ಮಲಯಾಳಂ ʻಸ್ಟಾರ್ʼ ನಟಿ ಮಂಜು ವಾರಿಯರ್‌ರನ್ನು ಸಾರ್ವಜನಿಕವಾಗಿ ತಬ್ಬಿ ಮುತ್ತಿಕ್ಕಿದ ಅಭಿಮಾನಿ; ಮುಂದೇನಾಯಿತು ನೋಡಿ!
ಮಲಯಾಳಂ ಚಿತ್ರರಂಗದ ಸ್ಟಾರ್ ನಟಿ ಮಂಜು ವಾರಿಯರ್ ಅವರು ಪಾಲಕ್ಕಾಡ್‌ನಲ್ಲಿ ಜ್ಯುವೆಲ್ಲರಿ ಶೋರೂಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಮಹಿಳಾ ಅಭಿಮಾನಿಯೊಬ್ಬರಿಂದ ಮುಜುಗರ ಎದುರಿಸಿದ್ದಾರೆ. ವೇದಿಕೆ ಮೇಲೆ ನುಗ್ಗಿದ ಅಭಿಮಾನಿ ನಟಿ ಮಂಜು ಅವರನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತಿಕ್ಕಿದ್ದಾರೆ.
-
ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಫ್ಯಾನ್ಸ್‌ಗೆ ಇರುವ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ನೆಚ್ಚಿನ ನಟ-ನಟಿಯನ್ನು ಕಂಡೊಡನೆ ಅಭಿಮಾನಿಗಳು ಗುಂಪು ಸೇರುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಅಭಿಮಾನದ ಹೆಸರಿನಲ್ಲಿ ಕೆಲವರು ಅತಿರೇಕದ ವರ್ತನೆಯನ್ನು ತೋರುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ನಟಿಯರಿಗೆ ಮುಜುಗರ ಉಂಟು ಮಾಡುವಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿವೆ. ಇದೀಗ ನಟಿ ಮಂಜು ವಾರಿಯರ್‌ಗೆ ಅಂತಹದ್ದೊಂದು ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಹೌದು, ಈಚೆಗೆ ಪಾಲಕ್ಕಾಡ್‌ನಲ್ಲಿ ಜ್ಯುವೆಲ್ಲರಿ ಶೋರೂಮ್ ಉದ್ಘಾಟನೆಗೆ ಹೋಗಿದ್ದ ನಟಿ ಮಂಜು ವಾರಿಯರ್ ಅವರನ್ನು ಮಹಿಳಾ ಅಭಿಮಾನಿಯೊಬ್ಬರು ಬಲವಂತವಾಗಿ ಅಪ್ಪಿಕೊಂಡು ಮುತ್ತಿಕ್ಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
ಹೇಗಾಯಿತು ಈ ಘಟನೆ?
ನಟಿ ಮಂಜು ವಾರಿಯರ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಆಯೋಜಕರು ಜ್ಯುವೆಲ್ಲರಿ ಶೋರೂಮ್‌ನ ಹೊರಗಡೆ ವೇದಿಕೆಯ ಸಜ್ಜುಗೊಳಿಸಿದ್ದರು. ಅಲ್ಲಿಗೆ ಬಂದ ಮಂಜು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದೇ ವೇಳೆ ಏಕಾಏಕಿ ವೇದಿಕೆ ಮೇಲೆ ನುಗ್ಗಿದ ಮಹಿಳೆಯೊಬ್ಬರು ಮಂಜು ವಾರಿಯರ್ ಅವರಿಗೆ ಬಲವಂತವಾಗಿ ಮುತ್ತಿಕ್ಕಿದ್ದಾರೆ. ಈ ಅನಿರೀಕ್ಷಿತ ಕೃತ್ಯದಿಂದ ಸ್ಥಳದಲ್ಲಿದ್ದವರು ಮತ್ತು ಆಯೋಜಕರು ಗಾಬರಿಯಾಗಿದ್ದಾರೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಮಹಿಳೆಯನ್ನು ಎಳೆದುಕೊಂಡಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಸಿದ ಮಂಜು
ಈ ಅನಿರೀಕ್ಷಿತ ಘಟನೆ ಜರುಗುತ್ತಿದ್ದಂತೆಯೇ ಗರಂ ಆದ ಕಾರ್ಯಕ್ರಮದ ನಿರೂಪಕಿ ಮೀರಾ ನಾಯರ್, "ನಮ್ಮ ಆಹ್ವಾನದ ಮೇರೆಗೆ ಬಂದ ಅತಿಥಿಗಳೊಂದಿಗೆ ಈ ರೀತಿ ವರ್ತಿಸುವುದು ಸರಿಯಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಮಂಜು ವಾರಿಯರ್ ಮಾತ್ರ ಇಡೀ ಘಟನೆಯ ಉದ್ದಕ್ಕೂ ಶಾಂತಚಿತ್ತರಾಗಿದ್ದರು. ತಮ್ಮ ವೈಯಕ್ತಿಕ ಗೌಪ್ಯತೆಗೆ ಧಕ್ಕೆಯಾಗಿದ್ದರೂ, ಆ ಅಭಿಮಾನಿಯನ್ನು ಸ್ವತಃ ಮಂಜು ಕೈಹಿಡಿದು ಸಮಾಧಾನಪಡಿಸಿದರು. ಬಳಿಕ ಇತರೆ ಫ್ಯಾನ್ಸ್‌ಗೆ ಸೆಲ್ಫಿಯನ್ನು ನೀಡಿದರು. ಇನ್ನು, ಮುತ್ತು ಕೊಟ್ಟ ಆ ಮಹಿಳೆಯು, "ನನಗೆ ಮಂಜು ಅಕ್ಕ ಎಂದರೆ ತುಂಬಾ ಇಷ್ಟ, ಅದಕ್ಕಾಗಿಯೇ ನಾನು ಮುತ್ತು ಕೊಟ್ಟೆ" ಎಂದು ಕಿರುಚುತ್ತಿರುವುದು ಕೇಳಿಬಂದಿದೆ.
ಮಂಜು ವಾರಿಯರ್‌ಗೆ ಫ್ಯಾನ್ಸ್ ಮುತ್ತಿಟ್ಟ ವಿಡಿಯೋ
A female fan surprised Malayalam actress #ManjuWarrier with an unexpected #Lipkiss at a public event 🤯 pic.twitter.com/yeu3N9uywg
— Milagro Movies (@MilagroMovies) April 6, 2026
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಘಟನೆಯು ಮಾರ್ಚ್ 15 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ. "ಯಾರೇ ಆಗಿರಲಿ, ಹೀಗೆ ಬಲವಂತವಾಗಿ ಅಪ್ಪಿಕೊಳ್ಳುವುದು ಅಥವಾ ಮುತ್ತಿಕ್ಕುವುದು ಒಪ್ಪುವಂತಹದ್ದಲ್ಲ. ಇದನ್ನು ಕೇವಲ ಅಭಿಮಾನ ಎಂದು ತಳ್ಳಿಹಾಕಬಾರದು" ಎಂದು ಪ್ರಶ್ನೆ ಮಾಡಲಾಗುತ್ತಿದೆ.
ಇನ್ನು, ಈಚೆಗಷ್ಟೇ ನಟಿ ಹನಿ ರೋಸ್ ಅವರು ಕೇರಳದಲ್ಲಿ ಶಾಪಿಂಗ್ ಮಾಲ್ ಉದ್ಘಾಟನೆಗೆ ಹೋದಾಗ ಕಹಿ ಅನುಭವ ಎದುರಿಸಿದ್ದರು. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅವರೊಂದಿಗೆ ಸೊಂಟವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಂತಹ ವ್ಯಕ್ತಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದರು.