ್ಡುಕೊಂಡು ನಿರ್ದೇಶಕ ಕೆವಿನ್ ಲೂಕ್ ಮತ್ತವರ ತಂಡ ಹೊಸ ಫ್ಯಾಂಟಸಿ ಕಥೆಯನ್ನು ಕೆ ಪಾಪ್ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದೆ.
ನಿರ್ದೇಶಕರು ಹೇಳಿದ್ದೇನು?
ಟೈಟಲ್ ಪ್ರೋಮೋ ಬಿಡುಗಡೆ ಮಾಡಿರುವ ಚಿತ್ರತಂಡ ಕೆ ಪಾಪ್ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ಜೀವನದ ಆಸೆ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ಸಮಯದಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿ ಮುಂದೆ ಬಂದಾಗ ಆದದ್ದೇ ಕೆ ಪಾಪ್. ಲಾವಣ್ಯ ಅವರು ಇದರ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಶ್ರಮ ಪಟ್ಟು ಒಳ್ಳೆಯ ಸಿನಿಮಾ ನೀಡುವ ಉದ್ದೇಶ ನಮ್ಮದು" ಎನ್ನುತ್ತಾರೆ ನಿರ್ದೇಶಕ ಕೆವಿನ್ ಲೂಕ್.
Star Fashion: ಕೊರಿಯನ್ ಫ್ಯಾಷನ್‌ವೇರ್‌ನಲ್ಲಿ ಕಿರುತೆರೆ ನಟಿ ಸುಕೃತಾ ನಾಗ್ ಕ್ಯೂಟ್ ಲುಕ್!
ಪ್ರೋಮೋ ಶೂಟ್‌ಗೆ ಆರು ತಿಂಗಳು ಕೆಲಸ
"ಕೊರಿಯನ್ ಪಾಪ್ ಸಂಸ್ಕತಿ ಬಿಂಬಿಸುವ ಈ ಚಿತ್ರದ ಮೂಲಕ, ಅದರ ಪ್ರಭಾವ ಭಾರತ ಮತ್ತು ಜಗತ್ತಿನಲ್ಲಿ ಯಾವ ರೀತಿ ಇದೆ ಎನ್ನುವುದನ್ನು ತೋರಿಸಲಾಗುತ್ತಿದೆ. ಹಲವು ವಿಷಯಗಳ ಜೊತೆಗೆ ಈ ಕಥೆಯೊಳಗೆ ಶನಿ ಮಹಾತ್ಮ, ಯಮರಾಜ ಕೂಡ ಬರಲಿದ್ದಾರೆ. ಅವರು ಯಾಕೆ ಬರ್ತಾರೆ. ಜೊತೆಗೆ ಈ ಚಿತ್ರದಲ್ಲಿ ಗರುಡ ರಾಮ್, ವಿಷ್ಣು ಸೇರಿದಂತೆ ಹಲವು ಪಾತ್ರಧಾರಿಗಳಿದ್ದಾರೆ. ಇದು ಕನಸಿನಲ್ಲಿ ನಡೆಯುವ ಕಥೆಯಾಗಿದೆ. 60 ದಿನದ ಗಡುವು ಯಾಕೆ ಎನ್ನುವುದು ಕುತೂಹಲದ ಕಥನ. ಬರೀ ಪ್ರೋಮೋ ಶೂಟ್‌ಗೆ ಆರು ತಿಂಗಳು ಕೆಲಸ ಮಾಡಿದ್ದೇವೆ. ಹಲವು ವಿಎಫ್‌ಎಕ್ಸ್ ತಂಡಗಳು ಈ ಚಿತ್ರಕ್ಕಾಗಿ ಕೆಲಸ ಮಾಡಿವೆ. 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತಿದ್ದು, 5-6 ಹಾಡುಗಳು ಈ ಚಿತ್ರದಲ್ಲಿವೆ" ಎನ್ನುತ್ತಾರೆ ನಿರ್ದೇಶಕ ಕೆವಿನ್.
ಕನ್ನಡದ ಜೊತೆಗೆ ತೆಲುಗಿನಲ್ಲೂ ಶೂಟಿಂಗ್
"ನಿರ್ದೇಶಕ ಕೆವಿನ್ ನನಗೆ ಕೆ-ಪಾಪ್ ಬಗ್ಗೆ ಹೇಳಿದಾಗ, ಅದು ನನಗೆ ಇಷ್ಡವಾಯಿತು. ಮೊದಲಿನಿಂದಲೂ ನಾಯಕನಾಗಬೇಕು ಎನ್ನುವ ಅಸೆ ಇತ್ತು. ಆದು ನನಗೆ ಸಾಧ್ಯವಾಗಲಿಲ್ಲ. ಈಗ ನನ್ನ ಸಹೋದರ ಸಂಜಯ್ ಹೀರೋ ಆಗಿದ್ದು, ಆತನ ಆಸೆಗೆ ನಾನು ಬೆಂಬಲವಾಗಿದ್ದೇನೆ. 3-4 ತಿಂಗಳಲ್ಲಿ ಚಿತ್ರೀಕರಣ ಆರಂಭಿಲಾಗುವುದು. ಕನ್ನಡದ ಜೊತೆಗೆ ತೆಲುಗಿನಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಇದೆ" ಎನ್ನುತ್ತಾರೆ ನಿರ್ಮಾಪಕ ಅಲಗಾನಿ ಕಿರಣ್ ಕುಮಾರ್.
ಈ ಚಿತ್ರದ ಸ್ಕ್ರಿಪ್ಟ್‌ಗೆ ಜೊತೆಯಾಗಿರುವ ಲಾವಣ್ಯ ಅವರು ಸಹ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ನಟ ಸಂಜಯ್‌ಗೆ ಈ ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರ. ಸಂಕಲನವನ್ನು ಶಶಿಧರ್ ಮಾಡುತ್ತಿದ್ದು, ರಾಜ್ ಕಾಂತ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ.