ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಷ್ಣುವರ್ಧನ್‌ ಚಿತ್ರದ ಹಾಡಿನ ಮೂಲಕ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ ʼಕಾಂತಾರ'ದ ದೊರೆ ಮಲಯಾಳಂ ನಟ ಜಯರಾಮ್‌

Actor Jayaram: ʼಕಾಂತಾರ ಚಾಪ್ಟರ್‌ 1' ಚಿತ್ರದ ಮೂಲಕ ಗಮನ ಸೆಳೆದ ಮಲಯಾಳಂನ ಹಿರಿಯ ನಟ ಜಯರಾಮ್‌ ಇದೀಗ ಕನ್ನಡದ ಹಾಡು ಹಾಡಿರುವ ವಿಡಿಯೊ ವೈರಲ್‌ ಆಗಿದೆ. ವಿಷ್ಣುವರ್ಧನ್‌ ನಟನೆಯ ʼಬಂಧನʼ ಚಿತ್ರದ ʼನೂರೊಂದು ನೆನಪುʼ ಹಾಡನ್ನು ವಿವಿಧ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಹಾಡಿದ್ದಾರೆ.

ಮುಂಬೈ, ಅ. 14: ಭಾರಿ ಕುತೂಹಲದೊಂದಿಗೆ ಪ್ಯಾನ್‌ ವರ್ಲ್ಡ್‌ ಚಿತ್ರವಾಗಿ, ವಿವಿಧ ಭಾಷೆಗಳಲ್ಲಿ ತೆರೆಗೆ ಬಂದ ರಿಷಬ್‌ ಶೆಟ್ಟಿ (Rishab Shetty)-ಹೊಂಬಾಳೆ ಫಿಲ್ಮ್ಸ್‌ (Hombale Films) ಕಾಂಬಿನೇಷನ್‌ನ ʼಕಾಂತಾರ ಚಾಪ್ಟರ್‌ 1' (Kantara: Chapter 1) ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಜಾಗತಿಕಾಗಿ 600 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ರಿಲೀಸ್‌ ಆಗಿ 10 ದಿನ ಕಳೆದಿದ್ದರೂ ಗಳಿಕೆ ಕೊಂಚವೂ ತಗ್ಗಿಲ್ಲ ಎನ್ನುವುದು ವಿಶೇಷ. ರಿಷಬ್‌ ಶೆಟ್ಟಿ ಸೃಷ್ಟಿಸಿದ ಹೊಸದೊಂದು ಜಗತ್ತಿಗೆ ಪ್ರೇಕ್ಷಕರು ಫಿದಾ ಆಗಿದ್ದು, ತೆರೆಮೇಲೆ ಮೂಡಿರುವ ದೃಶ್ಯ ವೈಭವಕ್ಕೆ ಮನ ಸೋತಿದ್ದಾರೆ. ಚಿತ್ರದಲ್ಲಿ ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಗುಲ್ಶನ್‌ ದೇವಯ್ಯ ಜತೆಗೆ ಮಲಯಾಳಂ ನಟ ಜಯರಾಮ್‌ (Actor Jayaram) ಪಾತ್ರವೂ ಗಮನ ಸೆಳೆದಿದೆ. ಇದೀಗ ಜಯರಾಮ್‌ ಕಾರ್ಯಕ್ರಮವೊಂದರಲ್ಲಿ, ಹಲವು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಕನ್ನಡದ ಹಾಡೊಂದನ್ನು ಹಾಡಿದ್ದಾರೆ. ಜತೆಗೆ ತಮ್ಮ ಚಿತ್ರವನ್ನು ಬೆಂಬಲಿಸಿದ ಕನ್ನಡಿಗರಿಗೆ, ಪ್ರತಿಯೊಬ್ಬರಿಗೂ ಪ್ರೀತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.

ಸುಮಾರು 4ನೇ ಶತಮಾನದಲ್ಲಿ ನಡೆಯುವ ಕಥೆ ʼಕಾಂತಾರ ಚಾಪ್ಟರ್‌ 1' ಚಿತ್ರದಲ್ಲಿದೆ. ಸಾಮಂತ ರಾಜ ಮನೆತನ ಮತ್ತು ಬುಡಕಟ್ಟು ಜನಾಂಗದ ಸಂಘರ್ಷವೇ ಇದರ ಮುಖ್ಯ ತಿರುಳು. ಕರಾವಳಿ ಪ್ರದೇಶದವನ್ನು ಆಳುತ್ತಿದ್ದ ಬಾಂಗ್ರಾ ಮನೆತನದ ದೊರೆ ರಾಜಶೇಖರನಾಗಿ ಜಯರಾಮ್‌ ಕಾಣಿಸಿಕೊಂಡಿದ್ದಾರೆ. ಸುಮಾರು 35 ವರ್ಷಗಳಿಂದಲೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಪಾತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ರೋಮಾಂಚಿತರಾಗಿದ್ದು, ಪ್ರೀತಿ ತೋರಿದ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಲಯಾಳಂ ನಟ ಜಯರಾಮ್‌ ಧ್ವನಿಯಲ್ಲಿ ಮೂಡಿಬಂದ ಕನ್ನಡದ ಹಾಡು:



ಈ ಸುದ್ದಿಯನ್ನೂ ಓದಿ: Actor Jayaram: ʼಕಾಂತಾರʼದ ದೊರೆ ರಾಜಶೇಖರ ಪಾತ್ರದಲ್ಲಿ ಮಿಂಚಿದ ಜಯರಾಮ್‌ ಹಿನ್ನೆಲೆ ಏನು? ಈ ಹಿಂದೆಯೂ ಕನ್ನಡ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ಸ್ಟಾರ್‌

ಇತ್ತೀಚೆಗೆ ಮುಂಬೈಯಲ್ಲಿ ಕಲ್ಯಾಣ್‌ ಜುವೆಲ್ಲರ್ಸ್‌ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಇದರಲ್ಲಿ ಬಾಲಿವುಡ್‌ ಸೇರಿದಂತೆ ವಿವಿಧ ಚಿತ್ರರಂಗಗಳ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಈ ವೇಳೆ ಜಯರಾಮ್‌ ವೇದಿಕೆ ಮೇಲೆ ವಿಷ್ಣುವರ್ಧನ್‌-ಸುಹಾಸಿನಿ ಜೋಡಿಯ ʼಬಂಧನʼ ಚಿತ್ರದ ʼನೂರೊಂದು ನೆನಪುʼ ಹಾಡನ್ನು ಪ್ರಸ್ತುತ ಪಡಿಸಿದರು.

ಚಿತ್ರದಲ್ಲಿ ಅವಕಾಶವನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ ಮಾತು ಆರಂಭಿಸಿದ ಅವರು ಬಳಿಕ ಬ್ಯೂಟಿಫುಲ್ ಕನ್ನಡ ಜನತೆ ಎಂದು ಕನ್ನಡಿಗರನ್ನು ಹೊಗಳಿದ್ದಾರೆ. ನಂತರ ʼನೂರೊಂದು ನೆನಪುʼ ಹಾಡನ್ನು ಸುಮಧುರವಾಗಿ ಹಾಡಿ ಕನ್ನಡಿಗರನ್ನು ರೋಮಾಂಚನಗೊಳಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಈ ಹಿಂದೆ ಜಯರಾಮ್‌ ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ʼರಾಜಕುಮಾರʼ ಚಿತ್ರದ ʼಬೊಂಬೆ ಹೇಳುತೈತೆʼ ಹಾಡು ಹಾಡಿದ್ದರು.

ʼಕಾಂತಾರ ಚಾಪ್ಟರ್‌ 1' ಸಿನಿಮಾದಲ್ಲಿ ಜಯರಾಮ್‌ ಪಾತ್ರಕ್ಕೆ ಸಾಕಷ್ಟು ಸ್ಕ್ರೀನ್‌ ಸ್ಪೇಸ್‌ ಸಿಕ್ಕಿದ್ದು, ಅದನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ಕೊನೆಯವರೆಗೂ ಅವರ ಪಾತ್ರ ಸಾಗುತ್ತದೆ. ಅವರ ಪಾತ್ರಕ್ಕೆ ವಿವಿಧ ಆಯಾಮಗಳಿದ್ದು, ರಾಜನಾಗಿ, ಅಸಾಹಯಕ ತಂದೆಯಾಗಿ, ಸೇಡು ತೀರಿಸಿಕೊಳ್ಳುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಲಯಾಳಂ ಜತೆಗೆ ಕನ್ನಡಿಗರೂ ಸೇರಿದಂತೆ ವಿವಿಧ ಭಾಷೆಯ ಪ್ರೇಕ್ಷಕರು ರಾಜಶೇಖರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.

1965ರಲ್ಲಿ ಜನಿಸಿದ ಜಯರಾಮ್‌ ಇದುವರೆಗೆ ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಸಂಸ್ಕೃತ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ಕಲೆಗೆ ಸಲ್ಲಿಸಿದ ಅನನ್ಯ ಕೊಡುಗೆಯನ್ನು ಗಮನಿಸಿ ಕೇಂದ್ರ ಸರ್ಕಾರ 2011ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿದೆ.