Kubera Movie: 2025 ಕೂಡ ರಶ್ಮಿಕಾ ವರ್ಷ; ಧನುಷ್ ಜತೆಗಿನ ʼಕುಬೇರʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಹ್ಯಾಟ್ರಿಕ್ ಗೆಲುವಿನ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಸದ್ಯ ಹಲವು ಬಹು ನಿರೀಕ್ಷಿತ ಚಿತ್ರಗಳಿವೆ. ಅದರಲ್ಲಿ ಮುಖ್ಯವಾದುದು ಧನುಷ್ ಜತೆಗೆ ನಟಿಸುತ್ತಿರುವ ಚಿತ್ರ ʼಕುಬೇರʼ. ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಶೇಖರ್ ಕಮ್ಮುಲ ಆ್ಯಕ್ಷನ್ ಹೇಳುತ್ತಿರುವ ಈ ಚಿತ್ರ ಜೂ. 20ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

ʼಕುಬೇರʼ ಚಿತ್ರದ ಪೋಸ್ಟರ್.

ಚೆನ್ನೈ: 2023ರಲ್ಲಿ ತೆರೆಕಂಡ ಬಾಲಿವುಡ್‌ನ ʼಅನಿಮಲ್ʼ, 2024ರಲ್ಲಿ ರಿಲೀಸ್ ಆದ ಟಾಲಿವುಡ್‌ನ ʼಪುಷ್ಪ 2ʼ, 2025ರಲ್ಲಿ ಬಿಡುಗಡೆಯಾದ ಹಿಂದಿಯ ʼಛಾವಾʼ...ಇದು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರ ಸಕ್ಸಸ್ ಗ್ರಾಫ್. ಹ್ಯಾಟ್ರಿಕ್ ಗೆಲುವಿನೊಂದಿಗೆ ಸದ್ಯ ದೇಶದ ಟಾಪ್ ನಾಯಕಿ ಎನಿಸಿಕೊಂಡಿರುವ ರಶ್ಮಿಕಾ ಕೈಯಲ್ಲಿ ಇದೀಗ ಬಹು ನಿರೀಕ್ಷಿತ ಹಲವು ಚಿತ್ರಗಳಿವೆ. ಈದ್‌ಗೆ ಸಲ್ಮಾನ್ ಖಾನ್ ಜತೆಗೆ ನಟಿಸಿರುವ ʼಸಿಕಂದರ್ʼ ರಿಲೀಸ್ ಆಗಲಿದೆ. ಇದರ ಜತೆಗೆ ತಮಿಳು-ತೆಲುಗಿನಲ್ಲಿ ತಯಾರಾಗುತ್ತಿರುವ, ಧನುಷ್ (Dhanush) ಜತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳುತ್ತಿರುವ ʼಕುಬೇರʼ ಚಿತ್ರದ (Kubera Movie) ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದೆ. ಆ ಮೂಲಕ ಈ ವರ್ಷ ಮತ್ತೆ ರಶ್ಮಿಕಾ ಹವಾ ಮುಂದುವರಿಯುವ ಎಲ್ಲ ಸಾಧ್ಯತೆ ದಟ್ಟವಾಗಿದೆ.
ಕಾಲಿವುಡ್‌ನ ಪ್ರತಿಭಾವಂತ ನಟ ಧನುಷ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಚಿತ್ರ ʼಕುಬೇರʼ. ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಶೇಖರ್ ಕಮ್ಮುಲ (Sekhar Kammula) ಇದಕ್ಕೆ ಆ್ಯಕ್ಷನ್ ಹೇಳುತ್ತಿದ್ದಾರೆ. ಇದು ಏಕಕಾಲಕ್ಕೆ ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿದ್ದು, ಬಳಿಕ ಕನ್ನಡ, ಹಿಂದಿ, ಮಲಯಾಳಂಗೂ ಡಬ್ ಆಗಲಿದೆ. ಇದೀಗ ಚಿತ್ರತಂಡ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
Kubera releasing on 20th June ☄️ @dhanushkraja @iamnagarjuna @iamRashmika @sekharkammula @ThisIsDSP @SVCLLP @amigoscreation @jimSarbh @AsianSuniel pic.twitter.com/5YhxN7IwbQ
— Rashmika Mandanna (@iamRashmika) February 27, 2025
ʼಕುಬೇರʼ ಯಾವಾರ ತೆರೆಗೆ?
ʼಕುಬೇರʼ ಚಿತ್ರದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ನಾಗಾರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಜೂ. 20ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರತಂಡ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಇದು ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು, ಈಗಾಗಲೇ ಹೊರ ಬಂದಿರುವ ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಅವರ ಪೋಸ್ಟರ್, ಟೀಸರ್ ಗಮನ ಸೆಳೆದಿದೆ. ಸದ್ಯ ʼಕುಬೇರʼ ಚಿತ್ರವು ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Sikandar Teaser Out: ಸಲ್ಮಾನ್-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರದ ಟೀಸರ್ ಔಟ್
ಡಿಜಿಟಲ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ?
ಮೂಲಗಳ ಪ್ರಕಾರ ಈಗಾಗಲೇ ಚಿತ್ರದ ಡಿಜಿಟಲ್ ಹಕ್ಕೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಧನುಷ್ ಅವರ ವೃತ್ತಿ ಜೀವನದಲ್ಲೇ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಚಿತ್ರ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಅಮೆಜಾನ್ ಪ್ರೈಂ ವಿಡಿಯೊ ಒಟಿಟಿ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.
ಸದ್ಯ ʼಕುಬೇರʼ ಟೈಟಲ್ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದೆ. ಈ ಟೈಟಲ್ ತಮ್ಮದು ಎಂದು ತೆಲುಗು ನಿರ್ಮಾಪಕ ಕರಿಂಕೊಂಡ ನರೇಂದರ್ ವಾದಿಸಿದ್ದಾರೆ. ಈ ಬಗ್ಗೆ ಶೇಖರ್ ಕಮ್ಮುಲ ವಿರುದ್ಧ ದೂರು ನೀಡಿದ್ದಾರೆ. ʼಕುಬೇರʼ ಹೆಸರನ್ನು ತಾವು 2023ರಲ್ಲಿಯೇ ನೋಂದಣಿ ಮಾಡಿದ್ದು, ಚಿತ್ರದ ಶೂಟಿಂಗ್ ಕೂಡ ಆರಂಭಿಸಲಾಗಿದೆ. ಇದೀಗ ಶೇಖರ್ ಕಮ್ಮುಲ ಟೈಟಲ್ ಬದಲಾಯಿಸಬೇಕು ಇಲ್ಲವೇ ಪರಿಹಾರ ನೀಡಬೇಕು ಎಂದು ವಾದಿಸಿದ್ದಾರೆ. ಜತೆಗೆ ತೆಲುಗು ಫಿಲ್ಮ್ ಚೇಂಬರ್ ಹಸ್ತಕ್ಷೇಪ ಮಾಡಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಈ ಬಗ್ಗೆ ʼಕುಬೇರʼ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.