ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಟಾಕ್ಸಿಕ್‌ʼ ಬಳಿಕ ಕೆವಿಎನ್‌ ಪ್ರೊಡಕ್ಷನ್ಸ್‌ನಿಂದ ಹೊಸ ಸಿನಿಮಾ ಘೋಷಣೆ; 'ಮಂಗಳ ಗೌರಿ' ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ – ರುಕ್ಮಿಣಿ ವಸಂತ್!

Mangala Gowri Movie: ಕೆವಿಎನ್ ಪ್ರೊಡಕ್ಷನ್ಸ್ ಮತ್ತು ದಾಕ್ಷಾಯಣಿ ಟಾಕೀಸ್ ಜಂಟಿ ನಿರ್ಮಾಣದ ʻಮಂಗಳ ಗೌರಿʼ ಚಿತ್ರದಲ್ಲಿ ನಟಿ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಹುಲ್ ಪಿಕೆ ನಿರ್ದೇಶನದ ಈ ಸಿನಿಮಾದಲ್ಲಿ ರುಕ್ಮಿಣಿ ಖಾಕಿ ತೊಟ್ಟು ಕಾನ್‌ಸ್ಟೆಬಲ್ ಪಾತ್ರದಲ್ಲಿ ಮಿಂಚುತ್ತಿದ್ದು, ಫಸ್ಟ್‌ ಲುಕ್‌ ಎಲ್ಲರ ಗಮನಸೆಳೆಯುತ್ತಿದೆ.

‘ಮಂಗಳ ಗೌರಿ’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ - ರುಕ್ಮಿಣಿ ವಸಂತ್

-

Avinash GR
Avinash GR Sep 14, 2026 9:48 PM

ನಟಿ ಮಾಲಾಶ್ರೀ ಮತ್ತು ʻಟಾಕ್ಸಿಕ್‌ʼ ಖ್ಯಾತಿಯ ರುಕ್ಮಿಣಿ ವಸಂತ್ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಎರಡು ತಲೆಮಾರಿನ ಖ್ಯಾತ ನಟಿಯರನ್ನು ಒಂದೇ ಫ್ರೇಮ್‌ನಲ್ಲಿ ಒಗ್ಗೂಡಿಸಿರುವ ‘ಮಂಗಳ ಗೌರಿ’ ಎಂಬ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದೆ. ರಾಹುಲ್ ಪಿಕೆ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಕಂಟೆಂಟ್ ಆಧಾರಿತ ಹಾಗೂ ಅದ್ಧೂರಿ ಚಿತ್ರಗಳಿಗೆ ಹೆಸರಾದ ಎರಡು ಪ್ರತಿಷ್ಠಿತ ಸಂಸ್ಥೆಗಳಾದ ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ದಾಕ್ಷಾಯಣಿ ಟಾಕೀಸ್’ ಜಂಟಿಯಾಗಿ ನಿರ್ಮಿಸುತ್ತಿವೆ.

ʻಮಂಗಳಗೌರಿʼ ಚಿತ್ರಕ್ಕೆ ಕೆವಿಎನ್‌ ಬಂಡವಾಳ

ವೆಂಕಟ್ ಕೆ. ನಾರಾಯಣ ನೇತೃತ್ವದ ಕೆವಿಎನ್ ಪ್ರೊಡಕ್ಷನ್ಸ್, ಭಾರತೀಯ ಚಿತ್ರರಂಗದಲ್ಲಿ ಬೃಹತ್ ಬಜೆಟ್‌ನ ಪ್ಯಾನ್-ಇಂಡಿಯಾ ಚಿತ್ರಗಳ ಮೂಲಕ ಮುಂಚೂಣಿಯಲ್ಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್', 'ಜನ ನಾಯಗನ್', ವಿಮರ್ಶಕರ ಪ್ರಶಂಸೆಗೆ ಪಾತ್ರವಾದ 'ಬಾಲನ್ – ದಿ ಬಾಯ್' ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ 'ಕಾಕ' ಸಿನಿಮಾಗಳೊಂದಿಗೆ ಗುರುತಿಸಿಕೊಂಡಿರುವ ಸಂಸ್ಥೆಯಿದು.

ಇತ್ತ ಖ್ಯಾತ ಬರಹಗಾರ-ನಿರ್ದೇಶಕ ಹೇಮಂತ್ ಎಂ. ರಾವ್ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ‘ದಾಕ್ಷಾಯಣಿ ಟಾಕೀಸ್’, ಈಗಾಗಲೇ ‘ಅಜ್ಞಾತವಾಸಿ’ ಸೇರಿದಂತೆ ಹಲವು ವಿಶಿಷ್ಟ ಕಥಾಹಂದರದ ಚಿತ್ರಗಳನ್ನು ನಿರ್ಮಿಸಿ ಗಮನಸೆಳೆದಿದೆ.

ಕೆವಿಎನ್ ಸಂಸ್ಥೆಯ ಅದ್ದೂರಿತನ ಮತ್ತು ದಾಕ್ಷಾಯಣಿ ಟಾಕೀಸ್‌ನ ಗಟ್ಟಿಯಾದ ಕಂಟೆಂಟ್ ಆಧಾರಿತ ನಿಲುವು ಒಂದಾಗಿ, ಹೊಸ ಪ್ರತಿಭೆಗಳು ಹಾಗೂ ವಿಭಿನ್ನ ಕಥೆಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ‘ಮಂಗಳ ಗೌರಿ’ ಚಿತ್ರದ ಮೂಲಕ ಈ ಚೊಚ್ಚಲ ಜಂಟಿ ಪಾಲುದಾರಿಕೆಗೆ ಮುನ್ನುಡಿ ಬರೆದಿವೆ.

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ ; ಶಾಕಿಂಗ್‌ ವಿಚಾರ ರಿವೀಲ್‌!

ಪೊಲೀಸ್‌ ಕಾನ್‌ಸ್ಟೆಬಲ್‌ ಗೌರಿ ಪಾತ್ರದಲ್ಲಿ ರುಕ್ಮಿಣಿ

ಈ ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಇದುವರೆಗೂ ಕಂಡಿರದ ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದು, ಇಂದಿನ ಯುವ ಪೀಳಿಗೆಗೆ ಅವರ ವಿಭಿನ್ನ ಆಯಾಮದ ನಟನಾ ಕೌಶಲ ಅನಾವರಣಗೊಳ್ಳಲಿದೆ. ಮತ್ತೊಂದೆಡೆ ಸಹಜ ಅಭಿನಯದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರುಕ್ಮಿಣಿ ವಸಂತ್ ಪೊಲೀಸ್‌ ಕಾನ್‌ಸ್ಟೆಬಲ್‌ ಗೌರಿ ಪಾತ್ರದಲ್ಲಿ ಮಿಂಚಲಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಂತರ ಹೇಮಂತ್ ಎಂ. ರಾವ್ ಅವರೊಂದಿಗೆ ಹಾಗೂ ‘ಟಾಕ್ಸಿಕ್’ ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ರುಕ್ಮಿಣಿ ವಸಂತ್ ಅವರಿಗೆ ಇದು ಸತತ ಎರಡನೇ ಸಿನಿಮಾವಾಗಿದೆ.

ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸುತ್ತಿದ್ದು, ‘ತುಳಸಿ’ ಮ್ಯೂಸಿಕ್ ವಿಡಿಯೋ ಖ್ಯಾತಿಯ ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಖ್ಯಾತ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಬಿರುಸಿನಿಂದ ಸಾಗುತ್ತಿರುವ ‘ಮಂಗಳ ಗೌರಿ’ ಚಿತ್ರೀಕರಣವು ಅಂತಿಮ ಹಂತಕ್ಕೆ ತಲುಪಿದ್ದು, ಚಿತ್ರತಂಡ ಸದ್ಯದಲ್ಲೇ ಅಧಿಕೃತ ಟೀಸರ್ ಹಾಗೂ ರಿಲೀಸ್ ದಿನಾಂಕದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸುತ್ತಿದೆ.