ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Laalo – Krishna Sada Sahaayate: ಬಜೆಟ್‌ 50 ಲಕ್ಷ ರೂ., ಕಲೆಕ್ಷನ್‌ 79 ಕೋಟಿ ರೂ.! ಈ ವರ್ಷ ಇಂಡಿಯನ್‌ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ ಸಿನಿಮಾವಿದು!

Most Profitable Indian Film 2025: ಗುಜರಾತಿ ಸಿನಿಮಾ ʼಲಾಲೂ: ಕೃಷ್ಣ ಸದಾ ಸಹಾಯತೆ' (Laalo – Krishna Sada Sahaayate) ಭಾರತದ ಅತ್ಯಂತ ಹೆಚ್ಚು ಲಾಭದಾಯಕ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವು ಹಾಕಿದ ಬಂಡವಾಳಕ್ಕಿಂತ 160 ಪಟ್ಟು ಲಾಭ ತಂದುಕೊಟ್ಟಿದೆ.

2025ರಲ್ಲಿ ಭಾರತದಲ್ಲಿ ದೊಡ್ಡ ಗೆಲುವು ಪಡೆದ ಸಿನಿಮಾಗಳ್ಯಾವುವು ಎಂದರೆ, ಕಾಂತಾರ ಚಾಪ್ಟರ್‌ 1, ಛಾವಾ, ಸೈಯಾರ ಮುಂತಾದ ಸಿನಿಮಾಗಳ ಹೆಸರುಗಳನ್ನೇ ನಾವು ಹೇಳುತ್ತೇವೆ. ಆದರೆ ಇಲ್ಲೊಂದು ಸಿನಿಮಾ ಸದ್ದಿಲ್ಲದೇ ದೊಡ್ಡ ಗೆಲುವು ಕಂಡಿದೆ. ಲಾಭದ ಪ್ರಮಾಣ ನೋಡಿದರೆ, ಕಾಂತಾರ, ಛಾವಾಗಿಂತ ಈ ಸಿನಿಮಾವೇ ದೊಡ್ಡದು! ಅಷ್ಟಕ್ಕೂ ಯಾವುದು ಆ ಸಿನಿಮಾ? ʻಲಾಲೂ – ಕೃಷ್ಣ ಸದಾ ಸಹಾಯತೆʼ!

ಯಾವುದಪ್ಪ ಈ ಸಿನಿಮಾ? ಇದರ ಹೆಸರನ್ನೇ ನಾವು ಕೇಳಿಲ್ಲವಲ್ಲ ಎಂದುಕೊಳ್ಳುಬಹುದು. ಇದು ಗುಜರಾತಿ ಸಿನಿಮಾ. ಅಕ್ಟೋಬರ್‌ 10ರಂದು ತೆರೆಕಂಡಿದ್ದ ಈ ಸಿನಿಮಾವು ಈವರೆಗೂ ಗಳಿಸಿರುವುದು ಬರೋಬ್ಬರಿ 79 ಕೋಟಿ ರೂ.! ಅರೇ, ಕಾಂತಾರ ಚಾಪ್ಟರ್‌ 1 ಸಿನಿಮಾವು 900 ಕೋಟಿ ರೂ. ವರೆಗೂ ಗಳಿಕೆ ಮಾಡಿದೆ. ಅದ್ಹೇಗೆ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾ ಗೆಲುವು ದೊಡ್ಡದಾಗುತ್ತದೆ ಎನ್ನುತ್ತೀರಾ? ಅದಕ್ಕೂ ಉತ್ತರ ಇಲ್ಲಿದೆ. ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾಕ್ಕೆ ಖರ್ಚಾಗಿರುವುದು ಬರೀ 50 ಲಕ್ಷ ರೂ.ಗಳು ಮಾತ್ರ. ಕಾಂತಾರ 1 ಚಿತ್ರದ ಬಜೆಟ್‌ 100 ಕೋಟಿ ಮೇಲಿದೆ!

Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್‌ 1! ಕಾಂತಾರ, ಕೆಜಿಎಫ್‌ ದಾಖಲೆ ಉಡೀಸ್

ಹಲವು ಪಟ್ಟು ಲಾಭ

ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾವು ಹಾಕಿದ ಬಂಡವಾಳಕ್ಕೆ 150 ಪಟ್ಟು ಲಾಭವನ್ನು ತಂದುಕೊಟ್ಟಿದೆ. ಆದರೆ ಕಾಂತಾರ 1 ಸಿನಿಮಾವು ಹಾಕಿದ ಬಂಡವಾಳಕ್ಕೆ 7-8 ಪಟ್ಟು ಹಣವನ್ನು ಹಿಂಗಿರುಗಿಸಿದೆ. ಛಾವಾ 9 ಪಟ್ಟು ಲಾಭ ತಂದುಕೊಟ್ಟರೆ, ಸೈಯಾರ ಚಿತ್ರವು 13 ಪಟ್ಟು ಲಾಭ ಕಂಡಿದೆ. ಹಾಗಾಗಿ, 160 ಪಟ್ಟು ಲಾಭ ತಂದುಕೊಂಡ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾವನ್ನು 2025ರ most profitable indian film ಎಂದು ಕರೆಯಲಾಗುತ್ತಿದೆ. ಸದ್ಯ ಭಾರತದಲ್ಲೇ ಈ ಸಿನಿಮಾವು 79 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ವಿದೇಶದಲ್ಲಿನ ಗಳಿಕೆಯನ್ನು ಸೇರಿಸಿದರೆ, ಕಲೆಕ್ಷನ್‌ ಪ್ರಮಾಣ ಇನ್ನೂ ಜಾಸ್ತಿ ಆಗಲಿದೆ. ಇನ್ನು, ಅತಿ ಹೆಚ್ಚು ಗಳಿಕೆ ಮಾಡಿದ ಗುಜರಾತಿ ಚಿತ್ರ ಎಂಬ ವಿಶೇಷಣಕ್ಕೂ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾ ಪಾತ್ರವಾಗಿದೆ. ಮೊದಲ ವಾರ ಬರೀ 33 ಲಕ್ಷ ರೂ. ಗಳಿಸಿದ್ದ ಈ ಸಿನಿಮಾವೀಗ 49 ದಿನಗಳಿಗೆ 79.10 ಕೋಟಿ ರೂ. ಬಾಚಿಕೊಂಡಿದೆ.

Diljit Dosanjh: ಕಾಂತಾರ ಖ್ಯಾತಿಯ ಗಾಯಕನಿಗೆ ಮತ್ತೆ ಜೀವ ಬೆದರಿಕೆ; ಮತ್ತೆ ಮತ್ತೆ ಯಾಕ್‌ ಹೀಗಾಗ್ತಿದೆ?

ಈ ಚಿತ್ರದ ಕಥೆ ಏನು?

ಫಾರ್ಮ್‌ಹೌಸ್‌ನಲ್ಲಿ ಸಿಕ್ಕಿಬಿದ್ದ ರಿಕ್ಷಾ ಚಾಲಕನೊಬ್ಬನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇದೊಂದು ಡಿವೋಷನಲ್‌ ಕಥಾಹಂದರವುಳ್ಳ ಸಿನಿಮಾವಾಗಿದ್ದು, ಶ್ರೀಕೃಷ್ಣನು ಹೇಗೆ ಆ ಚಾಲಕನಿಗೆ ಸಹಾಯ ಮಾಡುತ್ತಾನೆ ಎಂಬುದನ್ನು ಫ್ಯಾಂಟಸಿಯಾಗಿ ತೋರಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾ ತೆರೆಕಂಡು 50 ದಿನಗಳಾಗಿದ್ದು, ಸದ್ಯ ಬೆಂಗಳೂರಿನಲ್ಲಿ 5 ಶೋಗಳು ಸಿಕ್ಕಿವೆ.

ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾದ ಕುರಿತ ಪೋಸ್ಟ್‌



ಯಾರೆಲ್ಲಾ ನಟಿಸಿದ್ದಾರೆ?

ರೀವಾ ರಾಚ್, ಶ್ರುಹಾದ್ ಗೋಸ್ವಾಮಿ ಕರಣ್ ಜೋಶಿ, ಮಿಶ್ಟಿ ಕಡೇಚಾ, ಅಂಶು ಜೋಶಿ ಕಿನ್ನಾಳ್ ನಾಯಕ್, ಪಾರುಲ್ ರಾಜ್ಯಗುರು, ಜಯದೀಪ್ ತಿಮಾನಿಯಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಅಂಕಿತ್ ಸಖಿಯಾ ಅವರು ನಿರ್ದೇಶನ ಮಾಡಿದ್ದಾರೆ. ಮಾನಸಿ ಪರೇಖ್, ಪಾರ್ಥಿವ್ ಗೋಹಿಲ್, ಅಜಯ್ ಬಲವಂತ ಪದರಿಯಾ ಅವರು ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಆರಂಭದಲ್ಲಿ ಈ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್‌ ಇರಲಿಲ್ಲ. ದಿನ ಕಳೆದಂತೆ ಜನರನ್ನು ಸೆಳೆಯಲು ಆರಂಭಿಸಿತು.