ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ʻಚಿನ್ನಾರಿ ಮುತ್ತʼ ವಿಜಯ ರಾಘವೇಂದ್ರ ಅವರಿಗೆ ಮೇ 26ರಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಅಂಗವಾಗಿ ಅವರು ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಮಹಾನ್’ ಚಿತ್ರತಂಡವು ಕೆಲ ವಿಶೇಷ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಭಿನ್ನವಾಗಿ ಜನ್ಮದಿನದ ಶುಭಾಶಯ ಕೋರಿದೆ. ಈ ಸ್ಪೆಷಲ್ ಗಿಫ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಉದ್ಯಮಿ ಪ್ರಕಾಶ್ ಬುದ್ದೂರು ಅವರು ಯಾವುದೇ ರಾಜಿ ಇಲ್ಲದೆ ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ‘ನಾಯಕ’, ‘ರೋಮಿಯೋ’, ‘ಅರ್ಜುನ’ದಂತಹ ವಿಭಿನ್ನ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿರುವ ಖ್ಯಾತ ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶನದ 11ನೇ ಚಿತ್ರವಿದು.
ಸದಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್‌ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಪಿ.ಸಿ. ಶೇಖರ್, ಈ ಬಾರಿ ಸಂಪೂರ್ಣ ಭಿನ್ನವಾಗಿ ದೇಶದ ಬೆನ್ನೆಲುಬಾದ ರೈತರ ಕುರಿತಾದ ಸೂಕ್ಷ್ಮ ಕಥಾಹಂದರವನ್ನು ಕೈಗೆತ್ತಿಕೊಂಡಿದ್ದಾರೆ. ನಟ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಹೈದನಾಗಿ, ಕಷ್ಟಜೀವಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
"ನಾನು ಈ ಕಥೆ ಬರೆಯುವಾಗಲೇ, ಇದನ್ನು ವಿಜಯ ರಾಘವೇಂದ್ರ ಅವರೇ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡೆ ಬರೆದೆ. ನಂತರ ಅವರಿಗೆ ಕಥೆ ಹೇಳಿದಾಗ, ಸಂತೋಷದಿಂದ ನಟಿಸಲು ಒಪ್ಪಿಕೊಂಡರು. ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾ ನೋಡಿ ಹೊರಬಂದ ಮೇಲೂ ಅವರ ಪಾತ್ರ ಎಲ್ಲರ ಮನದಲ್ಲೂ ಉಳಿಯುತ್ತದೆ" ಎಂಬುದು ನಿರ್ದೇಶಕ ಪಿ ಸಿ ಶೇಖರ್ ಮಾತು.
ಈ ಸಿನಿಮಾದಲ್ಲಿ ಮಹಾನ್ ಎಂದರೆ ರೈತ. ಇದೊಂದು ರೈತರ ಬದುಕಿನ ಬವಣೆಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಚಿತ್ರವಂತೆ. ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೊ, ಅದೇ ರೀತಿ ರೈತರು ಕೂಡ ಬಹುಮುಖ್ಯ ಎಂಬ ಸಂದೇಶವನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆಯಂತೆ. ರೈತರ ಪರ ಧ್ವನಿ ಎತ್ತುವ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮಹಾನ್‌ನಲ್ಲಿ ಕಿರಣ್ ಶ್ರೀನಿವಾಸ್
ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ಕಿರಣ್ ಶ್ರೀನಿವಾಸ್ ಅಭಿನಯಿಸಿದ್ದಾರೆ. "ನಿರ್ದೇಶಕ ಪಿ.ಸಿ. ಶೇಖರ್ ಅವರ ಮೇಕಿಂಗ್ ಶೈಲಿ ನನಗೆ ಮೊದಲಿನಿಂದಲೂ ಇಷ್ಟ. ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರವನ್ನು ವಿವರಿಸಿದಾಗಲೇ ಅದು ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು. ನನ್ನ ವೃತ್ತಿಜೀವನದಲ್ಲೇ ನಾನು ಈವರೆಗೆ ಮಾಡಿರದ ವಿಭಿನ್ನವಾದ, ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ಅದ್ಭುತ ಪಾತ್ರವನ್ನು ನಿರ್ವಹಿಸಿದ್ದೇನೆ. ಇನ್ನು ಕೆಲವು ವರ್ಷಗಳ ಹಿಂದೆ ವಿಜಯ್ ರಾಘವೇಂದ್ರ ಅವರು ಜಡ್ಜ್ ಆಗಿದ್ದ ರಿಯಾಲಿಟಿ ಶೋ ಒಂದರಲ್ಲಿ ನಾನು ನಿರೂಪಕನಾಗಿದ್ದೆ. ಆಗ ಅವರಿಂದ ಸಿಕ್ಕ ಪ್ರೀತಿ-ಪ್ರೋತ್ಸಾಹ ದೊಡ್ಡದು. ಈಗ ಅವರ ಜೊತೆಗೇ ಸ್ಕ್ರೀನ್ ಶೇರ್ ಮಾಡಿರುವುದು ಹೆಮ್ಮೆಯೆನಿಸುತ್ತಿದೆ" ಎಂದು ಕಿರಣ್ ಶ್ರೀನಿವಾಸ್ ಹೇಳಿಕೊಂಡಿದ್ದಾರೆ.
ಆರಂಭದಿಂದಲೂ ವಿಭಿನ್ನ ಪೋಸ್ಟರ್‌ಗಳ ಮೂಲಕ ಸೌಂಡ್ ಮಾಡುತ್ತಿರುವ ಈ ಚಿತ್ರದ ತಾರಾಗಣದಲ್ಲಿ ವಿಜಯ ರಾಘವೇಂದ್ರ ಮತ್ತು ಕಿರಣ್ ಶ್ರೀನಿವಾಸ್ ಜೊತೆಗೆ ರಾಧಿಕಾ ನಾರಾಯಣ್, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಹಾಸ್ಯನಟ ಮಿತ್ರ, ರಂಗಾಯಣ ರಘು ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ.