ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸಿದ್ದ 'ಪೇಟ್ರಿಯಾಟ್' ಸಿನಿಮಾವು ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಲಯಾಳಂ ಸಿನಿಮಾರಂಗದ ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸಿದ್ದರಿಂದ ಈ ಸಿನಿಮಾಗೆ ದೊಡ್ಡಮಟ್ಟದ ಹೈಪ್ ಸಿಕ್ಕಿತ್ತು. ಥಿಯೇಟರ್‌ನಲ್ಲಿ ರಿಲೀಸ್ ಆದ 'ಪೇಟ್ರಿಯಾಟ್' ಸಿನಿಮಾ ಇದೀಗ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.
'ಪೇಟ್ರಿಯಾಟ್' ಎಲ್ಲಿ ಸ್ಟ್ರೀಮಿಂಗ್ ಆಗತ್ತೆ?
ಥಿಯೇಟರ್‌ನಲ್ಲಿ ಬಿಡುಗಡೆಯಾದ ಕೇವಲ ಒಂದು ತಿಂಗಳ ಅವಧಿಯಲ್ಲೇ 'ಪೇಟ್ರಿಯಾಟ್' ಡಿಜಿಟಲ್ ವೇದಿಕೆಯಲ್ಲಿ ಅಬ್ಬರಿಸಲು ಸಿದ್ಧವಾಗಿದೆ. ಜೀ5 ಮಲಯಾಳಂ (Zee5 Malayalam) ಸಂಸ್ಥೆಯು ಶುಕ್ರವಾರದಂದು ಅಧಿಕೃತವಾಗಿ ಪ್ರಕಟಿಸಿದ್ದು, ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ನಟನೆಯ ಈ ಸಿನಿಮಾ ಜೂನ್ 5 ರಿಂದ ಜೀ5 ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿದೆ.
"ಬಹುನಿರೀಕ್ಷಿತ ಮಲಯಾಳಂ ಸ್ಪೈ ಪೊಲಿಟಿಕಲ್ ಥ್ರಿಲ್ಲರ್ 'ಪೇಟ್ರಿಯಾಟ್'. ಚಿತ್ರರಂಗದ ದಂತಕಥೆಗಳಾದ ಬಿಗ್ ಮಮ್ಮುಟ್ಟಿ-ಮೋಹನ್‌ಲಾಲ್ ನಡುವಿನ ತೀವ್ರ ಅಧಿಕಾರ, ರಾಜಕೀಯ ಮತ್ತು ರಹಸ್ಯಗಳ ಯುದ್ಧ. ಜೂನ್ 5 ರಿಂದ ಜೀ5 ಮಲಯಾಳಂನಲ್ಲಿ ಪ್ರೀಮಿಯರ್ ಆಗಲಿದೆ" ಎಂದು ಜೀ5 ಬರೆದುಕೊಂಡಿದೆ.
ಮೋಹನ್‌ಲಾಲ್ ಮಗ ಪ್ರಣವ್ ಜೊತೆ ಕಲ್ಯಾಣಿ ಕಲ್ಯಾಣ; ʻಇದೆಲ್ಲಾ ಶುದ್ಧ ಸುಳ್ಳುʼ ಎಂದ ನಟಿಯ ತಾಯಿ ಲಿಸ್ಸಿ
'ಪೇಟ್ರಿಯಾಟ್' ಚಿತ್ರದಲ್ಲಿ ಫಹಾದ್ ಫಾಸಿಲ್, ನಯನತಾರಾ, ಕುಂಚಾಕೊ ಬೋಬನ್, ರೇವತಿ, ದರ್ಶನಾ ರಾಜೇಂದ್ರನ್ ಮತ್ತು ರಾಜೀವ್ ಮೆನನ್ ಸೇರಿದಂತೆ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರು ನಟಿಸಿದ್ದರು. ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆ ಪಡೆದ ಈ ಬಿಗ್ ಬಜೆಟ್ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಸದ್ಯ ಒಟಿಟಿಯಲ್ಲಿ ಮಲಯಾಳಂ ಜೊತೆಗೆ ಈ ಚಿತ್ರವು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ.
ಅಭಿಮಾನಿಗಳು ಏನಂದ್ರು?
ಒಟಿಟಿ ಬಿಡುಗಡೆಯ ಈ ಪ್ರಕಟಣೆಯು ಅಭಿಮಾನಿಗಳಲ್ಲಿ ಮತ್ತೆ ಸಿನಿಮಾದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದವರು ತಮ್ಮ ನಿರಾಶೆಯನ್ನು ಹೊರಹಾಕುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, "ಅಬ್ಬಾ.. ಇದೊಂದು ನಿದ್ರೆ ಬರಿಸುವ ಮಾತ್ರೆ.." ಎಂದು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು "ಇದು 100 ಕೋಟಿ ರೂಪಾಯಿ ಗಳಿಕೆಯನ್ನೂ ಮಾಡಲಿಲ್ಲ" ಎಂದಿದ್ದಾರೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, 'ಪೇಟ್ರಿಯಾಟ್' ತನ್ನ ಒಟ್ಟು ಪ್ರದರ್ಶನದಲ್ಲಿ ವಿಶ್ವಾದ್ಯಂತ ಕೇವಲ 79.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. "ಮಮ್ಮುಟ್ಟಿ ಅವರಿಗೆ ಸಣ್ಣ ಬಜೆಟ್ ಸಿನಿಮಾಗಳೇ ಸೂಕ್ತ" ಎಂದು ಕೆಲವರು ಅಭಿಪ್ರಾಯಪಟ್ಟರೆ, ಮತ್ತೊಬ್ಬರು "ಚಿತ್ರರಂಗದ ಇಬ್ಬರು ದೊಡ್ಡ ನಾಯಕರನ್ನು ಬಳಸಿಕೊಳ್ಳುವಲ್ಲಿ ಚಿತ್ರತಂಡಕ್ಕೆ ಸಿಕ್ಕಿದ್ದ ದೊಡ್ಡ ಅವಕಾಶವೊಂದು ಕೈತಪ್ಪಿಹೋಯಿತು" ಎಂದು ಹೇಳಿಕೊಂಡಿದ್ದಾರೆ.
'ಪೇಟ್ರಿಯಾಟ್' ಸಿನಿಮಾವನ್ನು ಮಹೇಶ್ ನಾರಾಯಣನ್ ನಿರ್ದೇಶಿಸಿದ್ದಾರೆ. ಆಂಟೊ ಜೋಸೆಫ್ ಮತ್ತು ಕೆ.ಜಿ. ಅನಿಲ್ ಕುಮಾರ್ ಜಂಟಿಯಾಗಿ ಸುಮಾರು 100 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದ ಕಥೆಯು ದೇಶದ ಭದ್ರತೆ, ಗುಪ್ತಚರ ಅಧಿಕಾರಿಗಳ ಸುತ್ತ ಸುತ್ತುತ್ತದೆ.