ಸುದೀಪ್ ಅಕ್ಕನ ಮಗನ ಚಿತ್ರಕ್ಕೆ ಭಾರಿ ಡಿಮ್ಯಾಂಡ್! ಸಂಚಿತ್ ʻಮ್ಯಾಂಗೋ ಪಚ್ಚʼ ಆಡಿಯೋ ರೈಟ್ಸ್ ಸೇಲ್
ʻಮ್ಯಾಂಗೋ ಪಚ್ಚʼ ಸಿನಿಮಾದ ಆಡಿಯೋ ಹಕ್ಕುಗಳು ದುಬಾರಿ ಮೊತ್ತಕ್ಕೆ ಸರೆಗಮ ಸಂಸ್ಥೆಯ ಪಾಲಾಗಿವೆ. ಕಿಚ್ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಹೊಸ ಸಿನಿಮಾವಾಗಿದ್ದು, ವಿವೇಕ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
ಕಿಚ್ಚ ಸುದೀಪ್ ಸೋದರಳಿಯ ಮಾರ್ಕ್ -
ʻಕಿಚ್ಚʼ ಸುದೀಪ್ (Kiccha Sudeep) ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅವರು ʻಮ್ಯಾಂಗೋ ಪಚ್ಚʼ (Mango Pachcha) ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ . ಸದ್ಯ ಈ ಸಿನಿಮಾ ಟೀಮ್‌ನಿಂದ ಹೊಸ ಅಪ್ಡೇಟ್ ಸಿಕ್ಕಿದೆ. ಹೌದು, ಚಿತ್ರದ ಆಡಿಯೋಗಳು ದುಬಾರಿ ಮೊತ್ತಕ್ಕೆ ಸೇಲ್ ಆಗಿವೆ. ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ʻಮ್ಯಾಂಗೋ ಪಚ್ಚʼ ಸಿನಿಮಾದ ಆಡಿಯೋ ಹಕ್ಕುಗಳನ್ನು ಸರೆಗಮ ಸಂಸ್ಥೆಯ ಪಾಲಾಗಿವೆ.
ಹೊಸಬರ ಟೀಮ್‌ಗೆ ಬೂಸ್ಟ್
ಹೌದು, ಹೀರೋ ಸಂಚಿತ್ ಸಂಜೀವ್‌ಗೆ ಇದು ಮೊದಲ ಸಿನಿಮಾ. ಹಾಗೆಯೇ ನಿರ್ದೇಶಕ ವಿವೇಕ ಅವರಿಗೂ ಇದು ಮೊದಲ ಸಿನಿಮಾ. ಹೀಗೆ ಹೊಸಬರ ತಂಡದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿರುವುದು ಖುಷಿಗೆ ಕಾರಣವಾಗಿದೆ. 2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ‘ಮ್ಯಾಗೋ ಪಚ್ಚ’ ಸಿನಿಮಾದಲ್ಲಿವೆಯಂತೆ. ಕ್ರೈಂ ಥ್ರಿಲ್ಲರ್ ಕಹಾನಿಯನ್ನು ಈ ಚಿತ್ರ ಹೊಂದಿದ್ದು, ಈ ಚಿತ್ರಕ್ಕೆ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಹಣ ಹೂಡಿವೆ. ಪ್ರಿಯಾ ಸುದೀಪ್, ಕಾರ್ತಿಕ್, ಯೋಗಿ ಜಿ. ರಾಜ್ ಅವರು ಮ್ಯಾಂಗೋ ಪಚ್ಚ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ.
ಚರಣ್ ರಾಜ್ ಮ್ಯೂಸಿಕ್ ಮೋಡಿ
ಸ್ಯಾಂಡಲ್‌ವುಡ್‌ನ ಭಾರಿ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಚರಣ್ ರಾಜ್ ಕೂಡ ಒಬ್ಬರು. ಅಂದಹಾಗೆ, ʻಮ್ಯಾಂಗೋ ಪಚ್ಚʼ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದು, ಟೀಸರ್‌ನ ಹಿನ್ನೆಲೆ ಸಂಗೀತದ ಮೂಲಕವೇ ಅವರು ಗಮನಸೆಳೆದಿದ್ದರು. ಇದೀಗ ಅವರ ಸಂಗೀತ ನಿರ್ದೇಶಕನದಲ್ಲಿ ಹಾಡುಗಳು ಯಾವ ರೀತಿ ಮೂಡಿಬರಬಹುದು ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿದೆ.
Mango Pachcha Movie: ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್
ನಿರ್ಮಾಪಕಿ ಪ್ರಿಯಾ ಸುದೀಪ್ ಏನಂದ್ರು?
ಉತ್ತಮ ಮೊತ್ತಕ್ಕೆ ಆಡಿಯೋ ಹಕ್ಕುಗಳು ಸೇಲ್ ಆಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ಮಾಪಕಿ ಪ್ರಿಯಾ ಸುದೀಪ್, "ಸರೆಗಮ ಸಂಸ್ಥೆಯು ಮ್ಯಾಂಗೋ ಪಚ್ಚ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿರುವುದರ ಬಗ್ಗೆ ನಾವು ನಂಬಲಾಗದಷ್ಟು ಉತ್ಸುಕರಾಗಿದ್ದೇವೆ. ಚರಣ್ ರಾಜ್ ಅವರು ಸಂಯೋಜಿಸಿದ ಸಂಗೀತವು ಪ್ರೇಕ್ಷಕರನ್ನು ಸೆಳೆಯುತ್ತದೆ ಮತ್ತು ಈ ಚಿತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದು ಖಚಿತ. ಚರಣ್ ರಾಜ್ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇದೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳನ್ನು ಕೇಳಲು ಉತ್ಸುಕಳಾಗಿದ್ದೇನೆ" ಎನ್ನುತ್ತಾರೆ.
ಸಾಂಗ್ ರಿಲೀಸ್ ಯಾವಾಗ?
ʻಮ್ಯಾಂಗೋ ಪಚ್ಚʼ ಸಿನಿಮಾದ ಮೊದಲ ಹಾಡನ್ನು ನವೆಂಬರ್ 24ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಸುದೀಪ್ ಅವರ ಕುಟುಂಬದಿಂದ ಬರುತ್ತಿರುವ ಸಂಚಿತ್ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಇದೆ. ಅಂದಹಾಗೆ, ಮೂಲಗಳ ಪ್ರಕಾರ, ಸುಮಾರು 1 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತಕ್ಕೆ ಈ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಲಾಗಿದೆಯಂತೆ.