ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ವಿ. ನಾಗೇಂದ್ರ ಪ್ರಸಾದ್; ‌ʻಇದು ಮತ್ತೊಂದು ಮುಂಗಾರು ಮಳೆ ಆಗಲಿದೆʼ ಎಂದ ಹೀರೋ ಕಿರಣ್

ಯುವ ಪ್ರತಿಭೆಗಳ ‘ಲೈಫ್ ಟುಡೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪ್ರೇಮಗೀತೆ ‘ನೀನೊಬ್ಬಳೆ...’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ, ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ನಟನೆಯ ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

ಯುವ ಪ್ರತಿಭೆಗಳ ಸಾರಥ್ಯದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ‘ಲೈಫ್ ಟುಡೆ’ (Life Today) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಪ್ರಚಾರದ ಮೊದಲ ಭಾಗವಾಗಿ ಹಿರಿಯ ಗೀತರಚನೆಕಾರ ಹಾಗೂ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಚಿತ್ರದ ಪ್ರಮುಖ ರೋಮ್ಯಾಂಟಿಕ್ ಸಾಂಗ್ ಆಗಿರುವ ‘ನೀನೊಬ್ಬಳೆ...’ ಎಂಬ ಮಧುರವಾದ ಹಾಡನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಹೊಸ ನಾಯಕ ಕಿರಣ್ ಆದಿತ್ಯ ಮತ್ತು ಪ್ರತಿಭಾವಂತ ನಟಿ ಲೇಖಾ ಚಂದ್ರ ಕಾಣಿಸಿಕೊಂಡಿರುವ ಈ ಪ್ರೇಮಗೀತೆ ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಚಿತ್ರ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.

ಯುವಜನತೆಗೆ ಹತ್ತಿರವಾಗುವಂತಹ ಅಂಶಗಳು ಚಿತ್ರದಲ್ಲಿವೆ

ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ನಾಗೇಂದ್ರ ಪ್ರಸಾದ್, "ಇಡೀ ಸಿನಿಮಾ ಪ್ರೀತಿಯ ಸುತ್ತ ಸಾಗುವ ಸುಂದರ ಕಥಾಹಂದರವನ್ನು ಹೊಂದಿದೆ. ಯುವಜನತೆಗೆ ತುಂಬಾ ಹತ್ತಿರವಾಗುವಂತಹ ಅಂಶಗಳು ಚಿತ್ರದಲ್ಲಿದ್ದು, ನಿರ್ದೇಶಕ ಕಾಂತ ಕನ್ನಲ್ಲಿ ಅವರು ಕಥೆಯನ್ನು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ. ಹೊಸ ನಾಯಕ ಕಿರಣ್, ನಿರ್ಮಾಪಕ ಪ್ರದೀಪ್ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರ ಶ್ರಮ ಎದ್ದು ಕಾಣುತ್ತಿದ್ದು, ಸಿನಿಮಾ ದೊಡ್ಡ ಯಶಸ್ಸು ಗಳಿಸಲಿ" ಎಂದು ಹಾರೈಸಿದರು.

Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದ ನಿರ್ದೇಶಕ

ʻಲೈಫ್‌ ಟುಡೇʼ ಚಿತ್ರದ ನಿರ್ದೇಶಕರಾದ ಕಾಂತ ಕನ್ನಲ್ಲಿ ಅವರು ಮಾತನಾಡಿ, "ನಾವು ಎಲ್ಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದೇವೆ. ನಟ ಕಿರಣ್ ಮತ್ತು ನಿರ್ಮಾಪಕ ಪ್ರದೀಪ್ ಅವರ ಸಂಪೂರ್ಣ ಸಹಕಾರದಿಂದಾಗಿ ಒಂದು ಸದಭಿರುಚಿಯ ಸಿನಿಮಾ ಮೂಡಿಬರಲು ಸಾಧ್ಯವಾಯಿತು. ಕೇವಲ ಪ್ರೀತಿ ಮಾತ್ರವಲ್ಲದೆ ತ್ಯಾಗ, ನೋವು ಹಾಗೂ ಕೌಟಂಬಿಕ ಬದ್ಧತೆಯಂತಹ ಹಲವು ಸೂಕ್ಷ್ಮ ಎಳೆಗಳನ್ನು ಒಳಗೊಂಡಿರುವ ಕಮರ್ಷಿಯಲ್ ಎಂಟರ್‌ಟೇನರ್‌ ಇದಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಟ್ರೇಲರ್ ಮೂಲಕ ಸಿನಿಮಾದ ಅಸಲಿ ಕಂಟೆಂಟ್‌ ಪ್ರೇಕ್ಷಕರಿಗೆ ತಲುಪಲಿದೆ" ಎಂದರು.

ಇದು ಮತ್ತೊಂದು ‘ಮುಂಗಾರು ಮಳೆ’ ಆಗಲಿದೆ!

ಚಿತ್ರದ ನಾಯಕ ನಟ ಕಿರಣ್ ಆದಿತ್ಯ, "ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾಗಳಿಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಆದರೆ ಆಡಿಯೆನ್ಸ್ ರಿಜೆಕ್ಷನ್ ಮತ್ತು ಸೆಲೆಕ್ಷನ್ ಹೇಗಿರುತ್ತದೆ ಎಂಬ ಪೂರ್ಣ ಅರಿವು ನಮಗಿದೆ. ಚಿತ್ರರಂಗದ ಈ ಬರಗಾಲದ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡೋಕೆ ನಾವು ಬರ್ತಾ ಇದ್ದೇವೆ. ನಮ್ಮ ‘ಲೈಫ್ ಟುಡೆ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ‘ಮುಂಗಾರು ಮಳೆ’ಯಂತಹ ಹೊಸ ಇತಿಹಾಸ ಸೃಷ್ಟಿಸುವ ಎಲ್ಲ ಭರವಸೆ ನಮಗಿದೆ. ಜೂನ್ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ಚಿತ್ರದ ಹಾಡುಗಳು ವರ್ಷದ ಬಿಗ್ ಹಿಟ್ ಆಗಲಿವೆ" ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

Life Today Movie: ಕನ್ನಡದ ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ದನಿಯಾದ ತಮಿಳಿನ‌ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಜಿ.ವಿ ಪ್ರಕಾಶ್

ಲೈಫ್‌ ಟುಡೇ ಸಿನಿಮಾಗೆ ಶ್ರೀಧರ್ ಸಂಭ್ರಮ್ ಮ್ಯಾಜಿಕ್

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರು, "ಸಿನಿಮಾದಲ್ಲಿ ಕನ್ನಡದ ಸೊಗಡಿನ ಹಲವು ವೈವಿಧ್ಯಮಯ ಹಾಡುಗಳಿವೆ. ಹಾಡುಗಳು ಇಷ್ಟು ಅದ್ಭುತವಾಗಿ ಮೂಡಿಬರಲು ನಾಯಕ ಕಿರಣ್ ಅವರ ಕಲ್ಪನೆ ಮತ್ತು ಶ್ರಮವೇ ಕಾರಣ. ಪ್ರತಿಯೊಂದು ಹಾಡನ್ನು ವಿಭಿನ್ನ ಶೈಲಿಯಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಸದ್ಯ ಬಿಡುಗಡೆಯಾಗಿರುವ ಹಾಡನ್ನು ಜನಪ್ರಿಯ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಅನುರಾಧ ಭಟ್ ಅತ್ಯಂತ ಮಧುರವಾಗಿ ಹಾಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

‘ಕಾಕ್ರೋಚ್’ ಸುಧೀ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ - ಪ್ರದೀಪ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಜೂನ್‌ನಲ್ಲಿ ಅದ್ದೂರಿಯಾಗಿ ‘ಲೈಫ್ ಟುಡೆ’ ಸಿನಿಮಾ ರಿಲೀಸ್‌ ಆಗಲಿದೆ.