ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ವೃತ್ತಿ ಬದುಕಿಗೆ 30 ವರ್ಷ ತುಂಬುತ್ತಿದೆ. ಆ ಹಿನ್ನೆಲೆಯಲ್ಲಿ ಅವರ ಫ್ಯಾನ್ಸ್ ಇದನ್ನ ದೊಡ್ಡದಾಗಿ ಸೆಲೆಬ್ರೇಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಜೊತೆಗೆ ಸ್ಪೆಷಲ್ ಕಾಮನ್ ಡಿಪಿಯನ್ನು ಕೂಡ ರಿಲೀಸ್ ಮಾಡಲಾಗುತ್ತಿದೆ. ವಿಶೇಷ ಎಂದರೆ, ಈ ಕಾಮನ್ ಡಿಪಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಲೀಸ್ ಮಾಡಿ, ಸುದೀಪ್‌ಗೆ ವಿಶ್ ಮಾಡಲಿದ್ದಾರೆ.
ಜೊತೆಯಾದ ಹಲವು ಸೆಲೆಬ್ರಿಟಿಗಳು
ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಿವರಾಜ್‌ಕುಮಾರ್, ಸುನೀಲ್ ಶೆಟ್ಟಿ , ನಿಖಿಲ್ ಕುಮಾರಸ್ವಾಮಿ, ರುಕ್ಮಿಣಿ ವಸಂತ್, ಅಶಿಕಾ ರಂಗನಾಥ್, ದೇವಿಶ್ರೀ ಪ್ರಸಾದ್, ಧ್ರುವ ಸರ್ಜಾ, ಮಾಜಿ ಸಂಸದ ಪ್ರತಾಪ್ ಸಿಂಹ, ಜೆನಿಲಿಯಾ, ಸಾಯಿಕುಮಾರ್ ಸೇರಿದಂತೆ ಹಲವು ದಿಗ್ಗಜರು ಸುದೀಪ್ CDP ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಇನ್ನು, ಸಿಸಿಎಲ್ ಪಂದ್ಯಕ್ಕಾಗಿ ಇಂದು ಕಿಚ್ಚ ಸುದೀಪ್ ಅವರು ಕೊಯಮತ್ತೂರಿನಲ್ಲಿ ಇದ್ದಾರೆ. ಇಂದಿನ ಸೆಮಿಫೈನಲ್ ಮ್ಯಾಚ್ ಗೆದ್ದು, ಕಿಚ್ಚನಿಗೆ ಗಿಫ್ಟ್ ನೀಡಲು ಕರ್ನಾಟಕ ಬುಲ್ಡೋಜರ್ ತಂಡ ಸಜ್ಜಾಗಿದೆ.
Kichcha Sudeep: ಕರ್ನಾಟಕಕ್ಕೆ ಅವಮಾನ ಮಾಡಿದ ಸ್ಥಳದಲ್ಲೇ ಕನ್ನಡ ಧ್ವಜ ಹಾರಿಸಿದ ಕಿಚ್ಚ ಸುದೀಪ್!
ಸುದೀಪ್ ಹೇಳಿದ್ದೇನು?
"ಈ ಹುಚ್ಚು, ಸುಂದರವಾದ ಸಿನಿಮಾ ಜಗತ್ತಿನಲ್ಲಿ ಮೂರು ದಶಕಗಳ ಪಯಣದ ನಂತರ ಇಂದು ಇಲ್ಲಿ ನಿಂತಾಗ, ನನ್ನ ಹೃದಯ ತುಂಬಿ ಬಂದಿದೆ. ಕಣ್ಣಲ್ಲಿ ಕನಸು, ಮನದಲ್ಲಿ ಗೊಂದಲ ಮತ್ತು ಅತಿಯಾದ ಭರವಸೆ ಹೊತ್ತ ಹುಡುಗನಾಗಿದ್ದ ನಾನು, ಇಂದು ಏನಾಗಿದ್ದೇನೋ.. ಇದೆಲ್ಲವೂ ನಾನು ಊಹಿಸಿದ್ದಕ್ಕಿಂತ ದೊಡ್ಡದು. ಇದಕ್ಕೆಲ್ಲಾ ಏಕೈಕ ಕಾರಣ ನೀವು. ನನ್ನ ಅಭಿಮಾನಿ ದೇವರುಗಳೇ - ನೀವೇ ನನ್ನ ಶಕ್ತಿ, ನನ್ನ ಉಸಿರು, ನಾನು ಇಂದಿಗೂ ಇಲ್ಲಿರಲು ನೀವೇ ಮುಖ್ಯ ಕಾರಣ" ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ ಕಿಚ್ಚ.
ನಿಮ್ಮ ಬೆವರ ಹನಿಯೇ ಸಿನಿಮಾದ ನಿಜವಾದ ಗೆಲುವು
"ನಿರ್ದೇಶಕರು ಮತ್ತು ಬರಹಗಾರರೇ - ನಿಮ್ಮ ಕಥೆಗಳ ಮೂಲಕ ನನ್ನನ್ನು ನಂಬಿದ್ದಕ್ಕೆ, ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ನನ್ನಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿ ತಿದ್ದಿತೀಡಿದ್ದಕ್ಕೆ ಧನ್ಯವಾದಗಳು. ನಿರ್ಮಾಪಕರೇ - ನಿಮ್ಮ ಧೈರ್ಯ ಮತ್ತು ನಂಬಿಕೆಯೇ ಈ ಕನಸುಗಳು ನನಸಾಗಲು ಕಾರಣವಾಯಿತು. ನನ್ನ ಸಹ ಕಲಾವಿದರು ಮತ್ತು ಪ್ರತಿಯೊಬ್ಬ ತಂತ್ರಜ್ಞರೇ - ಸಿನಿಮಾ ಎಂಬುದು ಒಂದು ಸಮೂಹ ಕಲೆ. ಲೈಟ್ ಬಾಯ್ಸ್, ಕ್ಯಾಮೆರಾಮೆನ್, ಆರ್ಟ್ ವಿಭಾಗ, ಕಾಸ್ಟ್ಯೂಮ್, ಸ್ಪಾಟ್ ಬಾಯ್ಸ್ ನಿಂದ ಹಿಡಿದು ಎಡಿಟರ್‌ಗಳವರೆಗೆ - ತೆರೆಯ ಹಿಂದೆ ಹರಿಯುವ ನಿಮ್ಮ ಬೆವರ ಹನಿಯೇ ಸಿನಿಮಾದ ನಿಜವಾದ ಗೆಲುವು" ಎಂದು ಸುದೀಪ್ ಹೇಳಿದ್ದಾರೆ.
ನನ್ನನ್ನು ನಾನಾಗಿ ಉಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದ
"ಮಾಧ್ಯಮ ಮಿತ್ರರೇ - ನೀವು ನನ್ನ ಧ್ವನಿಯಾದಿರಿ, ನನ್ನನ್ನು ಪ್ರಶ್ನಿಸಿದಿರಿ, ಸಂಭ್ರಮಿಸಿದಿರಿ ಮತ್ತು ನಾನು ಬೆಳೆಯಲು ಸಹಕರಿಸಿದಿರಿ. ಕನ್ನಡ ಚಿತ್ರರಂಗವೇ - ನನಗೆ ಅಸ್ಮಿತೆ, ಹೆಮ್ಮೆ ಮತ್ತು ಆಸರೆ ನೀಡಿದ ತಾಯಿ ನೀನು; ಕನ್ನಡ ಚಿತ್ರರಂಗವನ್ನು ನಾನೆಂದೂ ನನ್ನ ಹೃದಯದಲ್ಲಿಟ್ಟು ಪೂಜಿಸುತ್ತೇನೆ. ಮತ್ತು ನನ್ನ ಕುಟುಂಬ ಹಾಗು ಸ್ನೇಹಿತರೇ - ಈ ಪಯಣದುದ್ದಕ್ಕೂ ನನ್ನ ಕಾಲು ನೆಲದ ಮೇಲಿರುವಂತೆ ನೋಡಿಕೊಂಡು, ನನ್ನನ್ನು ನಾನಾಗಿ ಉಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದ" ಎಂದಿದ್ದಾರೆ ಸುದೀಪ್.
"ಈ 30 ವರ್ಷಗಳು ನನಗೆ ಕಲಿಸಿದ ಒಂದು ಪಾಠವೆಂದರೆ ಅದು 'ವಿನಯ': ಇಲ್ಲಿ ಸಿಗುವ ಪ್ರತಿಯೊಂದು ಗೆಲುವೂ ಕೂಡ ಎರವಲು ಪಡೆದಿದ್ದಷ್ಟೇ. ನಾನು ಇನ್ನಷ್ಟು ಕಠಿಣ ಪರಿಶ್ರಮ ಪಡುತ್ತೇನೆ, ಈ ಕಲೆಗೆ ಗೌರವ ಸಲ್ಲಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದೆಲ್ಲವನ್ನೂ ಮರಳಿ ನೀಡುತ್ತೇನೆ ಎಂದು ಮಾತು ಕೊಡುತ್ತೇನೆ. ತುಂಬಿದ ಕಣ್ಣು ಮತ್ತು ಕೃತಜ್ಞತಾ ಭಾವದೊಂದಿಗೆ ಕೈ ಮುಗಿದು ಹೇಳುತ್ತಿದ್ದೇನೆ - ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು" ಎಂದಿದ್ದಾರೆ ಕಿಚ್ಚ ಸುದೀಪ್.