SJ Suryah: ತಮಿಳಿನ ʻಕಿಲ್ಲರ್ʼ ಸಿನಿಮಾ ಸೆಟ್‌ನಲ್ಲಿ ಭೀಕರ ದುರಂತ; ಸಿಲಿಂಡರ್ ಸ್ಫೋಟದಲ್ಲಿ ಓರ್ವ ತಂತ್ರಜ್ಞ ಸಾವು, ಮೂವರಿಗೆ ಗಾಯ
ತಮಿಳು ನಟ, ನಿರ್ದೇಶಕ ಎಸ್‌ಜೆ ಸೂರ್ಯ ಅವರ ಮುಂಬರುವ 'ಕಿಲ್ಲರ್' ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಭೀಕರ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 26 ವರ್ಷದ ಯುವ ತಂತ್ರಜ್ಞ ಮದನ್ ಸಾವನ್ನಪ್ಪಿದ್ದಾರೆ. ಚೆನ್ನೈನ ಬಿನ್ನಿ ಮಿಲ್ಸ್‌ನಲ್ಲಿ ಬುಧವಾರ ಮುಂಜಾನೆ ಬಾಂಬ್ ಬ್ಲಾಸ್ಟ್ ದೃಶ್ಯ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದೆ.
-
ತಮಿಳು ನಟ, ನಿರ್ದೇಶಕ ಎಸ್‌ಜೆ ಸೂರ್ಯ ಅವರ ಮುಂದಿನ ಸಿನಿಮಾ 'ಕಿಲ್ಲರ್' ಶೂಟಿಂಗ್ ವೇಲೆ ಅವಘಡ ಸಂಭವಿಸಿದೆ. ಬುಧವಾರ (ಜೂನ್ 3) ಮುಂಜಾನೆ ನಡೆದ ಭೀಕರ ದುರಂತದಲ್ಲಿ ಓರ್ವ ತಂತ್ರಜ್ಞ ಸಾವನ್ನಪ್ಪಿದ್ದು, ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಪ್ರಮುಖ ದೃಶ್ಯವೊಂದರ ಚಿತ್ರೀಕರಣದ ವೇಳೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಸಾವನ್ನಪ್ಪಿದ್ದಾರೆ.
ಏನಿದು ಘಟನೆ? ನಡೆದಿದ್ದು ಎಲ್ಲಿ?
ಮೂಲಗಳ ಪ್ರಕಾರ, ಈ ಘಟನೆಯು ಬುಧವಾರ ಮುಂಜಾನೆ ಸುಮಾರು 5 ಗಂಟೆಗೆ ಚೆನ್ನೈನ ಪೆರಂಬೂರ್‌ನಲ್ಲಿರುವ ಬಿನ್ನಿ ಮಿಲ್ಸ್‌ನಲ್ಲಿ ನಡೆದಿದೆ. ಕಿಲ್ಲರ್ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯವೊಂದನ್ನು ಚಿತ್ರೀಕರಿಸುವಾಗ, ಶೂಟಿಂಗ್‌ಗಾಗಿ ಬಳಸಲಾಗುತ್ತಿದ್ದ ಬಲೂನ್ ಗ್ಯಾಸ್ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ವೇಳೆ ಮಧುರವಾಯಲ್ ಮೂಲದ ಮದನ್ (26), ಕುಂದ್ರಾತ್ತೂರಿನ ಶಕ್ತಿವೇಲ್ (27), ಮಧುರವಾಯಲ್‌ನ ಸೂರ್ಯ (23) ಮತ್ತು ನೇರ್ಕುಂದ್ರಂನ ದಿನಕರನ್ (24) ಎಂಬ ತಂತ್ರಜ್ಞರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಈ ನಾಲ್ವರನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಮದನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಉಳಿದ ಮೂವರಿಗೆ ಸದ್ಯ ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಈ ಸ್ಫೋಟಕ್ಕೆ ನಿಖರ ಕಾರಣವೇನು? ಸೂಕ್ತ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಅಥವಾ ಇದು ತಾಂತ್ರಿಕ ದೋಷದಿಂದ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗಾಯಗೊಂಡ ಎಲ್ಲಾ ತಂತ್ರಜ್ಞರು ಸ್ಪೆಷಲ್ ಎಫೆಕ್ಟ್ಸ್ ವಿಭಾಗಕ್ಕೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಅಪಘಾತ ನಡೆದ ಸಮಯದಲ್ಲಿ ಎಸ್‌ಜೆ ಸೂರ್ಯ ಅವರು ಸೆಟ್‌ನಲ್ಲಿ ಉಪಸ್ಥಿತರಿದ್ದರೇ ಅಥವಾ ಇಲ್ಲವೇ ಎಂಬುದು ಇನ್ನು ತಿಳಿದುಬಂದಿಲ್ಲ. ಕಿಲ್ಲರ್ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳುತ್ತಿರುವ ಎಸ್‌ಜೆ ಸೂರ್ಯ ಅವರು ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಕೋಲಿವುಡ್‌ನಲ್ಲಿ ನಡೆದ ಹಿಂದಿನ ದುರಂತಗಳು:
ಇತ್ತೀಚೆಗಷ್ಟೇ, ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್‌ನ 'ಜೈಲರ್ 2' ಚಿತ್ರಕ್ಕಾಗಿ ಪಣೈಯೂರ್‌ನ ಸ್ಟುಡಿಯೋವೊಂದರಲ್ಲಿ ಸೆಟ್ ನಿರ್ಮಿಸುವಾಗ ಕಾರ್ತಿಕೇಯನ್ (28) ಎಂಬ ಕಲಾ ವಿಭಾಗದ ಸಿಬ್ಬಂದಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು. 2025 ರಲ್ಲಿ ಕಾರ್ತಿ ನಟನೆಯ 'ಸರ್ದಾರ್ 2' ಚಿತ್ರದ ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಎಲ್‌ವಿ ಪ್ರಸಾದ್ ಸ್ಟುಡಿಯೋದಲ್ಲಿ 20 ಅಡಿ ಎತ್ತರದ ವೇದಿಕೆಯಿಂದ ಬಿದ್ದು ಇಲುಮಲೈ (54) ಎಂಬ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದರು.
ಪಾ ರಂಜಿತ್ ಅವರ 'ವೆಟ್ಟುವಂ' ಚಿತ್ರದ ಕಾರ್-ಟಾಪ್ಲಿಂಗ್ (ಕಾರು ಪಲ್ಟಿಯಾಗುವ) ದೃಶ್ಯದ ಶೂಟಿಂಗ್ ವೇಳೆ ಸ್ಟಂಟ್ ಮ್ಯಾನ್ ಎಸ್‌ಎಂ ರಾಜು ಸಾವನ್ನಪ್ಪಿದ್ದರು. ಇನ್ನು 2020ರಲ್ಲಿ ಕಮಲ್ ಹಾಸನ್ ಅವರ 'ಇಂಡಿಯನ್ 2' ಸೆಟ್‌ನಲ್ಲಿ ಭಾರಿ ತೂಕದ ಲೈಟಿಂಗ್ ಕ್ರೇನ್ ಬಿದ್ದ ಪರಿಣಾಮ ಕೃಷ್ಣ, ಚಂದ್ರನ್ ಮತ್ತು ಮಧು ಎಂಬ ಮೂವರು ಸಹ-ನಿರ್ದೇಶಕರು ಸಾವನ್ನಪ್ಪಿದ್ದರು, 9 ಮಂದಿ ಗಾಯಗೊಂಡಿದ್ದರು.