ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ʻಮಾರ್ಕ್ʼ - ʻ45ʼ ಮ್ಯಾಜಿಕ್ ಹೇಗಿತ್ತು? ಇಲ್ಲಿದೆ ಈ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್!
Mark and 45 collection: ಡಿ.25ರಂದು ತೆರೆಕಂಡಿದ್ದ 45 ಮತ್ತು ಮಾರ್ಕ್ ಸಿನಿಮಾಗಳು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಭಾರತದಾದ್ಯಂತ ಸುಮಾರು 7+ ಕೋಟಿ ರೂ. ಗಳಿಸುವ ಮೂಲಕ ಭರ್ಜರಿ ಆರಂಭ ಪಡೆದಿದೆ. ಮತ್ತೊಂದೆಡೆ, ಅರ್ಜುನ್ ಜನ್ಯ ನಿರ್ದೇಶನದ '45' ಸಿನಿಮಾ ಪೇಯ್ಡ್ ಪ್ರೀಮಿಯರ್ ಸೇರಿ 5+ ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
-
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸ್ಯಾಂಡಲ್‌ವುಡ್‌ನಲ್ಲಿ ಎರಡು ದೊಡ್ಡ ಸಿನಿಮಾಗಳು ತೆರೆಕಂಡಿವೆ. ಒಂದು ಕಡೆ, ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಅಭಿನಯದ ʻ45ʼ ಸಿನಿಮಾ, ಮತ್ತೊಂದು ಕಡೆ ಕಿಚ್ಚ ಸುದೀಪ್ ಅಭಿನಯದ ʻಮಾರ್ಕ್ʼ.. ಸಿನಿಪ್ರಿಯರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಇವೆರಡೂ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಿವೆ. ಹಾಗಾದರೆ, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರಗಳ ಕಲೆಕ್ಷನ್ ಹೇಗಿದೆ? ಮುಂದೆ ಓದಿ.
ಮಾರ್ಕ್ ಸಿನಿಮಾ ಗಳಿಸಿದ್ದೆಷ್ಟು?
ಮ್ಯಾಕ್ಸ್ ನಂತರ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನಲ್ಲಿ ಬಂದ ಮಾರ್ಕ್ ಸಿನಿಮಾವು ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿದೆ. ಆದರೆ ತಮಿಳಿಗಿಂತ ಕನ್ನಡದಲ್ಲಿ ಹೆಚ್ಚು ಗಳಿಕೆ ಮಾಡಿದೆ. ಗುರುವಾರ ಬೆಳಗಿನಜಾವದಿಂದಲೇ ಪ್ರದರ್ಶನ ಆರಂಭಿಸಿದ ಮಾರ್ಕ್ ಸಿನಿಮಾವು ಸುಮಾರು ಭಾರತದಾದ್ಯಂತ ಸುಮಾರು 7+ ಕೋಟಿ ರೂ. ಗಳನ್ನು ಬಾಚಿಕೊಂಡಿರುವ ಬಗ್ಗೆ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ ಕುರಿತಂತೆ ಚಿತ್ರತಂಡ ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಉತ್ತಮ ಆರಂಭ ಪಡೆದುಕೊಂಡಿರುವ ಮಾರ್ಕ್ ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ಮೇಲೆ ಯಾವ ರೀತಿಯ ಹಿಡಿತ ಸಾಧಿಸಲಿದೆ ಎಂಬುದನ್ನ ಕಾದುನೋಡಬೇಕು.
ಸುದೀಪ್ ಜೊತೆಗೆ ಈ ಸಿನಿಮಾದಲ್ಲಿ ನವೀನ್ ಚಂದ್ರ, ವಿಕ್ರಾಂತ್, ದೀಪ್ಶಿಕಾ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಯೋಗಿ ಬಾಬು, ಗುರು ಸೋಮಸುಂದರಂ, ಅಶ್ವಿನ್ ಹಾಸನ್, ರಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.
45 ಸಿನಿಮಾದ ಹವಾ ಹೇಗಿದೆ?
ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ನ ʻ45ʼ ಸಿನಿಮಾವು ಡಿಸೆಂಬರ್ 24ರಿಂದಲೇ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿತ್ತು. ಈ ಚಿತ್ರವು ಪೇಯ್ಡ್ ಪ್ರೀಮಿಯರ್ ಶೋಗಳ ಗಳಿಕೆಯೂ ಸೇರಿ ಮೊದಲ ದಿನ 5+ ಕೋಟಿ ರೂ.ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಬಾಚಿಕೊಂಡಿರುವ ಬಗ್ಗೆ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಪ್ರೇಕ್ಷಕರ ಸಂಖ್ಯೆ ಅಧಿಕಗೊಂಡರೆ, ಗಳಿಕೆಯಲ್ಲಿ ಏರಿಕೆ ಕಾಣಬಹುದು.
Mark Trailer : ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರ್ತಿದೆ ‘ಮಾರ್ಕ್’ ಟ್ರೈಲರ್, ಯಾವಾಗ?
ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾಗೆ ರಮೇಶ್ ರೆಡ್ಡಿ ಅವರು ಭರ್ಜರಿಯಾಗಿಯೇ ಹಣ ಹಾಕಿದ್ದಾರೆ. ವಿಎಫ್‌ಎಕ್ಸ್ ಕೆಲಸಗಳಿಗೇ ಕೋಟ್ಯಂತರ ಹಣ ವ್ಯಯ ಮಾಡಲಾಗಿದೆ. ಫ್ಯಾಂಟಸಿ ಥ್ರಿಲ್ಲರ್ ಮಾದರಿಯ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕೌಸ್ತುಭಮಣಿ, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಜಾಫರ್ ಮುಂತಾದವರು ನಟಿಸಿದ್ದಾರೆ.