ಉತ್ತರ ಕರ್ನಾಟಕ ಸೊಗಡಿನ ʻರಾಕ್ಷಸʼ ವೆಬ್ ಸರಣಿಯ ಟ್ರೇಲರ್ ರಿಲೀಸ್; ಸವದತ್ತಿಯ ಕಥೆ ಹೇಳೋಕೆ ಬಂದ್ರು ವಿಜಯ್ ರಾಘವೇಂದ್ರ
ʻರಾಕ್ಷಸʼ ಎಂಬ ವೆಬ್ ಸರಣಿಯ ಮೂಲಕ ನಟ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ಓಟಿಟಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಸವದತ್ತಿ ಎಲ್ಲಮ್ಮನ ಗುಡಿಯ ಮಲಪ್ರಭಾ ನದಿ ದಂಡೆಯ ಸುತ್ತ ನಡೆಯುವ ನಿಗೂಢ ಮೊಸಳೆ ದಾಳಿಗಳ ತನಿಖೆಯ ಕಥೆಯೇ ಈ 'ರಾಕ್ಷಸ' ವೆಬ್ ಸರಣಿ. ತರುಣ್ ಸುಧೀರ್ ನಿರ್ಮಾಣದದಲ್ಲಿ ಈ ಕ್ರೈಮ್ ಥ್ರಿಲ್ಲರ್ ಸರಣಿ ನಿರ್ಮಾಣಗೊಂಡಿದೆ.
-
ʻಚಿನ್ನಾರಿಮುತ್ತʼ ವಿಜಯ್ ರಾಘವೇಂದ್ರ ಅವರು ವೆಬ್ ಸರಣಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಹೌದು, ʻರಾಕ್ಷಸʼ ಎಂಬ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದು, ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದೆ. ಇದೇ ಫೆಬ್ರವರಿ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿರುವ ಈ ವೆಬ್ ಸರಣಿಯಲ್ಲಿ ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಾಗುತ್ತಿದೆ.
ರಾಕ್ಷಸ ಕಥೆ ಏನು?
ಈ ಟ್ರೈಲರ್ ಸಬ್ ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರವನ್ನು ಪರಿಚಯಿಸುತ್ತದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನುಮಪ್ಪ ಬರುತ್ತಾನೆ. ಈ ಗೋಜಲಾದ ಪ್ರಕರಣಗಳ ಚಕ್ರವ್ಯೂಹವನ್ನು ಭೇದಿಸಲು ಬರುವ ಹನುಮಪ್ಪನಿಗೆ ಆಗುವ ತಳಮಳ, ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಆಕಸ್ಮಿಕ ಅವಘಡವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ? ಇವೆಲ್ಲವನ್ನೂ ಕಾದು ನೋಡಬೇಕಿದೆ.
ಹೊಸ ಕೇಸ್‌ನೊಂದಿಗೆ ಅಖಾಡಕ್ಕಿಳಿದ ವಿಜಯ್ ರಾಘವೇಂದ್ರ; ಈ ಬಾರಿ ಯಾರೆಲ್ಲಾ ಸಾಥ್ ಕೊಟ್ರು ನೋಡಿ
ತರುಣ್ ಸುಧೀರ್ ನಿರ್ಮಾಣದ ವೆಬ್ ಸರಣಿ
ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ಈ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ, ಮಯೂರಿ ಕ್ಯಾತರಿ, ಅವಿನಾಶ್, ಮಾಳವಿಕಾ, ಅಪ್ಪಣ್ಣ, ಅಭಿಜಿತ್ ಮುಂತಾದವರು ನಟಿಸಿದ್ದಾರೆ. ಸುಹಾನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ತರುಣ್ ಸುಧೀರ್ ಕ್ರಿಯೇಟಿವ್ಸ್ ಲಾಂಛನದಲ್ಲಿ ಈ ವೆಬ್ ಸರಣಿಯು ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಅವರ ಮೊದಲ ವೆಬ್ ಸರಣಿಯಾಗಿರುತ್ತದೆ.
ವಿಜಯ್ ರಾಘವೇಂದ್ರ ಹೇಳಿದ್ದೇನು?
"ರಾಕ್ಷಸ ಒಂದು ವಿಶೇಷವಾದ ಕಥೆಯಾಗಿದೆ. ಅಷ್ಟು ಸುಲಭವಾಗಿ ಇದು ತನ್ನ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ನನಗೆ ಈ ಕಥೆಯ ಬಗ್ಗೆ ಇಷ್ಟವಾದ ಅಂಶಗಳೆಂದರೆ, ಇದರಲ್ಲಿರುವ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು. ಇವೆಲ್ಲವೂ ಹೇಗೆ ಹನುಮಪ್ಪನ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಈಗಾಗಲೇ ಈ ರೋಚಕ ಕಥೆಯ ಟ್ರೇಲರ್ ಬಿಡುಗಡೆ ಆಗಿದೆ" ಎಂದು ವಿಜಯ್ ರಾಘವೇಂದ್ರ ಹೇಳಿದರು.
"ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಅದೇ ನಿಟ್ಟಿನಲ್ಲಿ 'ರಾಕ್ಷಸ' ನನ್ನ ಗಮನಕ್ಕೆ ಬಂತು. ಈ ಕಥೆಯು ಉತ್ತರ ಕರ್ನಾಟಕದ ಛಾಯೆಯನ್ನು ಹೊಂದಿರುತ್ತದೆ. ಇದು ಎಲ್ಲರ ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಕಥೆ ಬಿಡಿಸಲಿದೆ" ಎನ್ನುತ್ತಾರೆ ತರುಣ್ ಸುಧೀರ್.